ಬೆಳಗಾವಿ 25: ಜೀವನದ ಉನ್ನತಿಗೆ ಮತ್ತು ಶಾಂತಿಯ ಬದುಕಿಗೆ ಧರ್ಮದ ಆದರ್ಶ ಮೌಲ್ಯಗಳ ಅರಿವು ಆಚರಣೆ ಮುಖ್ಯ. ಸುಖದ ಮೂಲ ಧರ್ಮದ ಪರಿಪಾಲನೆಯಲ್ಲಿದೆ. ಸತ್ಯ ಶುದ್ಧ ಧರ್ಮಾಚರಣೆಯಿಂದ ಬದುಕು ವಿಕಾಸಗೊಳ್ಳುವುದೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ಬುಧವಾರ ತಾಲೂಕಿನ ಮುತ್ನಾಳ ಹಿರೇಮಠದಲ್ಲಿ ಲಿಂ.ಶ್ರೀ ಕೇದಾರ ಶಾಂತಲಿಂಗ ಜಗದ್ಗುರುಗಳ ಮೂರ್ತಿ ಪ್ರತಿಷ್ಠಾಪನೆ ಅಂಗವಾಗಿ ಜರುಗಿದ ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಅಶಾಂತಿಯಿಂದ ತತ್ತರಿಸುತ್ತಿರುವ ಜೀವ ಜಗತ್ತಿಗೆ ಧರ್ಮವೊಂದೇ ಅಶಾಕಿರಣ. ಸಕಲ ಜೀವಾತ್ಮರಿಗೆ ಒಳಿತನ್ನೇ ಬಯಸಿದ ವೀರಶೈವ ಧರ್ಮದಲ್ಲಿ ಆದರ್ಶ ಮೌಲ್ಯಗಳನ್ನು ಕಾಣುತ್ತೇವೆ. ಅವರವರ ಧರ್ಮ ಅವರಿಗೆ ಶ್ರೇಷ್ಠ. ಆದರೆ ಇನ್ನೊಂದು ಧರ್ಮದವರೊಂದಿಗೆ ಸಹಿಷ್ಣುತಾ ಮನೋಭಾವನೆಯಿಂದ ನಡೆದು ಸಮಾಜದ ಸ್ವಾಸ್ಥ್ಯವನ್ನು ಕಾಪಾಡಬೇಕಾದುದು ಎಲ್ಲರ ಧರ್ಮ. ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ ಅಹಿಂಸಾಧಿ ಧ್ಯಾನ ಪರ್ಯಂತರವಾದ ದಶ ಧರ್ಮ ಸೂತ್ರಗಳು ಸಕಲರ ಬಾಳಿಗೆ ಬೆಳಕು ತೋರಿವೆ. ಲಿಂ.ಶ್ರೀ ಕೇದಾರ ಶಾಂತಲಿಂಗ ಜಗದ್ಗುರುಗಳು ಸರಳತೆಯ ಸಾಕಾರ ಮೂರ್ತಿಗಳಾಗಿ 14 ವರುಷಗಳವರೆಗೆ ಕೇದಾರ ಪೀಠವನ್ನು ಆರೋಹಣ ಮಾಡಿ ಭಕ್ತ ಸಂಕುಲಕ್ಕೆ ಒಳಿತನ್ನು ಬಯಸಿದ್ದನ್ನು ಯಾರೂ ಮರೆಯಲಾಗದು. ಅಂಥ ಪರಮ ಪೂಜ್ಯರ ಜನ್ಮ ಭೂಮಿ ಮುತ್ನಾಳ ಹಿರೇಮಠದಲ್ಲಿ ಅವರ ಮಂಗಲಮಯ ಶಿಲಾ ಮೂರ್ತಿಯನ್ನು ಗದ್ದಿಗೆಯ ಮೇಲೆ ಪ್ರತಿಷ್ಠಾಪಿಸಿರುವುದು ತಮಗೆ ಅತ್ಯಂತ ಸಂತೋಷ ತಂದಿದೆ ಎಂದ ಅವರು ಗ್ರಾಮದಲ್ಲಿ ಬಹು ಸಂಖ್ಯಾತರಾಗಿರುವ ಜೈನ ಸಮಾಜ ಬಾಂಧವರು ಸಹಕರಿಸಿ ಕಾರ್ಯಕ್ರಮ ಯಶಸ್ವಿಗಾಗಿ ಶ್ರಮಿಸಿದ್ದು ಅವರಲ್ಲಿರುವ ಧರ್ಮ ನಿಷ್ಠೆಗೆ ಸಾಕ್ಷಿಯಾಗಿದೆ ಎಂದರು.
