ಕವಿಗಳು ಕಲ್ಪನೆಯ ಮೂಲಕ ಸತ್ಯ ಹೊರಹಾಕಲಿ: ಲೇಖಕಿ ನಿಶತ್ ಜಮೀಲಾ
Let poets bring out the truth through imagination: Author Nishat Jamila
ಲೋಕದರ್ಶನ ವರದಿ
ಹುಬ್ಬಳ್ಳಿ 17: “ಕವಿಗಳು ಏಕೆ ಬರೆಯಬೇಕು ಎಂಬ ಆತ್ಮಪ್ರಶ್ನೆಯನ್ನು ಮುಂದಿಟ್ಟುಕೊಂಡು ಬರೆಯುತ್ತಲೇ ಇರಬೇಕು, ಕಲ್ಪನೆಯ ಮೂಲಕ ಸತ್ಯವನ್ನು ಹೊರಹಸಕಬೇಕು” ಎಂದು ಹೈದರಾಬಾದ್‌ನ ಉರ್ದು ಲೇಖಕಿ ಹಾಗೂ ಹೋರಾಟಗಾರ್ತಿ ನಿಶತ್ ಜಮೀಲಾ ಕಿವಿಮಾತು ಹೇಳಿದರು.
ಹನ್ನೆರಡನೆಯ ಮೇ ಸಾಹಿತ್ಯ ಮೇಳದ ಎರಡನೆಯ ದಿನ ನಡೆದ ಕವಿಗೋಷ್ಠಿಯಲ್ಲಿ ಆಶಯ ಮಾತುಗಳನ್ನು ಹೇಳುತ್ತ, ಜೀವನದ ಅರ್ಥವನ್ನು ಹುಡುಕುವ ಸಂದರ್ಭದಲ್ಲಿ ಬರವಣಿಗೆ ಮಹತ್ವದ ಅಭಿವ್ಯಕ್ತಿ ಮಾರ್ಗವಾಗಿದೆ ಎಂದರು. ಅನೇಕ ಪ್ರಸಿದ್ಧ ಕವಿಗಳ ಕವನಗಳನ್ನು ಓದಿರುವ ಅನುಭವವನ್ನು ಹಂಚಿಕೊಂಡ ಅವರು, “ಕಲ್ಪನೆ ಸತ್ಯವನ್ನು ಹೊರಹಾಕುತ್ತದೆ. ಅದು ಕೇವಲ ಫ್ಯಾಂಟಸಿ ಅಲ್ಲ; ಅದು ವಾಸ್ತವದ ಒಂದು ಭಾಗ,” ಎಂದು ವಿವರಿಸಿದರು. ಸಮಾಜದಲ್ಲಿ ಶಾಂತಿ ಇದ್ದರೂ ಸಂತೋಷದ ಕೊರತೆ ಕಂಡುಬಂದರೆ ಅದನ್ನು ಹೇಗೆ ತರುವುದು ಎಂಬ ಪ್ರಶ್ನೆಯೂ ಮಹತ್ವದ್ದಾಗಿದೆ ಎಂದು ಹೇಳಿದರು.ತಾವು ಒಂದು ಸಂಸ್ಥೆಯನ್ನು ಆರಂಭಿಸಿ ಮಹಿಳೆಯರೊಂದಿಗೆ ಕಾರ್ಯನಿರ್ವಹಿಸುತ್ತಿರುವ ಅನುಭವವನ್ನು ಹಂಚಿಕೊಂಡ ಅವರು, ಹೈದರಾಬಾದ್‌ನಲ್ಲಿ ನಡೆಯುವ ಕೋಮು ಸಂಘರ್ಷಗಳು ಮತ್ತು ಮಹಿಳೆಯರ ಮೇಲಿನ ದಬ್ಬಾಳಿಕೆಯನ್ನು ನೇರವಾಗಿ ಅನುಭವಿಸಿದ್ದಾಗಿ, ಈಗ ಅವುಗಳ ವಿರುದ್ಧ ಹೋರಾಡುತ್ತಿರುವುದಾಗಿ ಹೇಳಿದರು. “ಮಹಿಳೆಯರ ನೋವನ್ನು ಅನುಭವಿಸುತ್ತಿದ್ದೇನೆ. ಅದನ್ನು ಕವ್ವಾಲಿಗಳ ಮೂಲಕ ವ್ಯಕ್ತಪಡಿಸುತ್ತಿದ್ದೇನೆ. ಜೊತೆಗಿರುವ ಹಲವು ಮಹಿಳೆಯರೂ ಈಗ ಕೌಟುಂಬಿಕ, ಸಾಮಾಜಿಕ ಹಿಂಸೆಯ ವಿರುದ್ಧ ಕವ್ವಾಲಿಗಳ ಮೂಲಕ ಹೊರಹಾಕುತ್ತಿದ್ದಾರೆ" ಎಂದು ಅವರು ತಿಳಿಸಿದರು.
