ಕಟ್ಟೀಮನಿ ಆಶಯಗಳ ಮರು ಆಂದೋಲನವಾಗಲಿ: ಡಾ. ಯಲ್ಲಪ್ಪ ಹಿಮ್ಮಡಿ

Let there be a revival of Kattimani wishes: Dr. Yallappa heel

ಬೆಳಗಾವಿ 07: ಬಸವರಾಜ ಕಟ್ಟೀಮನಿ ಅವರ ಸಮಗ್ರ ಸಾಹಿತ್ಯ ಪ್ರಕಟಗೊಂಡಿದ್ದು ಅವರ ಪತ್ರಿಕಾ ಬರಹಗಳ ವಿವಿಧ ಸಂಪುಟಗಳೂ ಮುದ್ರಣಗೊಂಡಿವೆ. ಈಗ ಕಟ್ಟಿಮನಿ ಅವರ ಪ್ರಗತೀಶೀಲ ಆಶಯಗಳ ಮರು ಆಂದೋಲನವಾಗಬೇಕಾದ ಅಗತ್ಯವಿದೆ ಎಂದು ಬಸವರಾಜ ಕಟ್ಟೀಮನಿ ಪ್ರತಿಷ್ಠಾನದ ನೂತನ ಅಧ್ಯಕ್ಷ ಡಾ. ಯಲ್ಲಪ್ಪ ಹಿಮ್ಮಡಿ ಹೇಳಿದರು.  

ಅವರು ನಗರದ ಬಸವರಾಜ ಕಟ್ಟೀಮನಿ ಪ್ರತಿಷ್ಠಾನದ ವತಿಯಿಂದ ಪ್ರತಿಷ್ಠಾನದ ಸುಭಾಂಗಣದಲ್ಲಿ ಆಯೋಜಿಸಿದ್ದ ನೂತನ ಅವಧಿಯ ಕಾರ್ಯ ಯೋಜನೆಗಳ ಕುರಿತು ಸ್ಥಳೀಯ ಸಾಹಿತಿ ಚಿಂತಕರ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು. ಬಸವರಾಜ ಕಟ್ಟಿಮನಿ ಅವರು ಪ್ರಗತೀಶೀಲ ಚಳುವಳಿಯ ಮುಖ್ಯ ಲೇಖಕರಾಗಿದ್ದರು. ಅವರು ತಮ್ಮ ಕೃತಿಗಳ ಮೂಲಕ ಇಡಿಯಾಗಿ ಪ್ರಗತೀಶೀಲ ಚಳುವಳಿಯ ಆಶಯಗಳನ್ನು ಪ್ರತಿಪಾದಿಸಿದ್ದರಲ್ಲದೇ ಹಾಗೆಯೇ ಬದುಕಿ ತೋರಿಸಿದವರು. ಅವರಿಗೆ ಪ್ರಗತೀಶೀಲತೆಯ ಹಿರಿದಾದ ಪರಂಪರೆ ಇರುವುದರಿಂದ ನಾವೀಗ ಬಸವರಾಜ ಕಟ್ಟೀಮನಿ ಅವರ ಪ್ರಗತೀಶೀಲ ಪರಂಪರೆಯನ್ನು ಚಿಂತನ ಮಾಲೆ ಮತ್ತು ಸಾಹಿತ್ಯ ಮಾಲಿಕೆಗಳ ಮೂಲಕ ಸಾಮಾನ್ಯ ಓದುವರಿಗೂ ಆ ವಿಚಾರಗಳನ್ನು ತಲುಪಿಸುವ ಯೋಜನೆ ರೂಪಿಸಿದ್ದೇವೆ ಎಂದು ಡಾ. ಹಿಮ್ಮಡಿ ಹೇಳಿದರು. 

