ಬೆಂಗಳೂರು, ಫೆ.5 : ಮಕ್ಕಳಲ್ಲಿ ಉತ್ತಮ ಕಲಿಕೆಯನ್ನು ರೂಢಿಸುವ ನಿಟ್ಟಿನಲ್ಲಿ ನಾವೆಲ್ಲರೂ ಸೇರಿ ಕಾರ್ಯನಿರ್ವಹಿಸಬೇಕು ಎಂದು ರಾಜ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಆಯುಕ್ತ ಕೆ.ಜಿ ಜಗದೀಶ್ ತಿಳಿಸಿದ್ದಾರೆ.
ಇಂದು ಕೇಂದ್ರಿಯ ತರಬೇತಿ ಸಂಸ್ಥೆ ಕೆ ಎಂ ಎಫ್ ಸಂಕೀರ್ಣದಲ್ಲಿ ಗ್ಲಾಸ್ ರೂಟ್ ಅಂಡ್ ಅಡ್ವೊಕೆಸಿ ಮೂವ್‍ಮೆಂಟ್ ಮೈಸೂರು, ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ಹಾಗೂ ಸಾರ್ವಜನಿಕರ ಶಿಕ್ಷಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಮೂರನೇ 'ಅನುಭವತ್ಮಾಕ ಸಂಶೋಧನಾ' ವಿಚಾರ ಸಂಕಿರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳಲ್ಲಿ ಸರ್ವತೋಮುಖ ಅಭಿವೃದ್ಧಿಗೆ ಸುಗಮ ಶಿಕ್ಷಣ ಸಹಾಯಕವಾಗಲಿದೆ. ಇದಕ್ಕಾಗಿ ತಾವು ತಮ್ಮ ಶಾಲೆಯನ್ನು ಕೇಂದ್ರೀಕರಿಸಿ ತಮ್ಮ ಅನುಭವ, ಚಿಂತನೆ, ಗಮನಿಸುವಿಕೆಯಿಂದ ಕಂಡುಕೊಂಡಿರುವ ಶಾಲಾ ಸುಸ್ಥಿರ ಅಭಿವೃದ್ಧಿ ಕುರಿತಾದ ಪ್ರಯೋಗಗಳು, ಪ್ರಾತ್ಯಕ್ಷಿಕೆಗಳು, ಅಧ್ಯಯನ ಲೇಖನಗಳನ್ನು ಸಿದ್ಧಪಡಿಸಿ ಈ ಸಂಕಿರಣದಲ್ಲಿ ಮಂಡಿಸಲಾಗುತ್ತಿದೆ ಎಂದರು.
ಕಮ್ಮಟದಲ್ಲಿ ಅಪಾರ ಜ್ಞಾನ ಸಂಪತ್ತನ್ನು ಹೊಂದಿ ಮಕ್ಕಳ ಸಮಗ್ರ ಅಭಿವೃದ್ಧಿಗೆ ಪೂರಕವಾದ ಕಲಿಕೆ ಚಟುವಟಿಕೆಗಳನ್ನು ಅರಿತು ತಮ್ಮ ಶಾಲೆಗಳಲ್ಲಿ ಉತ್ತಮ ಪರಿಕಲ್ಪನೆಗಳನ್ನು ಒಳಗೊಂಡ ಕಲಿಕೆಯನ್ನು ಉಂಟುಮಾಡಲು ಸಹಕಾರಿ ಎಂದು ಅಭಿಪ್ರಾಯ ಪಟ್ಟರು.
ಗ್ರಾಮ್ ಸಂಸ್ಥೆಯ ಸಂಸ್ಥಾಪಕ ಬಾಲಸುಬ್ರಹ್ಮಣ್ಯಂ ಮಾತನಾಡಿ, ಸರ್ಕಾರದ ಜೊತೆ ಸಮುದಾಯದಲ್ಲಿ ಬದಲಾವಣೆ ತರುವಂತಹ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಲಾಗುತ್ತಿದೆ. ಜೊತೆಗೆ ಗ್ರಾಮೀಣ ಶಾಲೆಗಳ ಮಕ್ಕಳ ಪ್ರಗತಿಗೆ ಹಾಗೂ ಶಾಲೆಗಳ ಸಮಗ್ರ ಅಭಿವೃದ್ಧಿಗೆ ಪೂರಕವಾದ ವಾತಾವರಣವನ್ನು ಸೃಷ್ಟಿಸುವ ಮೂಲಕ ಮಹತ್ತರವಾದ ಕಾರ್ಯಗಳನ್ನು ನಿರ್ವಹಿಸುತ್ತಿದೆ ಎಂದರು.
ತಳಮಟ್ಟದ ಧ್ವನಿಗಳನ್ನು ಸರ್ಕಾರದ ಮಟ್ಟಕ್ಕೆ ತಲುಪಿಸುವ ಮೂಲಕ ನೀತಿ ರೂಪಣೆಗಳನ್ನು ಅನುಷ್ಠಾನ ಮಾಡುವ ಕಾರ್ಯ ಜಾರಿಯಲ್ಲಿದೆ. ಈ ನಿಟ್ಟಿನಲ್ಲಿ ಶಿಕ್ಷಕರು ತಳಮಟ್ಟದ ಅನುಭವತ್ಮಾಕ ಅನುಭವಗಳನ್ನು ತಮ್ಮ ಪ್ರಬಂಧ ಮಂಡನೆ ಮಾಡುವ ಮೂಲಕ ತಮ್ಮ ಶಾಲೆಗಳ ಪ್ರಗತಿಗೆ ಪೂರಕವಾದ ಅಂಶಗಳನ್ನು ಅನುಷ್ಠಾನ ಮಾಡಿಕೊಳ್ಳಲು ಈ ಸಮ್ಮೇಳನ ಸಹಕಾರಿಯಾಗಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಹಾಸನ, ಬೆಂಗಳೂರು, ಚಿಕ್ಕಬಳ್ಳಾಪುರ, ಮೈಸೂರು, ಮಂಡ್ಯ ಜಿಲ್ಲೆಯ ಶಿಕ್ಷಕ ಪ್ರತಿನಿಧಿಗಳು ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳು, ಗ್ರಾಮ್ ಸಂಸ್ಥೆಯ ಅಧಿಕಾರಿಗಳು ಸೇರಿದಂತೆ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.