ಹಿಂಸಾಚಾರದ ವಿರುದ್ಧ ಮಹಿಳೆಯರು ಕವ್ವಾಲಿಗಳನ್ನು ಹಾಡಲು ಆರಂಭಿಸಿರುವುದನ್ನು ಉಲ್ಲೇಖಿಸಿದ ಅವರು, ಕಾವ್ಯವು ಕೇವಲ ವೈಯಕ್ತಿಕ ಅನುಭವಗಳಷ್ಟೇ ಅಲ್ಲದೆ ಕಲ್ಪನೆಯ ಮೂಲಕವೂ ಬರೆಯಬಹುದು ಎಂದು ಅಭಿಪ್ರಾಯಪಟ್ಟರು. “ಯಾರಾದರೂ ಅನುಭವಿಸಿದ ನೋವನ್ನೇ ಅನುಭವಿಸದೇ ಬರೆಯಬಹುದು. ಆದರೆ ಕಲ್ಪನೆ ಬಹಳ ಮುಖ್ಯ,” ಎಂದು ಹೇಳಿದರು.1997ರಲ್ಲಿ ಬುರ್ಖಾ ವಿರೋಧಿಸಿ ಕವನ ಬರೆದಾಗ ತಾವು ಎದುರಿಸಿದ ಪ್ರತಿರೋಧವನ್ನು ಸ್ಮರಿಸಿಕೊಂಎ ಅವರು, ತಾವು ಅನುಭವಿಸದ ನೋವನ್ನು ಸಂಪೂರ್ಣವಾಗಿ ಪ್ರತಿನಿಧಿಸುವುದು ಕಷ್ಟವಾದರೂ, ಕಾವ್ಯ ಮತ್ತು ಸಾಂಸ್ಕೃತಿಕ ಅನುವಾದವು ಮಾತಿಲ್ಲದವರ ನೋವನ್ನು ಹೊರಹಾಕುವ ಸಾಧನಗಳಾಗಿವೆ ಎಂದು ಹೇಳಿದರು.ಬುರ್ಖಾ ಪದ್ಧತಿಯನ್ನು ಟೀಕಿಸುತ್ತ, ಮಹಿಳೆಯರು ಶಿಕ್ಷಣ ಹಾಗೂ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಬೇಕು ಎಂಬ ಸಂದೇಶವನ್ನೂ ಅವರು ನೀಡಿದರು. “ಬುರ್ಖಾವನ್ನು ತೆಗೆದು, ಕಂಪ್ಯೂಟರ್ ಕಲಿಯುವ ಮೂಲಕ ಮಹಿಳೆಯರು ಸ್ವಾವಲಂಬಿಗಳಾಗಬೇಕು,” ಎಂದು ನಿಶತ್ ಜಮೀಲಾ ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕೆ.ವೈ. ನಾರಾಯಣಸ್ವಾಮಿ ಅವರು, ಇಂದಿನ ಕವಿಗಳ ಕಾವ್ಯ ವಸ್ತು ಮತ್ತು ಅನುಭವ ಆಳವಾಗಿದ್ದು ಮತ್ತು ಸೂಕ್ಷ್ಮವಾಗಿದ್ದು, ಆದರೆ ಕಾಲಭಾಷೆ ಕಾಣುತ್ತಿಲ್ಲ, ಇದು ಕಾವ್ಯ ಪರಂಪರೆಯ ಮುಂದುವರಿಕೆಗೆ ದೊಡ್ಡ ತೊಡಕಾಗಿದೆ ಎಂದು ಅಭಿಪ್ರಾಯಪಟ್ಟರು. "ಇಂದಿನ ಕಾಲಭಾಷೆ ಪಕ್ವಗೊಳ್ಳಬೇಕಾದರೆ ಬಸವಣ್ಣ, ಸರ್ವಜ್ಞ, ಮುಂತಾದ ನೆಲಮೂಲ ಕವಿಗಳ ವಚನ/ಕವಿತೆಗಳ ಅಧ್ಯಯನ ಅವಶ್ಯ" ಎಂದರು.
