ಬೇಸಿಗೆ ಶಿಬಿರಗಳು ಮಕ್ಕಳಲ್ಲಿಯ ಸೃಜನಶೀಲತೆಯನ್ನು ಹೆಚ್ಚಿಸುತ್ತವೆ: ಪ್ರೊ.ಲಲಿತಾ ನಾಯಕ

ಬೇಸಿಗೆ ಶಿಬಿರಗಳು ಮಕ್ಕಳಲ್ಲಿಯ ಸೃಜನಶೀಲತೆಯನ್ನು ಹೆಚ್ಚಿಸುತ್ತವೆ: ಪ್ರೊ.ಲಲಿತಾ ನಾಯಕ  Summer camps enhance creativity in children: Prof. Lalita Nayak

ಲೋಕದರ್ಶನ ವರದಿ 

ಧಾರವಾಡ 04: ಇಂದಿನ ಮಕ್ಕಳಲ್ಲಿ ಮೊಬೈಲ್ ವ್ಯಸನ ಹೆಚ್ಚಾಗಿರುವ ಸಂದರ್ಭದಲ್ಲಿ ಮಕ್ಕಳು ಬೇಸಿಗೆ ಶಿಬಿರದಲ್ಲಿ ಭಾಗವಹಿಸಿದಾಗ ಕೆಲಕಾಲವಾದರೂ ಮೊಬೈಲ್ ಪೋನನಿಂದ ದೂರವಿದ್ದು, ಅವರಲ್ಲಿ ಸೃಜನಶೀಲತೆಯು ಹೆಚ್ಚಾಗುವುದು ಎಂದು ಚಿತ್ರದುರ್ಗ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಮಾಜಕಾರ್ಯ ಪ್ರಾಧ್ಯಾಪಕಿ ಪ್ರೊ.ಲಿಲಿತಾ ನಾಯಕ ಅಭಿಪ್ರಾಯಪಟ್ಟರು.  

ಅವರು ಧಾರವಾಡದ ರೈಜಿಂಗ್ ಸ್ಟಾರ್ಸ್‌ ಆರ್ಟ್‌ ಮತ್ತು ಕಲ್ಚರಲ್ ಅಕಾಡೆಯು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಲೇಕ್ ಸಿಟಿಯ ಸಾಂಸ್ಕೃತಿಕ ಭವನದಲ್ಲಿ ಆಯೋಜಿಸಿದ್ದ ಮಕ್ಕಳ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಇಂಥಹ ಶಿಬಿರ ಮತ್ತು ಸಾಂಸ್ಕೃತಿಕ ಸಂಭ್ರಮದಂತಹ ವೇದಿಕೆ ಕಾರ್ಯಕ್ರಮಗಳು ಪ್ರೋತ್ಸಾಹದಾಯಕವಾಗಿವೆ. ಇಂದಿನ ಮಕ್ಕಳನ್ನು ಆದಷ್ಟು ಮೊಬೈಲ್ ಪೋನ್ ವ್ಯಸನದಿಂದ ಮುಕ್ತಗೊಳಿಸುವ ಕೆಲಸವು ಮೊದಲು ಪಾಲಕರು, ಪೋಷಕರಿಂದ ಆಗಬೇಕಾಗಿದೆ. ಅದಕ್ಕೆ ಪೂರಕವಾಗಿ ಇಂಥಹ ಶಿಬಿರ ಮತ್ತು ಕಾರ್ಯಕ್ರಮಗಳು ಸಹಕಾರಿಯಾಗಬೇಕು ಎಂದು ಹೇಳಿದರು. ವೇದಿಕೆಯಲ್ಲಿ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಿಂದ ಇತ್ತೀಚೆಗೆ ಗೌರವ ಡಾಕ್ಟರೇಟ್ ಪುರಸ್ಕೃತರಾದ ಹಿರಿಯ ಜಾನಪದ ಕಲಾವಿದೆ ಡಾ.ಪಾರ್ವತೆವ್ವ ಸಿದ್ದಪ್ಪ ಹೊಂಗಲ ಅವರಿಗೆ ಗೌರವಿಸಿ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ.ಪಾರ್ವತೆವ್ವ ಅವರು ಜನಪದರ ಉಸಿರಾಗಿದ್ದ ಜನಪದ ಸಾಹಿತ್ಯ, ಸಂಗೀತವನ್ನು ಹೊಸ ತಲೆಮಾರಿನವರಿಗೆ ಕಲಿಸಿ, ಉಳಿಸಿಕೊಳ್ಳಬೇಕಾಗಿದೆ ಎಂದು ಸಲಹೆ ನೀಡಿದರು. ರೈಜಿಂಗ್ ಸ್ಟಾರ್ಸ್‌ ಆರ್ಟ್‌ ಮತ್ತು ಕಲ್ಚರಲ್ ಅಕಾಡೆಯ ಅಧ್ಯಕ್ಷ ಡಾ.ಪ್ರಕಾಶ ಮಲ್ಲಿಗವಾಡ ಅವರು ಕಾರ್ಯಕ್ರಮದ ಆಧ್ಯಕ್ಷತೆಯನ್ನು ವಹಿಸಿಕೊಂಡು ಶಿಬಿರದ ಮಹತ್ವ, ವಿಶಿಷ್ಟತೆ, ಪಾಲ್ಗೊಳ್ಳುವಿಕೆ ಮುಂತಾದ ಅಂಶಗಳನ್ನು ವಿವರಿಸುತ್ತಾ ರೈಜಿಂಗ್ ಸ್ಟಾರ್ಸ್‌ ಅಕಾಡೆಮಿಯ ಕಾರ್ಯಚಟುವಟಿಕೆಗಳ ಕುರಿತು ಹೇಳಿದರು.  

