ನವದೆಹಲಿ, ಮೇ ೨೯,ದೇಶದಲ್ಲಿ ಪ್ರಸ್ತುತ ಜಾರಿಯಲ್ಲಿರುವ ೪ನೇ ಹಂತದ ಲಾಕ್ ಡೌನ್ ನಿರ್ಬಂಧಗಳು ಇದೇ ೩೧ಕ್ಕೆ ಕೊನೆಗೊಳ್ಳಲಿದ್ದು, ಲಾಕ್ ಡೌನ್ ಮುಂದುವರಿಸಬೇಕೇ ಅಥವಾ ಕೊನೆಗೊಳಿಸಬೇಕೆ..? ಎಂಬ ಬಗ್ಗೆ ಕೇಂದ್ರ ಗೃಹ ವ್ಯವಹಾರಗಳ ಖಾತೆ ಸಚಿವ ಅಮಿತ್ ಶಾ ಅವರು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಅಭಿಪ್ರಾಯ ಕೋರಿದ್ದಾರೆ ಎಂದು ಅಧಿಕೃತಮೂಲಗಳು ತಿಳಿಸಿವೆ. ದೇಶದಲ್ಲಿ ಇನ್ನು ಮುಂದೆ ಲಾಕ್ ಡೌನ್ ನಿರ್ಬಂಧಗಳು ಯಾವ ಸ್ವರೂಪದಲ್ಲಿ ಮುಂದುವರಿಸಬೇಕು ಇಲ್ಲವೇ ಕೊನೆಗೊಳಿಸಬೇಕೆ ? ಎಂಬ ಬಗ್ಗೆ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು ತಮ್ಮ ಅಭಿಪ್ರಾಯಗಳನ್ನು ಕೋರಿದ್ದಾರೆ.
ಈ ನಡುವೆ ಪ್ರಧಾನ ಮಂತ್ರಿಗಳ ಕಾರ್ಯಾಲಯ ಜೂನ್ ೧ ರಿಂದ ಲಾಕ್‌ಡೌನ್ ನಿರ್ಬಂಧ ಅವಧಿಯನ್ನು ಪರಿಷ್ಕರಿಸಲು ಪರಿಶೀಲಿಸುತ್ತಿದೆ. ಕೇಂದ್ರ ಸಂಪುಟ ಕ್ಯಾಬಿನೆಟ್ ಕಾರ್ಯದರ್ಶಿ ರಾಜ್ಯಗಳ ಮುಖ್ಯಕಾರ್ಯದರ್ಶಿಗಳೊಂದಿಗೆ ಸಂಪರ್ಕ ಸಾಧಿಸಿ ಅಭಿಪ್ರಾಯ ಪಡೆದಿದ್ದರಾರೆ. ಆದರೆ, ಗೃಹ ಸಚಿವ ಅಮಿತ್ ಶಾ ಅವರ ಕ್ರಮ ರಾಜಕೀಯವಾಗಿ ಅತ್ಯಂತ ಮಹತ್ವ ಪಡೆದುಕೊಂಡಿದೆ ಎನ್ನುತ್ತಿವೆ ಮೂಲಗಳು.ಪ್ರತಿಪಕ್ಷಗಳು ಹಾಗೂ ಕೆಲ ರಾಜ್ಯಗಳ ಮುಖ್ಯಮಂತ್ರಿಗಳು ಲಾಕ್ ಡೌನ್ ಕ್ರಮಗಳ ಕೇಂದ್ರ ಸರ್ಕಾರದ ನಿರ್ಧಾರ ಬಗ್ಗೆ ಅಸಮಧಾನ ವ್ಯಕ್ತ ಪಡಿಸಿರುವ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ತನ್ನ ನಿಲುವು ಬದಲಾಯಿಸಿಕೊಂಡಿದೆ. ಲಾಕ್ ಡೌನ್ ಬಗ್ಗೆ ಮುಂದಿನ ಕ್ರಮ ರಾಜಕೀಯ ನಿರ್ಧಾರವಾಗಲಿದೆ ಎಂದು ಗೃಹ ಸಚಿವಾಲಯದ ಮೂಲಗಳು ಹೇಳಿವೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆಯಡಿ ಲಾಕ್ ಡೌನ್ ಮುಂದುವರಿಸುವುದು ಸೇರಿದಂತೆ ಹಲವು ಆಯ್ಕೆಗಳು ಕೇಂದ್ರ ಸರ್ಕಾರದ ಮುಂದಿವೆ. ಈ ಕಾಯ್ದೆ ಆರೋಗ್ಯಕ್ಕೆ ಸಂಬಂಧಿಸಿದಂತೆ ಎಲ್ಲಾ ನಿರ್ಧಾರ ಕೈಗೊಳ್ಳು ಕೇಂದ್ರ ಸರ್ಕಾರಕ್ಕೆ ಅಧಿಕಾರ ನೀಡುತ್ತದೆ.