ಅರಿವು ಆದರ್ಶಗಳಿಂದ ಬದುಕು ಸಮೃದ್ಧಗೊಳ್ಳಬೇಕು: ಡಾ. ವೀರಸೋಮೇಶ್ವರ ಜಗದ್ಗುರು

ಅರಿವು ಆದರ್ಶಗಳಿಂದ ಬದುಕು ಸಮೃದ್ಧಗೊಳ್ಳಬೇಕು: ಡಾ. ವೀರಸೋಮೇಶ್ವರ ಜಗದ್ಗುರು Life should be enriched with knowledge and ideals: Dr. Veerasomeshwara Jagadguru

ರಾಣೆಬೆನ್ನೂರು ಮಾರ್ಚ27:   ಮನುಷ್ಯ ಜೀವನ ಪವಿತ್ರವಾದುದು. ಜನ್ಮ ಜನ್ಮಾಂತರದ ಪುಣ್ಯದ ಫಲದಿಂದ ಮಾನವ ಜೀವನ ಪ್ರಾಪ್ತವಾಗಿದೆ. ಅರಿವು ಆದರ್ಶಗಳಿಂದ ಬದುಕು ಸಮೃದ್ಧಗೊಳ್ಳಬೇಕು. ಕ್ರಿಯಾಶೀಲ ಜೀವನ ಶ್ರೇಯಸ್ಸಿಗೆ ಮೂಲವೆಂದು ಬಾಳೆಹೊನ್ನೂರು ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.   

  ಅವರು ಶುಕ್ರವಾರ ತಾಲೂಕಿನ ಲಿಂಗದಹಳ್ಳಿ ಹಿರೇಮಠದ ಡಾಽಽ ವೀರಭದ್ರ ಶಿವಾಚಾರ್ಯ ಸ್ವಾಮಿಗಳವರ ಷಷ್ಠಬ್ದಿ ಅಂಗವಾಗಿ ನೂರೆಂಟು ಮಂಟಪ ಪೂಜಾ ಹಾಗೂ ಜನ ಜಾಗೃತಿ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.   

ಮನುಷ್ಯನಲ್ಲಿ ಒಳ್ಳೆಯ ಮತ್ತು ಕೆಟ್ಟ ಎರಡು ಗುಣಗಳಿವೆ. ಒಳ್ಳೆಯವರ ಒಡನಾಟದಲ್ಲಿ ಬಾಳಿದರೆ ಜೀವನ ವಿಕಾಸಗೊಳ್ಳುವುದು. ದುರ್ಜನರ ಒಡನಾಟದಲ್ಲಿ ಬಾಳಿದರೆ ಬದುಕು ಸರ್ವ ನಾಶವಾಗುತ್ತದೆ. ಯಾವ ವಿಶ್ವಾಸ ಹೋದರೂ ಚಿಂತೆಯಿಲ್ಲ. ಆದರೆ ಆತ್ಮ ವಿಶ್ವಾಸ ಕಳೆದುಕೊಳ್ಳಬಾರದು. ದೇಹದ ಬಲ ಉಡುಗಿದರೂ ಚಿಂತಿಸಬೇಕಾಗಿಲ್ಲ. ಆದರೆ ಛಲ ನಿಷ್ಠೆಗಳು ಉಡುಗಬಾರದು.