ಹಿರಿಯ ಸಾಹಿತಿಗಳಾದ ಡಾ. ರಾಮಕೃಷ್ಣ ಮರಾಠೆ, ಯ ರು ಪಾಟೀಲ, ರವಿ ಕೋಠಾರಗಸ್ತಿ ಅವರುಗಳು ಬಸವರಾಜ ಕಟ್ಟೀಮನಿ ಅವರ ಜನ್ಮಸ್ಥಳ ಮಲಾಮರಡಿಯಲ್ಲಿ ಸಮಾಧಿ ಸ್ಮಾರಕ ಮತ್ತು ಸಭಾಭವನ ನಿರ್ಮಾಣವಾಗಬೇಕಾದ ಅಗತ್ಯವನ್ನು ಒತ್ತಿ ಹೇಳಿದರು. ಡಾ. ಸರಜೂ ಕಾಟ್ಕರ್, ಡಾ. ಎಸ್ ಎಸ್ ಅಂಗಡಿ ಅವರು ದೇಶದ ವಿವಿಧ ಭಾಗಗಳಲ್ಲಿರುವ ಪ್ರಗತಿಪಂತದ ಹಿರಿಯ ಬರಹಗಾರರನ್ನು ಒಳಗೊಂಡ ಸಮ್ಮೇಳನವನ್ನು ಕರ್ನಾಟಕದಲ್ಲಿ ನಡೆಸಬೇಕು ಇತರ ಭಾಷೆಗಳವರಿಗೆ ಕಟ್ಟೀಮನಿಯವರ ಪರಿಚಯವಾಗಬೇಕು ಎಂಬ ವಿಚಾರಿ ತಿಳಿಸಿದರು. ಹೃಷಿಕೇಶ ದೇಸಾಯಿ ಅವರು ಎಲ್ಲದಕ್ಕೂ ತಂತ್ರಜ್ಞಾನದ ಬಳಕೆ ಹೆಚ್ಚುತ್ತಿರುವುದರಿಂದ ಸಾಮಾನ್ಯ ಜನರಿಗೆ ಅದರಲ್ಲೂ ಯುವಜನರಿಗೆ ಕಟ್ಟೀಮನಿ ಸಾಹಿತ್ಯ ತಲುಪಿಸಲು ಡಿಜಿಟಲ್ ಮಾಧ್ಯಮವನ್ನು ಪರಿಣಾಮಕಾರಿಯಾಗಿ ಬಳಸುವ ವಿವಿಧ ಸಾಧ್ಯತೆಗಳನ್ನು ವಿವರಿಸಿದರು. ಬಿ ಎಸ್ ಗವಿಮಠ, ಡಾ. ಡಿ ಎಸ್ ಚೌಗಲೆ, ಸುನಂದಾ ಎಮ್ಮಿ, ಆಶಾ ಯಮಕನಮರಡಿ ಅವರು ಹೊಸತಲೆಮಾರಿಗೆ ಬಸವರಾಜ ಕಟ್ಟೀಮನಿ ಅವರನ್ನು ತಲುಪಿಸುವ ಯೋಜನೆಗಳ ಕುರಿತು ವಿವರಿಸಿದರು. ಸಭೆಯಲ್ಲಿ ಡಾ. ಪಿ ಜಿ ಕೆಂಪಣ್ಣವರ, ಡಾ. ಗುರುದೇವಿ ಹುಲೆಪ್ಪನವರಮಠ, ಶೀರೀಷ್ ಜೋಶಿ ಎ ಎ ಸನದಿ, ಡಾ. ಎಸ್ ಎಂ ಗಂಗಾಧರಯ್ಯ, ಡಾ. ಎ ಬಿ ಘಾಟಗೆ, ಶಿವಯೋಗಿ ಕುಸುಗಲ್ಲ, ನದೀಮ್ ಸನದಿ, ಸದಸ್ಯರಾದ ಎಸ್ ಜಿ ಚಿಕ್ಕನರಗುಂದ ಮುಂತಾದವರು ಭಾಗವಹಿಸಿದ್ದರು. ಪ್ರಾರಂಭದಲ್ಲಿ ಪ್ರತಿಷ್ಠಾನದ ಸದಸ್ಯ ಕಾರ್ಯದರ್ಶಿವಿದ್ಯಾವತಿ ಭಜಂತ್ರಿ ಸ್ವಾಗತಿಸಿದರು. ಸದಸ್ಯರಾದ ಡಾ. ಜೆ ಪಿ ದೊಡ್ಡಮನಿ ವಂದಿಸಿದರು. ಡಾ. ಕೆ ಆರ್ ಸಿದ್ದಗಂಗಮ್ಮ ನಿರೂಪಿಸಿದರು.