ಸ್ಥಳೀಯ ಕಲಾವಿದರಿಗೆ ಅವಕಾಶ ನೀಡಿ ಪ್ರೋತ್ಸಾಹಿಸಬೇಕು: ಪೋಲಾ ಪ್ರವೀಣ್ ಕುಮಾರ್

ಸ್ಥಳೀಯ ಕಲಾವಿದರಿಗೆ ಅವಕಾಶ ನೀಡಿ ಪ್ರೋತ್ಸಾಹಿಸಬೇಕು: ಪೋಲಾ ಪ್ರವೀಣ್ ಕುಮಾರ್  Local artists should be given opportunities and encouraged: Pola Praveen Kumar


ಬಳ್ಳಾರಿ, ಸೆ.14: ಚಿತ್ರ ನಿರ್ಮಾಣಕ್ಕಿಂತ ಅದನ್ನು ಉತ್ತಮ ರೀತಿಯಲ್ಲಿ ಪ್ರಚಾರ ಮಾಡುವುದು ಮುಖ್ಯ. ಚಿತ್ರ ನಿರ್ಮಿಸಿದ ಬಳಿಕ ಜನರನ್ನು ತಲುಪಿಸುವ ಜವಾಬ್ದಾರಿ ನಿರ್ಮಾಪಕರ ಮೇಲಿದೆ. ಸ್ಥಳೀಯ ಕಲಾವಿದರಿಗೆ ಅವಕಾಶ ನೀಡಿ ಅವರ ಪ್ರತಿಭೆಯನ್ನು ಬೆಳೆಸುವ ಅಗತ್ಯವಿದೆ ಎಂದು ಉದ್ಯಮಿ ಹಾಗೂ ಚಿತ್ರ ನಿರ್ಮಾಪಕ ಪೋಲಾ ಪ್ರವೀಣ್ ಕುಮಾರ್ ಹೇಳಿದರು.  

ನಗರದ ಪೋಲಾ ಪ್ಯಾರಡೈಸ್ ಹೋಟೆಲ್ನಲ್ಲಿ ಕೆಎಸ್‌ಆರ್ ಕ್ರಿಯೇಷನ್ಸ್‌ ವತಿಯಿಂದ ಸ್ಥಳೀಯ ಪ್ರತಿಭೆಗಳು ಸೇರಿ ನಿರ್ಮಿಸಿರುವ ಪಕ್ಕಾ ಲವ್ ಚಲನಚಿತ್ರದ ಟೈಟಲ್ ಹಾಗೂ ಹಾಡು ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.  

ಸ್ಥಳೀಯ ಕಲಾವಿದರು ತಮ್ಮ ಪ್ರತಿಭೆಗಾಗಿ ದೂರದ ಹೈದರಾಬಾದ್ ಅಥವಾ ಬೆಂಗಳೂರಿಗೆ ತೆರಳಬೇಕಿಲ್ಲ. ಜಿಲ್ಲೆಯಲ್ಲಿಯೇ ಅವರಿಗೆ ಅವಕಾಶ ಕಲ್ಪಿಸಿ ಪ್ರೋತ್ಸಾಹಿಸಬೇಕು. ತಮ್ಮನ್ನೂ ಒಳಗೊಂಡಂತೆ ಜಿಲ್ಲೆಯ ಚಲನಚಿತ್ರ ನಿರ್ದೇಶಕರು ಹಾಗೂ ನಿರ್ಮಾಪಕರು ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಿದ್ದಾರೆ ಎಂದರು.  

ಪಕ್ಕಾ ಲವ್ ಚಿತ್ರವು ಎಲ್ಲರೂ ತಮ್ಮದೇ ಚಿತ್ರ ಎಂಬ ಭಾವನೆಯಿಂದ ನೋಡಬಹುದಾದ ಹಾಗೂ ಪ್ರತಿಯೊಬ್ಬರಿಗೂ ತಮ್ಮದೇ ಪಾತ್ರವಿದೆ ಎಂಬ ಅನುಭವ ನೀಡುವ ಜನಸಾಮಾನ್ಯರ ಚಿತ್ರವಾಗಿದೆ. ಈಗಾಗಲೇ ಚಿತ್ರದ ಸುಮಾರು 30ರಷ್ಟು ಶೂಟಿಂಗ್ ಪೂರ್ಣಗೊಂಡಿದ್ದು, ಉಳಿದ ಚಿತ್ರೀಕರಣ ಬಳ್ಳಾರಿ ಮತ್ತು ಬೆಂಗಳೂರಿನಲ್ಲಿ ನಡೆಯಲಿದೆ ಎಂದರು.  ಚಿತ್ರವನ್ನು ಚಿತ್ರಮಂದಿರಗಳಲ್ಲಿ ವೀಕ್ಷಿಸಿ ಪ್ರೋತ್ಸಾಹಿಸುವಂತೆ ನಿರ್ದೇಶಕ ಕೋಳೂರು ರಾಜಶೇಖರ್ ಮನವಿ ಮಾಡಿದರು.  

ಚಿತ್ರದ ನಾಯಕ ನಟ ಅವಿನಾಶ್ ಮಾತನಾಡಿ, ಏಳು ವರ್ಷಗಳಿಂದ ಚಿತ್ರರಂಗದಲ್ಲಿದ್ದು, ತಲವಾರ್ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದೇನೆ. ರಾಜಶೇಖರ್ ಅವರ ಕಥೆ ಇಷ್ಟವಾದ ಕಾರಣ ಈ ಚಿತ್ರದಲ್ಲಿ ನಟಿಸುತ್ತಿದ್ದು, ಚಿತ್ರ ಯಶಸ್ವಿಯಾಗುವ ವಿಶ್ವಾಸವಿದೆ ಎಂದರು.  ಚಿತ್ರದ ನಾಯಕಿಯಾಗಿ ಅನುಷಾ ನಟಿಸುತ್ತಿದ್ದು, ಸುಭಾಷ್ ನೃತ್ಯ ನಿರ್ದೇಶನ ಮಾಡುತ್ತಿದ್ದಾರೆ. ಕೋಳೂರು ರಾಜಶೇಖರ್ ನಿರ್ದೇಶನ, ಪ್ರಾಣೇಶ್ ನಿರ್ಮಾಣದ ಜವಾಬ್ದಾರಿ ವಹಿಸಿಕೊಂಡಿದ್ದಾರೆ.