ಹೈದರಾಬಾದ್‌ನ ತೆಲುಗು ಕವಯಿತ್ರಿ ಮರ್ಸಿ ಮಾರ್ಗರೇಟ್, ಆರನಕಟ್ಟೆ ರಂಗನಾಥ; ದೀಪಾ ಗೋನಾಳ, ಸೂರ್ಯಕೀರ್ತಿ, ಬಿ.ವಿ. ಸುನಿತಾ, ಕೆ.ಬಿ. ವೀರಲಿಂಗನಗೌಡ್ರ, ಜಬೀವುಲ್ಲಾ ಅಸಾದ್, ನಾಗರಾಜ ಹರಪನಹಳಿ, ಶಮೀಮ ಕುತ್ತಾರ್ ಕಾಸರಗೋಡು, ಸಿ.ಬಿ. ಐನಳ್ಳಿ, ಸದಾಶಿವ ಸೊರಟೂರು, ಎಂ ಎಂ ಮುಲ್ತಾನಿ, ಅಶೋಕ ಹೊಸಮನಿ, ಶಿಲ್ಪಾ ಮ್ಯಾಗೇರಿ, ಮಧು ಕಾರಗಿ ಮುಂತಾದ ಕವಿಗಳು ಕವನ ವಾಚಿಸಿದರು.
ನೀಲಣ್ಣವರ ಪರ ಮಹಾರಾಷ್ಟ್ರದ ಹೂಡಿಕೆದಾರನ ಬ್ಯಾಟಿಂಗ್: ಪೊಲೀಸರ ವಿರುದ್ದ ಆಕ್ರೋಶದ ಅಡಿಯೊ ವೈರಲ್
ಒಳಚರಂಡಿಗೆ ನುಗ್ಗುತ್ತಿದೆ ಮಳೆಯ ನೀರು : ಗಲ್ಲಿಯಲ್ಲಾ ಗಬ್ಬು ವಾಸನೆ, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜನರ ಹಿಡಿಶಾಪ
ಭಾರಿ ಮಳೆ, ಗಾಳಿಯಿಂದ ಹಾರಿಹೋದ ಸರ್ಕಾರಿ ಶಾಲೆಗಳ ಮೇಲ್ಚಾವಣಿ : ಮರ ಕಂಬಗಳು ಧರೆಗೆ
ಅಗಲಿದ ಅನಾಥನಿಗೆ ಅಗ್ನಿಸ್ಪರ್ಶ ಮಾಡಿ ಆಪತ್ಭಾಂದವನಾದ ವಿಜಯ ಮೋರೆ: ಅಂತ್ಯಕ್ರಿಯೆಗೆ ಮಾರ್ಕೆಟ್ ಪೊಲೀಸರ ಸಾಥ್
ದ್ವಿಚಕ್ರವಾಹನ ಕಳ್ಳರ ಬಂಧನ : 6.10 ಲಕ್ಷ ಮೌಲ್ಯದ 14 ವಾಹನಗಳ ವಶಕ್ಕೆ ಎಸ್ ಪಿ ರಾಮರಾಜನ್
ಸಾವಿರಾರು ಕೋಟಿ ವಂಚನೆ, ವರ್ಗಾವಣೆ ಆರೋಪ: ಶಿವಾನಂದ ನೀಲಣ್ಣವರ ಬಂಧನ 