ಶಿವಸಿಂಪಿ ಸಮಾಜ ಸಂಘಟಿತವಾಗಿ ಸಾಮಾಜಿಕ ಪರಿವರ್ತನೆಗೆ ಕೈಜೋಡಿಸಲಿ: ಮಲ್ಲಿಕಾರ್ಜುನ ಕೋಳಾರ

 ಶಿವಸಿಂಪಿ ಸಮಾಜ ಸಂಘಟಿತವಾಗಿ ಸಾಮಾಜಿಕ ಪರಿವರ್ತನೆಗೆ ಕೈಜೋಡಿಸಲಿ: ಮಲ್ಲಿಕಾರ್ಜುನ ಕೋಳಾರ  Let the Shivasimpi community unite and join hands for social transformation: Mallikarjun Kolar

ಲೋಕದರ್ಶನ ವರದಿ

ಮುಧೋಳ 20: ಶಿವಸಿಂಪಿ ಸಮಾಜವು ಕೇವಲ ಸಾಮಾಜಿಕ ಸಂಘಟನೆಯಾಗಿಯೇ ಉಳಿಯದೆ, ಸಾಮಾಜಿಕ ಹಾಗೂ ಸೈದ್ಧಾಂತಿಕ ಪರಿವರ್ತನೆಗೆ ಮುನ್ನಡೆಯಬೇಕು. ಕುಲಗುರು ಶ್ರೀ ಶಿವದಾಸಿಮಯ್ಯ ಅವರ ತತ್ವ, ಆದರ್ಶ ಹಾಗೂ ಚಿಂತನೆಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಂಡರೆ ಸಮಾಜ ಮತ್ತಷ್ಟು ಪ್ರಬುದ್ಧವಾಗಿ ಬೆಳೆಯಲಿದೆ ಎಂದು ಶಿವಸಿಂಪಿ ಸಮಾಜದ ಬಾಗಲಕೋಟೆ ಜಿಲ್ಲಾ ಅಧ್ಯಕ್ಷ ಮಲ್ಲಿಕಾರ್ಜುನ ಕೋಳಾರ ಹೇಳಿದರು.  

ಪಟ್ಟಣದ ಕಸಾಪ ಭವನದಲ್ಲಿ ಮುಧೋಳ ತಾಲ್ಲೂಕು ಶಿವಸಿಂಪಿ ಸಮಾಜ ಕ್ಷೇಮಾಭಿವೃದ್ಧಿ ಸಂಘದ ಆಶ್ರಯದಲ್ಲಿ ಆಯೋಜಿಸಿದ್ದ ಕುಲಗುರು ಜಗದಾಚಾರ್ಯ ಶ್ರೀ ಶಿವದಾಸಿಮಯ್ಯ ಅವರ ಸ್ಮರಣೋತ್ಸವ, ತಾಲ್ಲೂಕು ಘಟಕದ ನೂತನ ಪದಾಧಿಕಾರಿಗಳ ಅಧಿಕಾರ ಸ್ವೀಕಾರ ಸಮಾರಂಭ ಹಾಗೂ ಶಿವದಾಸಿಮಯ್ಯ ಪತ್ತಿನ ಸಹಕಾರಿ ನಿಯಮಿತದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.  

ಶಿವದಾಸಿಮಯ್ಯ ಅವರ ಕುರಿತು ಇನ್ನಷ್ಟು ಸಂಶೋಧನೆಗಳು ನಡೆಯಬೇಕಿದ್ದು, ಅವರ ಆದರ್ಶಗಳು ಸಮಾಜಕ್ಕೆ ಸದಾ ಮಾರ್ಗದರ್ಶಕವಾಗಿವೆ. ಶಿಕ್ಷಣ, ಸಂಘಟನೆ ಮತ್ತು ಸಮಾಜಮುಖಿ ಚಿಂತನೆಯ ಮೂಲಕ ಶಿವಸಿಂಪಿ ಸಮಾಜ ಅಭಿವೃದ್ಧಿಯತ್ತ ಸಾಗಬೇಕು ಎಂದು ಅವರು ಕರೆ ನೀಡಿದರು.   

ಬೆಳವತ್ತಿ ಗ್ರಾಮದ ವಿವೇಕಸಿದ್ಧ ಸೇವಾಶ್ರಮದ ಪೂಜ್ಯ ದಯಾಶಂಕರ ಮಹಾಸ್ವಾಮೀಜಿ ಆಶೀರ್ವಚನ ನೀಡಿ, ಶಿವಸಿಂಪಿ ಸಮಾಜವು ಸಂಸ್ಕಾರ, ಶಿಸ್ತು ಮತ್ತು ಸೇವಾ ಮನೋಭಾವಕ್ಕೆ ಹೆಸರಾಗಿದ್ದು, ಶಿವದಾಸಿಮಯ್ಯ ಅವರ ತತ್ವಗಳನ್ನು ಅನುಸರಿಸುವ ಮೂಲಕ ಸಮಾಜದ ಏಕತೆ ಮತ್ತಷ್ಟು ಬಲಗೊಳ್ಳಲಿದೆ ಎಂದು ಹೇಳಿದರು.