ಮಹಾತ್ಮರ ಮಾರ್ಗದಲ್ಲಿ ಮುನ್ನಡೆಯೋಣ: ಜಾಧವ

ಮಹಾತ್ಮರ ಮಾರ್ಗದಲ್ಲಿ ಮುನ್ನಡೆಯೋಣ: ಜಾಧವ  Let us move forward on the path of the Mahatma: Jadhav


ತಾಳಿಕೋಟಿ  27: ಪ್ರವಾದಿಗಳು, ದಾರ್ಶನಿಕರು, ಸಂತರು ಹಾಗೂ ಶರಣರು ಮಾನವೀಯ ಮೌಲ್ಯಗಳೊಂದಿಗೆ ಬದುಕುವ ಮಾರ್ಗವನ್ನು ತೋರಿಸಿದ್ದಾರೆ. ಅವರು ತೋರಿದ ಮಾರ್ಗದಲ್ಲಿ ನಾವೆಲ್ಲರೂ ಒಂದಾಗಿ ಮುನ್ನಡೆಯಬೇಕು ಎಂದು ಸ್ಥಳೀಯ ರಸ್ತೆ ಸಾರಿಗೆ ಘಟಕ ವ್ಯವಸ್ಥಾಪಕ ಪಿ.ಕೆ. ಜಾಧವ ಹೇಳಿದರು.  

ಪಟ್ಟಣದ ರಸ್ತೆ ಸಾರಿಗೆ ಘಟಕದಲ್ಲಿ ಬುಧವಾರ ಪ್ರವಾದಿ ಮೊಹಮ್ಮದ್ ಅವರ ಜನ್ಮದಿನದ ಅಂಗವಾಗಿ ಆಯೋಜಿಸಿದ್ದ ‘ಈದ್ ಮಿಲಾದ್‌’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.  

‘ನಾವೆಲ್ಲರೂ ಭಾರತೀಯರು, ನಾವೆಲ್ಲರೂ ಒಂದೇ’ ಎಂಬ ಭಾವನೆ ಪ್ರತಿಯೊಬ್ಬರಲ್ಲೂ ಮೂಡಬೇಕು. ಯಾವುದೇ ಧರ್ಮವೂ ಹಿಂಸೆ ಮತ್ತು ದ್ವೇಷವನ್ನು ಬೋಧಿಸಿಲ್ಲ. ಎಲ್ಲ ಧರ್ಮಗಳು ಶಾಂತಿ, ಪ್ರೀತಿ ಹಾಗೂ ಸಹೋದರತ್ವವನ್ನು ಸಾರಿವೆ. ಪರಸ್ಪರ ತಪ್ಪು ತಿಳುವಳಿಕೆಯಿಂದ ಉಂಟಾಗುವ ಅಪನಂಬಿಕೆಯನ್ನು ಇಂತಹ ಕಾರ್ಯಕ್ರಮಗಳ ಮೂಲಕ ದೂರ ಮಾಡುವ ಪ್ರಯತ್ನ ಮಾಡಬೇಕು ಎಂದರು.  

ಜಮಾತೆ ಇಸ್ಲಾಮಿ ಹಿಂದ್ ನಗರ ಅಧ್ಯಕ್ಷ ಮುಜಾಹೀದ್ ನಮಾಜಕಟ್ಟಿ ಮಾತನಾಡಿ, ಪ್ರವಾದಿ ಮೊಹಮ್ಮದ್ ಅವರು ಮನುಕುಲಕ್ಕೆ ಶಾಂತಿ, ಸತ್ಯ, ಕರುಣೆ ಮತ್ತು ಮಾನವೀಯತೆಯ ಮಾರ್ಗ ತೋರಿಸಿದ್ದಾರೆ. ಅವರ ಬದುಕು ಸತ್ಯ ಮತ್ತು ನ್ಯಾಯದ ಪ್ರತಿರೂಪವಾಗಿದ್ದು, ಸಮಾಜ ಎದುರಿಸುತ್ತಿರುವ ಹಲವು ಸಮಸ್ಯೆಗಳಿಗೆ ಅವರ ಸಂದೇಶಗಳಲ್ಲಿ ಪರಿಹಾರವಿದೆ ಎಂದರು.  

ಕಾರ್ಯಕ್ರಮದಲ್ಲಿ ಸೀರತ್ ಅಭಿಯಾನದ ಉಪ ಸಂಚಾಲಕ ಹುಸೇನಪಟೇಲ ಪಟೇಲ, ಸಂಚಾರ ನೀರೀಕ್ಷಕ ಎಸ್‌.ಪಿ. ಆಲ್ಯಾಳ, ಸಿಬ್ಬಂದಿ ಮೇಲ್ವಿಚಾರಕ ಬಿ.ಬಿ. ಚೋಕಾವಿ, ಪಾರು ಪತ್ತೆಗಾರ ಎಸ್‌.ಬಿ. ಬಿದರಕುಂದಿ, ನಿರ್ವಾಹಕ ಜಿ.ಜಿ. ಬಿರಾದಾರ ಸೇರಿದಂತೆ ಘಟಕದ ಸಿಬ್ಬಂದಿ ಹಾಗೂ ಜಮಾತೆ ಇಸ್ಲಾಮಿ ಹಿಂದ್ ಪದಾಧಿಕಾರಿಗಳು ಉಪಸ್ಥಿತರಿದ್ದರು.