ಮನುಷ್ಯ ಜೀವನದಲ್ಲಿ ದೇಹವನ್ನು ದುಡಿಮೆಗೆ ಮತ್ತು ಮನಸ್ಸನ್ನು ಭಗವಂತನಿಗೆ ಅರ​‍್ಿಸಿ ನಡೆದಾಗ ಜೀವನ ಉಜ್ವಲಗೊಳ್ಳುವುದು. ಮಾತನಾಡುವುದು ಸಾಧನೆಯಲ್ಲ. ಸಾಧನೆ ಮಾತನಾಡಬೇಕು. ಸಾಧನೆಯಿಲ್ಲದೇ ಸತ್ತರೆ ಸಾವಿಗೆ ಅವಮಾನ. ಆದರ್ಶಗಳಿಲ್ಲದೇ ಬದುಕಿದರೆ ಬದುಕಿಗೆ ಅವಮಾನ ಎಂದು ಸ್ವಾಮಿ ವಿವೇಕಾನಂದರು ಎಚ್ಚರಿಸಿದ್ದಾರೆ. ಜಗದ್ಗುರು ರೇಣುಕಾರ್ಯರು ಕಾಯಕವೇ ಕಳಾ ಚೈತನ್ಯ ಎಂದು ಕಾಯಕದ ಹಿರಿಮೆಯನ್ನು ಬೋಧಿಸಿದ್ದಾರೆ. ಲಿಂಗದಹಳ್ಳಿ ಹಿರೇಮಠದ ಡಾಽಽ ವೀರಭದ್ರ ಶಿವಾಚಾರ್ಯ ಸ್ವಾಮಿಗಳು ಸದ್ದು ಗದ್ದಲವಿಲ್ಲದೇ ಅಪಾರ ಸಾಧನೆ ಮಾಡಿದ್ದಾರೆಂದು ಹರುಷ ವ್ಯಕ್ತಪಡಿಸಿ ಅವರಿಗೆ ಪೀಠದಿಂದ ರೇಶ್ಮೆ ಮಡಿ ಸ್ಮರಣಿಕೆ ಫಲ ಪುಷ್ಪದೊಂದಿಗೆ ಶುಭ ಹಾರೈಸಿದರು.    

  ಸಾನ್ನಿಧ್ಯ ವಹಿಸಿದ  ಕಾಶಿ ಡಾ. ಚಂದ್ರಶೇಖರ ಜಗದ್ಗುರುಗಳು ತಮ್ಮ ಆಶೀರ್ವಚನದಲ್ಲಿ ಮನುಷ್ಯ ಜೀವನದಲ್ಲಿ ಧರ್ಮ ಯಶಸ್ಸು ನೀತಿ ದಕ್ಷತೆ ಮತ್ತು ಒಳ್ಳೆಯ ಮಾತು ಅಳವಡಿಸಿಕೊಂಡು ಬಾಳಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ. ಪ್ರಾಣ ಯೌವನ ಕಾಲ ಒಮ್ಮೆ ಕಳೆದರೆ ಮತ್ತೆಂದೂ ತಿರುಗಿ ಬರಲಾರದು. ಆತ್ಮ ಸಾಕ್ಷಿ ಉತ್ತಮ ಆರೋಗ್ಯ ಮತ್ತು ಸ್ವಾತಂತ್ರ್ಯ ಇವು ಮೂರು ಸಂತೋಷದ ಮೂಲಗಳು. ಸದ್ವಿದ್ಯೆ, ಉತ್ತಮ ಸಂಬಂಧ ಆದರ್ಶ ಸ್ನೇಹ ನಮ್ಮೊಂದಿಗೆ ಇದ್ದರೆ ಬಾಳೆಲ್ಲ ಸುಖಮಯವಾಗುತ್ತದೆ. ಲಿಂಗದಹಳ್ಳಿ ಹಿರೇಮಠದ ಡಾಽಽ ವೀರಭದ್ರ ಶಿವಾಚಾರ್ಯ ಸ್ವಾಮಿಗಳು ಈ ಎಲ್ಲ ಗುಣ ಧರ್ಮಗಳನ್ನು ಹೊಂದಿದ್ದಾರೆಂದು ಸಂತೋಷ ವ್ಯಕ್ತಪಡಿಸಿದರು.   

ನೇತೃತ್ವ ವಹಿಸಿದ ಲಿಂಗದಹಳ್ಳಿ ಹಿರೇಮಠದ ಡಾ.ವೀರಭದ್ರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಪೂಜ್ಯ ಜಗದ್ಗುರುಗಳ ಆಶೀರ್ವಾದದ ಬಲ ಮತ್ತು ಭಕ್ತರ ಸಹಕಾರದಿಂದ ಮಠದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಈ ಸಮಾರಂಭಕ್ಕೆ ಪಂಚ ಪೀಠಾಧೀಶರು ಆಗಮಿಸಿ ಆಶೀರ್ವದಿಸಿರುವುದು ತಮಗೆ ಹೆಚ್ಚಿನ ಬಲ ತಂದಿದೆ ಎಂದರು.  

