ವಾಷಿಂಗ್ಟನ್, ಏ 16,ಇತ್ತೀಚೆಗೆ ಕಾಣಿಸಿಕೊಂಡು ಕ್ಷಿಪ್ರಗತಿಯಲ್ಲಿ ವ್ಯಾಪಕವಾಗಿ ಹರಡಿದ ಕೊರೊನಾ ವೈರಾಣು ಸೋಂಕಿನ ಮೂಲವನ್ನು ಜಗತ್ತಿನ ವಿಜ್ಞಾನಿಗಳು ಪತ್ತೆ ಮಾಡಲಿ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೋ ಹೇಳಿದ್ದಾರೆ.ಕೊರೊನಾ ವೈರಾಣು ಹೇಗೆ ಹುಟ್ಟಿಕೊಂಡಿತು ಎಂಬ ಬಗ್ಗೆ ತಿಳಿದುಬಂದರೆ ಅದು ಮತ್ತೆ ಪುನರಾವರ್ತಿಸುವ ಅಪಾಯವನ್ನು ತಗ್ಗಿಸಬಹುದಾಗಿದೆ ಎಂದು ಅವರು ಹೇಳಿದ್ದಾರೆ.ಚೀನಾ ವಿಜ್ಞಾನಿಗಳೂ ಸೇರಿದಂತೆ ವಿಶ್ವದ ಉತ್ತಮ ಜ್ಞಾನಿಗಳು ಈ ಸೋಂಕು ಹೇಗೆ ಆರಂಭವಾಯಿತು, ಹೇಗೆ ಜಗತ್ತಿನ ಎಲ್ಲೆಡೆ ಪಸರಿಸಿತು ಎಂಬ ಬಗ್ಗೆ ಸಂಶೋಧನೆ ಕೈಗೊಳ್ಳಲಿ ಎಂದು ಅವರು ಹೇಳಿದ್ದಾರೆ.ಯಾವುದೇ ದೇಶ ಇಂತಹ ಅಪಾಯ ಮರುಕಳಿಸುವುದನ್ನು ಬಯಸುವುದಿಲ್ಲ. ರಾಜಕೀಯ ಪ್ರೇರಿತವಲ್ಲದ ಅಂಕಿಅಂಶ ಆಧಾರಿತ ಅಧ್ಯಯನವಾಗಲಿ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೋ ಸೇರಿದಂತೆ ಹಲವು ಅಮೆರಿಕದ ಅಧಿಕಾರಿಗಳು ಕೊರೊನಾ ಸೋಂಕಿಗೆ ಚೀನಾ ಕಾರಣ ಎಂದು ಸತತವಾಗಿ ಟೀಕಿಸುತ್ತಾ ಬಂದಿದ್ದವು. ನಂತರ ಅಮೆರಿಕದಲ್ಲೇ ಹುಟ್ಟಿರಬಹುದು ಎಂದು ಸಲಹೆ ನೀಡಲು ಅಭಿಯಾನವನ್ನೂ ಆರಂಭಿಸಿತ್ತು. ಚೀನಾ ಈ ಸಾಂಕ್ರಾಮಿಕ ರೋಗಕ್ಕೆ ಬೆಲೆ ತೆರಬೇಕೆ ಎಂಬ ಪ್ರಶ್ನೆಗೆ ಪಾಂಪಿಯೋ, ಸದ್ಯ ಕೊರೊನಾ ಲಾಕ್ ಡೌನ್ ನಿಂದಾಗಿ ಸ್ತಬ್ಧವಾಗಿರುವ ಅಮೆರಿಕ ಸೇರಿದಂತೆ ವಿಶ್ವದ ಆರ್ಥಿಕತೆಗಳ ಪುನರಾರಂಭಕ್ಕೆ ಗಮನ ನೀಡಬೇಕು ಎಂದರು.