ಮಹತ್ವಾಕಾಂಕ್ಷಿ ತಾಲೂಕುಗಳು ಪ್ರೇರಣದಾಯಕವಾಗಲಿ : ಡಾ.ದೀಲೀಷ್ ಶಶಿ

 ಮಹತ್ವಾಕಾಂಕ್ಷಿ ತಾಲೂಕುಗಳು ಪ್ರೇರಣದಾಯಕವಾಗಲಿ : ಡಾ.ದೀಲೀಷ್ ಶಶಿ Let the ambitious taluks be inspiring: Dr. Dilish Shashi

ಲೋಕದರ್ಶನ ವರದಿ 

ಮಹತ್ವಾಕಾಂಕ್ಷಿ ತಾಲೂಕುಗಳು ಪ್ರೇರಣದಾಯಕವಾಗಲಿ : ಡಾ.ದೀಲೀಷ್ ಶಶಿ 

ಕಾರವಾರ 4: ನೀತಿ ಆಯೋಗದಿಂದ ಗುರುತಿಸಲ್ಪಟ್ಟಿರುವ ಜಿಲ್ಲೆಯ ಮಹತ್ವಾಕಾಂಕ್ಷಿ ತಾಲೂಕುಗಳಾದ ಸೂಪಾ ಮತ್ತು ಮುಂಡಗೋಡುಗಳಲ್ಲಿ ನಡೆಯುವ ಅಭಿವೃದ್ದಿ ಕಾರ್ಯಗಳು ಜಿಲ್ಲೆಯ ಎಲ್ಲಾ ತಾಲೂಕುಗಳಿಗೆ ಪ್ರೇರಣಾದಾಯವಾಗಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ದೀಲೀಷ್ ಶಶಿ ಹೇಳಿದರು. 

ಅವರು ಬುಧವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ, ಜಿಲ್ಲೆಯ ಮಹತ್ವಾಕಾಂಕ್ಷಿ ತಾಲೂಕುಗಳಲ್ಲಿ ಹಮ್ಮಿಕೊಳ್ಳಲಾಗುವ ಸಂಪೂರ್ಣತಾ ಅಭಿಯಾನ 2.0 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.  

      ಮಹತ್ವಾಕಾಂಕ್ಷಿ ತಾಲೂಕುಗಳಲ್ಲಿನ ಸಾರ್ವಜನಿಕರಿಗೆ ಆರೋಗ್ಯ, ಪೌಷ್ಠಿಕತೆ, ಶಿಕ್ಷಣ ಮತ್ತು ಕೃಷಿ ಕ್ಷೇತ್ರಗಳಲ್ಲಿ ನೀರೀಕ್ಷಿತ ಪ್ರಗತಿ ಸಾಧಿಸುವ ನಿಟ್ಟಿನಲ್ಲಿ ವಿವಿಧ ಕಾರ್ಯಕ್ರಮಗಳನ್ನು ರೂಪಿಸುವ ಮೂಲಕ ಅವರ ಜೀವನಮಟ್ಟವನ್ನು ಉತ್ತಮಪಡಿಸುವ ಉದ್ದೇಶವನ್ನು ಹೊಂದಿದ್ದು, ಸಂಬಂದಪಟ್ಟ ಇಲಾಖೆಗಳ ಅಧಿಕಾರಿಗಳು ತಮಗೆ ವಹಿಸಲಾದ ಜವಾಬ್ದಾರಿಗಳನ್ನು  ಪರಿಪೂರ್ಣಗೊಳಿಸಿ, ಇಲ್ಲಿನ ಸಾಧನೆಗಳು ಇತರೆ ತಾಲೂಕುಗಳಿಗೆ ಮಾದರಿ ಕಾರ್ಯಗಳಾಗುವಂತೆ ಮಾಡಬೇಕು ಎಂದರು. 

