ಸಮಾಜ ಸೇವೆಯಿಂದ ಜೀವನ ಸಾರ್ಥಕ: ಡಾ. ವಿಜಯ ಹಂಚಿನಾಳ

ಸಮಾಜ ಸೇವೆಯಿಂದ ಜೀವನ ಸಾರ್ಥಕ: ಡಾ. ವಿಜಯ ಹಂಚಿನಾಳ Life is fulfilled through social service: Dr. Vijaya Hanchinal

ಲೋಕದರ್ಶನ ವರದಿ 

 ಮಹಾಲಿಂಗಪುರ 18: ಸಮಾಜದ ಅಭಿವೃದ್ಧಿಗೆ ಪ್ರತಿಯೊಬ್ಬರೂ ತಮ್ಮ ಕೈಲಾದ ಸೇವೆ ಸಲ್ಲಿಸಿದಾಗ ಮಾತ್ರ ಜೀವನ ಸಾರ್ಥಕವಾಗುತ್ತದೆ. ವ್ಯಕ್ತಿ ಎಷ್ಟೇ ಉನ್ನತ ಸ್ಥಾನಮಾನ, ಸಂಪತ್ತು ಹಾಗೂ ಪ್ರಗತಿ ಸಾಧಿಸಿದರೂ ಸಮಾಜದ ಋಣ ತೀರಿಸುವ ಮನೋಭಾವ ಹೊಂದಿದಾಗ ಮಾತ್ರ ಬದುಕಿಗೆ ನಿಜವಾದ ಅರ್ಥ ದೊರೆಯುತ್ತದೆ ಎಂದು ಖ್ಯಾತ ಹೃದಯರೋಗ ತಜ್ಞ ಡಾ. ವಿಜಯ ಹಂಚಿನಾಳ ಹೇಳಿದರು.  ನಗರದ ಶಾಂತಿನಿಕೇತನ ಕಾಲನಿಯಲ್ಲಿರುವ ವೈದ್ಯರ ನಿವಾಸದಲ್ಲಿ ನಡೆದ ಲಯನ್ಸ್‌ ಕ್ಲಬ್ ಆಫ್ ಮಹಾಲಿಂಗಪುರ ಟೌನ್ನ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.  

ಶಿಕ್ಷಣವು ಸಮಾಜ ಪರಿವರ್ತನೆಗೆ ಅತ್ಯಂತ ಶಕ್ತಿಶಾಲಿ ಸಾಧನವಾಗಿದೆ. ವಿದ್ಯಾವಂತ, ಸಂಸ್ಕಾರವಂತ ಹಾಗೂ ಸೇವಾ ಮನೋಭಾವ ಹೊಂದಿರುವ ಸಮಾಜವೇ ಸದೃಢ ರಾಷ್ಟ್ರ ನಿರ್ಮಾಣಕ್ಕೆ ಆಧಾರವಾಗುತ್ತದೆ. ಲಯನ್ಸ್‌ ಕ್ಲಬ್ನಂತಹ ಸೇವಾ ಸಂಸ್ಥೆಗಳು ಆರೋಗ್ಯ, ಶಿಕ್ಷಣ, ಪರಿಸರ ಸಂರಕ್ಷಣೆ, ಮಾನವೀಯತೆ ಹಾಗೂ ಸಾಮಾಜಿಕ ಸೇವೆಗಳ ಮೂಲಕ ಸಮಾಜದಲ್ಲಿ ಉತ್ತಮ ಬದಲಾವಣೆ ತರಲು ನಿರಂತರವಾಗಿ ಕಾರ್ಯನಿರ್ವಹಿಸುತ್ತಿವೆ ಎಂದರು.  

ಜನಸೇವೆಯಿಂದ ದೊರೆಯುವ ಆತ್ಮತೃಪ್ತಿ ಹಣ ಅಥವಾ ಅಧಿಕಾರದಿಂದ ಎಂದಿಗೂ ಸಿಗುವುದಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.  ಈ ಸಂದರ್ಭದಲ್ಲಿ ಲಯನ್ಸ್‌ ಕ್ಲಬ್ ಆಫ್ ಮಹಾಲಿಂಗಪುರ ಟೌನ್ನ ನೂತನ ಪದಾಧಿಕಾರಿಗಳ ಪದಗ್ರಹಣ ನೆರವೇರಿತು. ಮಕ್ಕಳ ತಜ್ಞ ಡಾ. ವಿಶ್ವನಾಥ ಗುಂಡಾ ಅಧ್ಯಕ್ಷರಾಗಿ, ರಾಜು ಎಸ್‌. ತಾಳಿಕೋಟಿ ಕಾರ್ಯದರ್ಶಿಯಾಗಿ, ವಿದ್ಯಾ ಶಿರೋಳ ಕೋಶಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದರು. ಶಕುಂತಲಾ ಶಂಶಿ ಹಾಗೂ ಡಾ. ವಿದ್ಯಾ ದಿನ್ನಿಮನಿ ಉಪಾಧ್ಯಕ್ಷರಾಗಿ, ಉಮೇಶ್ ಸಿದ್ದಾಳ ಆಡಳಿತಾಧಿಕಾರಿಯಾಗಿ ಆಯ್ಕೆಯಾದರು. ಲಯನ್ ಅಮೋಲ್ ನಾಯಕ್ ಅವರು ನೂತನ ಪದಾಧಿಕಾರಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿ ಅಧಿಕಾರ ಹಸ್ತಾಂತರ ಮಾಡಿದರು.