ಹಳ್ಳಿಯಮೂಲ ಸಂಪ್ರದಾಯ ಮುಂದುವರಿಯಲಿ; ನಿಂಗಣ್ಣ ಕುಂಟಿ

ಧಾರವಾಡ 15: ಸೀರೆ, ಕುಪ್ಪಸ ತೊಟ್ಟಿದ್ದನ್ನು ನೋಡಿ ಹಬ್ಬ ಹರಿದಿನಗಳಲ್ಲಿ ವಿಶೇಷವಾಗಿ ಪಂಚಮಿ ಹಬ್ಬಗಳಲ್ಲಿ ಮಹಿಳೆಯರು ನೀಟಾದ ಉಡುಗೆ ತೊಟ್ಟು ಹಾಡುಗಳನ್ನು ಹಾಡುತ್ತಾ ನಾಗಪ್ಪನಿಗೆ ಹಾಲು ಹೊಯ್ಯುವುದು, ಜೋಕಾಲಿ ಆಡುವುದು ನಮ್ಮ ಹಳ್ಳಿಯಮೂಲ ಸಂಪ್ರದಾಯ. ಇಂಥಹ ಒಂದು ಪದ್ಧತಿಯನ್ನು ಈಗೂ ಕೂಡ ಈ ನಮ್ಮ ಗ್ರಾಮೀಣ ಮಹಿಳೆಯರು ಮುಂದುವರೆಸಿಕೊಂಡು ಬಂದಿರುವುದು ನನಗೆ ಸಂತೋಷ ಎಂದು  ನಿಂಗಣ್ಣ ಕುಂಟಿ (ಇಟಗಿ) ಹೇಳಿದರು.

ಅವರು ದಿ. 14ರಂದು ರಾ.ಹ.ದೇಶಪಾಂಡೆ ಸಭಾಭವನದಲ್ಲಿ ಅಂಬಾಭವಾನಿ ಸಾಂಸ್ಕೃತಿಕ ಕಲಾ ಮಹಿಳಾ ಸಂಘ (ರಿ) ದೇವಿಕೊಪ್ಪ ತಾಲೂಕ ಕಲಘಟಗಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಏರ್ಪಡಿಸಿದ ಜಾನಪದ ಜಾತ್ರೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಾರ್ಯಕ್ರಮದಲ್ಲಿ ಬಂದಂತಹ ಮಹಿಳಾ ಕಲಾ ತಂಡದವರನ್ನು ನೋಡಿ ತಮ್ಮ ಹಳ್ಳಿಯ ಹಳೆಯ ಸಂಪ್ರದಾಯಗಳನ್ನು ನೆನಪಿಸಿಕೊಂಡು ಹರ್ಷ ವ್ಯಕ್ತಪಡಿಸಿದರು. ಇಂಥಹ ಜಾನಪದ ಕಾರ್ಯಕ್ರಮಗಳು ಹಾಡುಗಾರರು ಬೆಳೆಯಲೆಂದು ಆಶಿಸಿದರು.

ಅತಿಥಿಗಳಾಗಿ ಆಗಮಿಸಿದ ಆಕಾಶವಾಣಿಯ ಹಿರಿಯ ಕಲಾವಿದ ಸದಾಶಿವ ಎಸ್. ಐಹೊಳ್ಳಿ ಇಂಥ ಗ್ರಾಮೀಣ ಭಾಗದ ಕಲಾವಿದರು ಭಜನೆ, ಗೀಗೀ ಪದ, ಡೊಳ್ಳಿನ ಪದ, ಸಂಪ್ರದಾಯ ಪದಗಳು, ಚೌಡಕಿ ಪದಗಳು ಇವೆಲ್ಲ ಕಲಾವಿದರು ಆಕಾಶವಾಣಿಯಲ್ಲಿ ಕಾರ್ಯಕ್ರಮ ನೀಡುವುದನ್ನು ನಾನು ಕಂಡಿದ್ದೇನೆ. ಇಂತಹ ಕಲೆಗಳು ಮಾಸದೆ ಈ ಕಲೆಗಳು ಉಳಿಸಿ ಬೆಳೆಸಲು ಈ ಕಲಾವಿದರು ಶ್ರಮಿಸುವುದು ಒಂದು ಶ್ಲಾಘನೀಯ ಎಂದರು.  

ರೇಖಾ ಫ. ಅಂತಕ್ಕನವರ, ದ್ಯಾಮವ್ವ ಅಂಗಡಿ, ಶಿವಾನಂದ ಅಮರಶೆಟ್ಟಿ, ಈರವ್ವ ಕಟ್ಟಿ, ಅರ್ಜುನ ಮಾದರ, ಸುಕೇಶಿನಿ ಹಿರೇಮಠ, ಪ್ರಕಾಶ ಮಲ್ಲಿಗವಾಡ ಉಪಸ್ಥಿತರಿದ್ದರು. ನಿರೂಪಣೆಯನ್ನು ಶಾನವಾಡ ಮಾಸ್ತರ್ ನಡೆಸಿಕೊಟ್ಟರು. ಮುಂದೆ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.