    ಸಂಪೂರ್ಣತಾ ಅಭಿಯಾನ 2.0 ಕಾರ್ಯಕ್ರಮದಲ್ಲಿ ಹಮ್ಮಿಕೊಂಡಿರುವ ಯೋಜನೆಗಳನ್ನು ಕಾಲಮಿತಿಯನ್ನು ಪೂರ್ಣಗೊಳಿಸುವಂತೆ ಸೂಚಿಸಿದ ಅವರು, ಕಾರ್ಯಕ್ರಮದ ಅನುಷ್ಠಾನದ ಸಂದರ್ಭದಲ್ಲಿ ಹೊಸ ಯೋಜನೆಗಳು ಅಗತ್ಯವಿದ್ದಲ್ಲಿ ಅಥವಾ ನೂತನ ಅನ್ವೇಷಣೆಗಳನ್ನು ಕೈಗೊಳ್ಳಬೇಕಾದಲ್ಲಿ ಈ ಬಗ್ಗೆ ಮಾಹಿತಿ ನೀಡುವಂತೆ ಮತ್ತು ಅಭಿಯಾನದಲ್ಲಿ ಕೈಗೊಳ್ಳುವ ಕಾರ್ಯಕ್ರಮಗಳ ಬಗ್ಗೆ ಹೆಚ್ಚಿನ ಅರಿವು ಮತ್ತು ಜಾಗೃತಿ ಮೂಡಿಸಿ,  ಸಾರ್ವಜನಿಕರ ಸಹಭಾಗಿತ್ವದಲ್ಲಿ ಎಲ್ಲಾ ಇಲಾಖೆಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಿ, ಈ ಅಭಿಯಾನವನ್ನು ಯಶಸ್ವಿಗೊಳಿಸುವಂತೆ ತಿಳಿಸಿದರು. 

     ಮುಂಡಗೋಡು ತಾ.ಪಂ. ಕಾರ್ಯನಿರ್ವಹಣಾಧಿಕಾರಿ ದಾಸನಕೊಪ್ಪ ಮಾತನಾಡಿ, ಮಹತ್ವಾಕಾಂಕ್ಷಿ ತಾಲೂಕಾದ ಮುಂಡಗೋಡು ತಾಲೂಕಿನಲ್ಲಿ ಈ ಮೊದಲು ಸಂಪೂರ್ಣತಾ ಅಭಿಯಾನದಲ್ಲಿ ನೀಡಿದ್ದ ಸೂಚಕಗಳ ಗುರಿಯನ್ನು ಎಲ್ಲಾ ಇಲಾಖೆಗಳ ಸಹಕಾರದಿಂದ ಅತ್ಯಂತ ಯಶಸ್ವಿಯಾಗಿ ಪೂರ್ಣಗೊಳಿಸಿದ್ದು, ಪ್ರಸ್ತುತದ ಸಂಪೂರ್ಣತಾ ಅಭಿಯಾನ 2.0 ನ್ನು ನಿಗಧಿತ ಅವಧಿಯೊಳಗೆ ಪೂರ್ಣಗೊಳಿಸಲಾಗುವುದು ಎಂದರು. 

        ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಅಲ್ಲಾ ಭಕ್ಷ್‌, ಪ್ರಕಾಶ್ ಹಾಲಮ್ಮನವರ್, ಯೋಜನಾ ನಿರ್ದೇಶಕ ಕರೀಂ ಅಸಾದಿ, ಮುಖ್ಯ ಲೆಕ್ಕಾಧಿಕಾರಿ ಆನಂದ್‌ಸಾ ಹಬೀಬ್, ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಿವಪ್ರಸಾದ್ ಗಾಂವಕರ್ ಇದ್ದರು. 

    ಜಿ.ಪಂ. ಮುಖ್ಯ ಯೋಜನಾಧಿಕಾರಿ ಸೋಮಶೇಖರ್ ಮೇಸ್ತಾ ಸ್ವಾಗತಿಸಿದರು. ಮುಂಡಗೋಡು ತಾ.ಪಂ. ಕಾರ್ಯನಿರ್ವಹಣಾಧಿಕಾರಿ ದಾಸನಕೊಪ್ಪ ವಂದಿಸಿದರು. 

   ಸಂಪೂರ್ಣತಾ ಅಭಿಯಾನ 2.0 ದ ಲಾಂಛನ ಬಿಡುಗಡೆ, ಪೋಸ್ಟರ್ ಬಿಡುಗಡೆ ಮತ್ತು ಸಂಕಲ್ಪ ಸ್ವೀಕಾರ ಮಾಡಲಾಯಿತು. ಮಹತ್ವಾಕಾಂಕ್ಷಿ ತಾಲೂಕುಗಳಾದ ಸೂಪಾ ಮತ್ತು ಮುಂಡಗೋಡಿನ ವಿವಿಧ ಇಲಾಖೆಗಳ ಜಿಲ್ಲಾ ಮತ್ತು ತಾಲೂಕುಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.