ಗ್ರಂಥಾಲಯಗಳು ಜ್ಞಾನ, ಚಿಂತನೆ ಮತ್ತು ವ್ಯಕ್ತಿತ್ವ ವಿಕಾಸದ ದೇಗುಲ: ಡಾ. ಅಸ್ಮಿತಾಜ್

ಗ್ರಂಥಾಲಯಗಳು ಜ್ಞಾನ, ಚಿಂತನೆ ಮತ್ತು ವ್ಯಕ್ತಿತ್ವ ವಿಕಾಸದ ದೇಗುಲ: ಡಾ. ಅಸ್ಮಿತಾಜ್  Libraries are temples of knowledge, thought, and personality development: Dr. Asmitaj

ಹುಲಕೋಟಿ, ಆ.13: ಗ್ರಂಥಾಲಯ ವಿಜ್ಞಾನಕ್ಕೆ ಡಾ. ಎಸ್‌.ಆರ್‌. ರಂಗನಾಥನ್ ಅವರು ನೀಡಿದ ಅಪಾರ ಕೊಡುಗೆಯನ್ನು ಸ್ಮರಿಸುವ ಸಲುವಾಗಿ ಪ್ರತಿವರ್ಷ ಆಗಸ್ಟ್‌ 12ರಂದು ರಾಷ್ಟ್ರೀಯ ಗ್ರಂಥಪಾಲಕರ ದಿನವನ್ನು ಆಚರಿಸಲಾಗುತ್ತಿದೆ. ಅವರ ಗ್ರಂಥಾಲಯ ವಿಜ್ಞಾನದ ಪಂಚಸೂತ್ರಗಳು ಹಾಗೂ ಕೋಲನ್ ವರ್ಗೀಕರಣ ಪದ್ಧತಿ ಇಂದಿಗೂ ಸ್ಮರಣೀಯ ಕೊಡುಗೆಗಳಾಗಿವೆ ಎಂದು ಗ್ರಂಥಾಲಯ ಸಹಾಯಕಿ ಡಾ. ಅಸ್ಮಿತಾಜ್ ಹೇಳಿದರು.  

ಹುಲಕೋಟಿಯ ಶ್ರೀ ಕೆ.ಎಚ್‌. ಪಾಟೀಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಐಕ್ಯೂಎಸಿ ಅಡಿಯಲ್ಲಿ ಆಯೋಜಿಸಿದ್ದ ಗ್ರಂಥಪಾಲಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಂಗನಾಥನ್ ಅವರ ಗ್ರಂಥಗಳನ್ನು ವಿದ್ಯಾರ್ಥಿಗಳು ಹೆಚ್ಚು ಬಳಸಬೇಕು ಎಂದು ಸಲಹೆ ನೀಡಿದರು.  

‘ಪ್ರತಿ ಓದುಗನಿಗೂ ಅವನದೇ ಆದ ಪುಸ್ತಕ, ಪ್ರತಿ ಪುಸ್ತಕಕ್ಕೂ ಅದರದೇ ಆದ ಓದುಗ’ ಎಂಬ ಪರಿಕಲ್ಪನೆಯೊಂದಿಗೆ ಓದುಗರ ಸಮಯವನ್ನು ಉಳಿಸುವುದು ಸೇರಿದಂತೆ ಗ್ರಂಥಾಲಯದ ನಿರ್ವಹಣೆಗೆ ಸಂಬಂಧಿಸಿದ ಅವರ ಪಂಚಸೂತ್ರಗಳು ಜಗತ್ತಿನಾದ್ಯಂತ ಗ್ರಂಥಾಲಯ ವ್ಯವಸ್ಥೆಯನ್ನು ಆಧುನೀಕರಿಸಲು ದಾರೀದೀಪವಾಗಿವೆ ಎಂದು ಹೇಳಿದರು.  

ಕನ್ನಡ ಸಹಾಯಕ ಪ್ರಾಧ್ಯಾಪಕ ಹಾಗೂ ಸಾಂಸ್ಕೃತಿಕ ಘಟಕದ ಸಂಯೋಜಕ ರಮೇಶ್ ಹುಲಕೊಂಡ ಮಾತನಾಡಿ, ಡಾ. ಎಸ್‌.ಆರ್‌. ರಂಗನಾಥನ್ ಅವರನ್ನು ಗ್ರಂಥಾಲಯ ವಿಜ್ಞಾನದ ಪಿತಾಮಹ ಎಂದು ಬಣ್ಣಿಸಿದರು. ವಿದ್ಯಾರ್ಥಿಗಳು ಅವರ ಜೀವನ ಮೌಲ್ಯಗಳು, ಸಾಧನೆ ಹಾಗೂ ಕೊಡುಗೆಗಳನ್ನು ತಿಳಿದುಕೊಂಡು ಸ್ಫೂರ್ತಿ-ಪ್ರೇರಣೆ ಪಡೆಯಬೇಕು ಎಂದರು.  