ವೇದಿಕೆಯಲ್ಲಿ ಉಧ್ಯಮಿ ರಾಮಕೃಷ್ಣ ಕಾಂಬಳೆ, ಗೃಹರಕ್ಷಕ ದಳದ ಬೋಧಕ ತಿಮ್ಮಣ್ಣ ಬದಾಮಿ, ರಂಗಕರ್ಮಿ ಸಿದ್ಧರಾಮ ಹಿಪ್ಪರಗಿ, ಗಾಯಕ ಶಿವಾನಂದ ಅಮರಶೆಟ್ಟಿ, ಹಾಸ್ಯ ಕಲಾವಿದ ಮಲ್ಲಪ್ಪ ಹೊಂಗಲ ಮತ್ತಿತರು ಉಪಸ್ಥಿತರಿದ್ದರು. ನಂತರ ಶಿಬಿರಾರ್ಥಿಗಳಿಂದ ಯೋಗ, ಸಂಗೀತ, ಚಿತ್ರಕಲೆ, ಜನಪದ ನೃತ್ಯ, ನಾಟಕ ಮುಂತಾದ ಸಾಂಸ್ಕೃತಿಕ ಪ್ರದರ್ಶನಗಳು ಜರುಗಿದವು.  

ಶಿಬಿರಕ್ಕೆ ಆಗಮಿಸಿ ಮಕ್ಕಳಿಗೆ ವಿವಿಧ ಪ್ರಕಾರಗಳಲ್ಲಿ ತರಬೇತಿ ನೀಡಿದ ಸಂಪನ್ಮೂಲ ವ್ಯಕ್ತಿಗಳಾದ ಬೀಸಪ್ಪ, ಸೌಖ್ಯಶ್ರೀ ಮುಂತಾದವರನ್ನು ಸನ್ಮಾನಿಸಲಾಯಿತು. ವಿವಿಧ ಕ್ಷೇತ್ರಗಳ ಸಾಧಕರಾದ ರಾಜಕುಮಾರ ಟಿ.ಎಲ್‌., ದೇವರಾಜ ಮೇಗಲಮನಿ ಅವರನ್ನು ಸನ್ಮಾನಿಸಲಾಯಿತು.  ಪ್ರವೀಣ ಬಡಿಗೇರ ಸ್ವಾಗತಿಸಿದರು. ಸಂತೋಷ ಸಾಲಿಯಾನ ನಿರೂಪಿಸಿದರು. ವೈಶಾಲಿ, ಗೌತಮಿ, ಯಶೋಧರಾ ಸಹಕರಿಸಿದರು. ಅಶ್ವತ ಮಲ್ಲಿಗವಾಡ ವಂದಿಸಿದರು.