ಸಾನ್ನಿಧ್ಯ ವಹಿಸಿದ ಶ್ರೀ ಕೇದಾರ ಭೀಮಾಶಂಕರ ಜಗದ್ಗುರುಗಳು ತಮ್ಮ ಆಶೀರ್ವಚನದಲ್ಲಿ ಪ್ರತಿಯೊಬ್ಬ ಮನುಷ್ಯ ಜೀವನದಲ್ಲಿ ಮೂರು ಋಣಗಳನ್ನು ತೀರಿಸಲೇಬೇಕು. ಹೆತ್ತ ತಂದೆ ತಾಯಿಗಳ ಋಣ ಮತ್ತು ಗುರು ಋಣ ತೀರಿಸಬೇಕು. ಮುತ್ನಾಳ ಗ್ರಾಮ ಚಿಕ್ಕದಾದರೂ ಭಕ್ತರ ಭಕ್ತಿ ದೊಡ್ಡದು. ಲಿಂ.ಶ್ರೀ ಕೇದಾರ ಶಾಂತಲಿಂಗ ಜಗದ್ಗುರುಗಳನ್ನಾಗಿ ಮಾಡಿದ ಕೀರ್ತಿ ಲಿಂ. ಶ್ರೀಮದ್ ರಂಭಾಪುರಿ ವೀರಗಂಗಾಧರ ಜಗದ್ಗುರುಗಳಿಗೆ ಸಲ್ಲುತ್ತದೆ. ಇಂದು ಅವರ ಮೂರ್ತಿ ಪ್ರತಿಷ್ಠಾಪನಾ ಸಂದರ್ಭದಲ್ಲಿ ಇಂದಿನ ಶ್ರೀ ರಂಭಾಪುರಿ ಜಗದ್ಗುರುಗಳು ಆಗಮಿಸಿರುವುದು ಉಭಯ ಪೀಠಗಳ ಬಾಂಧವ್ಯಕ್ಕೆ ಸಾಕ್ಷಿಯಾಗಿದೆ ಎಂದರು.
ಬೆಳಗಾವಿ ಸಂಸದ ಮಾಜಿ ಮುಖ್ಯ ಮಂತ್ರಿ ಜಗದೀಶ ಶೆಟ್ಟರ್ ಮಾತನಾಡಿ ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕೆ ಧರ್ಮ ಬಹಳ ಮುಖ್ಯ. ಅರಿವು ಆದರ್ಶಗಳನ್ನು ಬೆಳೆಸುವ ಗುರುವಿನ ಜವಾಬ್ದಾರಿ ಮಹತ್ವವಾದದ್ದು ಲಿಂ.ಶ್ರೀ ಕೇದಾರ ಶಾಂತಲಿಂಗ ಜಗದ್ಗುರುಗಳ ಜನ್ಮ ಭೂಮಿ ಮುತ್ನಾಳದಲ್ಲಿ ಬಹು ದೊಡ್ಡ ಕಾರ್ಯಕ್ರಮ ಸಂಯೋಜಿಸಿರುವುದು ಹೆಮ್ಮೆಯ ಸಂಗತಿ. ಲಿಂ. ಸುರೇಶ ಅಂಗಡಿಯವರು ಕೈಗೊಂಡ ಜಿಲ್ಲೆಯ ಅಭಿವೃದ್ಧಿ ಕಾರ್ಯಗಳನ್ನು ತಾವು ಮುಂದುವರಿಸಿ ಪೂರ್ಣಗೊಳಿಸಲಾಗುವುದೆಂದು ಭರವಸೆಯಿತ್ತರು.
ಮುತ್ನಾಳ ಹಿರೇಮಠದ ಶಿವಾನಂದ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ನಮ್ಮ ಬಹು ದಿನಗಳ ಕನಸು ನನಸಾಗಿದೆ. ಉಭಯ ಜಗದ್ಗುರುಗಳು ಆಗಮಿಸಿ ಮೂರ್ತಿ ಪ್ರತಿಷ್ಠಾಪನೆ ನೆರವೇರಿಸಿದ್ದು ಈ ಭಾಗದ ಭಕ್ತರ ಸೌಭಾಗ್ಯ ಎಂದರು. ಸುಳ್ಳ ಶಿವಸಿದ್ಧರಾಮೇಶ್ವರ ಶ್ರೀಗಳು, ಶಿರಕೋಳ ಗುರುಸಿದ್ಧೇಶ್ವರ ಶ್ರೀಗಳು, ಹುಕ್ಕೇರಿ ಚಂದ್ರಶೇಖರ ಶ್ರೀಗಳು, ಸಂಗೊಳ್ಳಿ ಗುರುಲಿಂಗ ಶ್ರೀಗಳು, ಕಣ್ವಕುಪ್ಪಿ ನಾಲ್ವಡಿ ಶಾಂತಲಿಂಗ ಶ್ರೀಗಳು, ಕಾರಂಜಾ ಗುರುಸಿದ್ಧ ಶ್ರೀಗಳು, ಅರಳಿಕಟ್ಟಿ ವಿರಕ್ತಮಠದ ಶ್ರೀಗಳು, ಗುರುಗುಂಟಾ ಮಠದ ಶ್ರೀಗಳು, ಮಾಜಿ ವಿಧಾನ ಪರಿಷತ್ ಸದಸ್ಯ ಮಹಂತೇಶ ಕವಟಗಿಮಠ ಉಪಸ್ಥಿತರಿದ್ದು ಶ್ರೀ ರಂಭಾಪುರಿ ಜಗದ್ಗುರುಗಳ ಆಶೀರ್ವಾದ ಪಡೆದರು.
ಸಮಾರಂಭಕ್ಕೂ ಮುನ್ನ ಶ್ರೀ ರಂಭಾಪುರಿ ಮತ್ತು ಶ್ರೀ ಕೇದಾರ ಜಗದ್ಗುರುಗಳವರನ್ನು ಸಾರೋಟ ಮೆರವಣಿಗೆ ಮೂಲಕ ಭಕ್ತಿಯಿಂದ ಬರಮಾಡಿಕೊಂಡರು. ಹಲವಾರು ಕಲಾ ತಂಡಗಳು, ಭಜನಾ ಮಂಡಳಿ, ಕುಂಭ ಹೊತ್ತ ಮಹಿಳೆಯರು, ಆರತಿ ಹಿಡಿದ ಸುಮಂಗಲೆಯರು ಪಾಲ್ಗೊಂಡು ಉತ್ಸವಕ್ಕೆ ಮೆರಗು ತಂದರು.