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಅಪ್ಪಣ್ಣ ಹಂಜೆ ಮಾತನಾಡಿ, ಶಿಕ್ಷಣ ಸಂಸ್ಥೆಯ ಹೃದಯವಾಗಿರುವ ಗ್ರಂಥಾಲಯ ಕೇವಲ ಪುಸ್ತಕಗಳ ಸಂಗ್ರಹಾಲಯವಲ್ಲ. ಅದು ಜ್ಞಾನ, ಚಿಂತನೆ ಹಾಗೂ ವ್ಯಕ್ತಿತ್ವ ವಿಕಾಸದ ದೇಗುಲವಾಗಿದೆ. ಜ್ಞಾನವನ್ನು ಸಂಗ್ರಹಿಸಿ, ಸಂರಕ್ಷಿಸಿ ಸಮಾಜಕ್ಕೆ ಹಂಚುವ ಪ್ರಮುಖ ಜ್ಞಾನಭಂಡಾರವಾಗಿ ಗ್ರಂಥಾಲಯಗಳು ಕಾರ್ಯನಿರ್ವಹಿಸುತ್ತಿವೆ ಎಂದರು.  

ವಿದ್ಯಾರ್ಥಿಗಳು ಪುಸ್ತಕ ಓದುವ ಅಭಿರುಚಿಯನ್ನು ಬೆಳೆಸಿಕೊಳ್ಳಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗಾಗಿ ಕಾಲೇಜಿನ ಗ್ರಂಥಾಲಯದಲ್ಲಿ ಹಲವು ಪುಸ್ತಕಗಳು ಹಾಗೂ ನಿಯತಕಾಲಿಕೆಗಳು ಲಭ್ಯವಿದ್ದು, ವಿದ್ಯಾರ್ಥಿಗಳು ಪ್ರತಿದಿನ ಕನಿಷ್ಠ ಮೂರು ಗಂಟೆಗಳ ಕಾಲ ಗ್ರಂಥಾಲಯದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.  

ಕಾರ್ಯಕ್ರಮದಲ್ಲಿ ವಾಣಿಜ್ಯಶಾಸ್ತ್ರ ಸಹಾಯಕ ಪ್ರಾಧ್ಯಾಪಕಿ ಶ್ವೇತಾ ಪಾಲನಕರ್ ಸ್ವಾಗತಿಸಿದರು. ಗಣಿತಶಾಸ್ತ್ರ ಸಹಪ್ರಾಧ್ಯಾಪಕ ಬಸವರಾಜ ಬಳಗಾನೂರಮಠ ವಂದಿಸಿದರು. ಅರ್ಥಶಾಸ್ತ್ರ ಸಹಾಯಕ ಪ್ರಾಧ್ಯಾಪಕಿ ಹಾಗೂ ಗ್ರಂಥಾಲಯ ಮೇಲ್ವಿಚಾರಕಿ ಪವಿತ್ರಾ ಬಿ.ಸಿ. ಕಾರ್ಯಕ್ರಮ ನಿರೂಪಿಸಿದರು.  

ಐಕ್ಯೂಎಸಿ ಸಂಯೋಜಕ ಡಾ. ಜಿತೇಂದ್ರ ಜಾಗೀರದಾರ, ಸಹಸಂಯೋಜಕ ಡಾ. ಮಂಜುನಾಥ ತ್ಯಾಲಗಡಿ, ಕಲಾ ವಿಭಾಗದ ಮುಖ್ಯಸ್ಥ ಮಹಾನಂದ ಹಿರೇಮಠ, ವಿಜ್ಞಾನ ವಿಭಾಗದ ಮುಖ್ಯಸ್ಥೆ ಡಾ. ಸಾರಿಕಾ ಪಾಟೀಲ, ವಾಣಿಜ್ಯ ವಿಭಾಗದ ಮುಖ್ಯಸ್ಥ ಡಾ. ಲಕ್ಷ್ಮಣ ಮುಳಗುಂದ ಸೇರಿದಂತೆ ವಿವಿಧ ವಿಭಾಗಗಳ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.