ಅ.ಭಾ.ವೀ.ಶಿವಾಚಾರ್ಯ ಸಂಸ್ಥೆ ಗೌರವಾಧ್ಯಕ್ಷರಾದ ಎಡೆಯೂರು ರೇಣುಕ ಶಿವಾಚಾರ್ಯರು ಹಾಗೂ ಮುಕ್ತಿಮಂದಿರದ ವಿಮಲ ರೇಣುಕ ಮುಕ್ತಿಮುನಿ ಶಿವಾಚಾರ್ಯರು ನೇತೃತ್ವ ವಹಿಸಿದ್ದರು. ಅ.ಭಾ.ವೀ.ಶಿವಾಚಾರ್ಯ ಸಂಸ್ಥೆ ಅಧ್ಯಕ್ಷರಾದ ಸಿಂದಗಿ ಡಾಽಽಪ್ರಭುಸಾರಂಗದೇವ ಶಿವಾಚಾರ್ಯರು ಅಧ್ಯಕ್ಷತೆ ವಹಿಸಿದ್ದರು. ಹುಕ್ಕೇರಿ ಡಾಽಽಚಂದ್ರಶೇಖರ ಶಿವಾಚಾರ್ಯರು, ಎಮ್ಮಿಗನೂರು ವಾಮದೇವ ಮಹಾಂತ ಶಿವಾಚಾರ್ಯರು ಉಪದೇಶಾಮೃತ ನೀಡಿದರು.

ಶಿವಗಂಗಾ ಡಾ.ಮಲಯ ಶಾಂತಮುನಿ ಶಿವಾಚಾರ್ಯರು, ಮಳಲಿ ಡಾ.ನಾಗಭೂಷಣ ಶಿವಾಚಾರ್ಯರು, ಹರಪನಹಳ್ಳಿ ವರಸದ್ಯೋಜಾತ ಶಿವಾಚಾರ್ಯರು, ಹಂಪಸಾಗರದ ಶಿವಲಿಂಗ ರುದ್ರಮುನಿ ಶಿವಾಚಾರ್ಯರು, ಬಿಳಕಿಯ ರಾಚೋಟೇಶ್ವರ ಶಿವಾಚಾರ್ಯರು ಸೇರಿದಂತೆ ಅನೇಕ ಮಠಾಧೀಶರು ಪಾಲ್ಗೊಂಡಿದ್ದರು. ಜಿಲ್ಲಾ ಪಂಚಾಯತ ಮಾಜಿ ಉಪಾಧ್ಯಕ್ಷ ಮಂಜುನಾಥ ಓಲೇಕಾರ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿ ಉಭಯ ಜಗದ್ಗುರುಗಳ ಆಶೀರ್ವಾದ ಪಡೆದರು. ರಾಣೆಬೆನ್ನೂರು ಶಿವಯೋಗಿ ಶಿವಾಚಾರ್ಯರು ನಿರೂಪಿಸಿದರು.  

 ಷಷ್ಠ್ಯಬ್ಧಿ ಅಂಗವಾಗಿ ಬೆಳಿಗೆ ವೀರಭದ್ರ ಶ್ರೀಗಳಿಗೆ ಜಗದ್ಗುರುಗಳ ಸಾನ್ನಿಧ್ಯದಲ್ಲಿ ಪಂಚಾಮೃತ ಮಂಗಲಸ್ನಾನ ಜರುಗಿತು. ಶ್ರೀ ಮಠದ ಆವರಣದಲ್ಲಿ ನಾಡಿನ ಹರ ಗುರು ಚರಮೂರ್ತಿಗಳ ನೂರೆಂಟು ಮಂಟಪ ಪೂಜಾ ವೈಭವದಿಂದ ಜರುಗಿತು. ಪ್ರತಿಯೊಬ್ಬ ಶ್ರೀಗಳಿಗೆ ಒಂದೊಂದು ಜೋಡಿ ದಂಪತಿಗಳು ಪಾದಪೂಜಾ ಮಾಡಿ ಫಲ ಪುಷ್ಪ ತಾಂಬೂಲ ಸಮರ​‍್ಿಸಿ ಆಶೀರ್ವಾದ ಪಡೆದರು. ಆಗಮಿಸಿದ ಸಕಲ ಸದ್ಭಕ್ತರಿಗೆ ಅನ್ನ ದಾಸೋಹ ಜರುಗಿತು.