ಸಿದ್ಧರಾಮೇಶ್ವರರ ತತ್ವ ಚಿಂತನೆಗಳು ಬದುಕಿನ ಆದರ್ಶಗಳಾಗಲಿ

ಹಾವೇರಿ.14:  ಶರಣರ ಆಚರಣೆಗಳು ಕೇವಲ ಆಚರಣೆಗೆ ಸೀಮಿತವಾಗದೆ, ಶಿವಯೋಗಿ ಸಿದ್ಧರಾಮೇಶ್ವರಂತಹ ಶರಣರ ತತ್ವ ಚಿಂತನೆಗಳು ನಮ್ಮ ಬದುಕಿನ ಆದರ್ಶಗಳಾಗಿ ಅಳವಡಿಸಿಕೊಳ್ಳಬೇಕು ಎಂದು  ಮುಂಡರಗಿಯ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ.ಆರ್.ಎಚ್ ಜಂಗನವಾರಿ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಅಖಿಲ ಕರ್ನಾಟಕ  ಭೋವಿ ವಡ್ಡರ ಸಂಘ ಇವರ ಸಹಯೋಗದಲ್ಲಿ ಮಂಗಳವಾರ ನಾಗೇಂದ್ರಮಟ್ಟಿಯ ಸಿದ್ದರಾಮೇಶ್ವರ ದೇವಸ್ಥಾನದ ಆವರಣದಲ್ಲಿ ಜರುಗಿದ  ಶ್ರೀ ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.

ಸಾಮೂಹಿಕ ವಿವಾಹ ವಿವಾಹಗಳನ್ನು ಮೊದಲಬಾರಿಗೆ ಆರಂಭಿಸಿದ ಕೀರ್ತಿ ಸಿದ್ಧರಾಮರಿಗೆ ಸಲ್ಲುತ್ತದೆ. ಕೆರೆಗಳ ನಿಮರ್ಾಣ, ನೊಂದವರಿಗೆ ದಾರಿದೀಪವಾಗಿ ಸಮಾನ ಸಮಾಜದ ನಿರ್ಮಾಣ ಕ್ಕೆ ಶ್ರಮಿಸಿದ ಮಹಾನುಭಾವರು ಎಂದು ಬಣ್ಣಿಸಿದರು.

ಮಕ್ಕಳ ತಜ್ಞರಾದ ಡಾ. ಪರಮೇಶ ಹಾವನೂರ ಮಾತನಾಡಿ, ಸರಕಾರದಿಂದ ಸಿಗುವಂತಹ ಯೋಜನೆಗಳನ್ನು ಸರಿಯಾಗಿ ಬಳಕೆ ಮಾಡಿಕೊಂಡು ಮುಂದೆ ಬಂದು ಸಮಾಜದ ಏಳ್ಗೆಗೆ ಪ್ರತಿಯೋಬ್ಬರು ಶ್ರಮಿಸಬೇಕು. ಇದು ಸ್ಪಧರ್ಾತ್ಮಕ ಯುಗವಾಗಿದ್ದು ವಡ್ಡರ ಸಮುದಾಯದ ಮಕ್ಕಳು ಕುಲಕಸುಬಗಳನ್ನೇ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ ಅವರು ತಾಂತ್ರಿಕ ಶಿಕ್ಷಣ ಕಡೆ ಒಲವು ಕೊಟ್ಟು ಪ್ರಗತಿಯತ್ತ ಸಾಗಬೇಕು ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ  ಶ್ರೀಮತಿ ಶಶಿಕಲಾ ಹುಡೇದ  ಅಧ್ಯಕ್ಷತೆ ವಹಿಸಿದ್ದರು. ಅಖಿಲಕರ್ನಾಟಕ  ಭೋವಿ ವಡ್ಡರ ಸಂಘದ ಜಿಲ್ಲಾಧ್ಯಕ್ಷ ರವಿ ಪೂಜಾರ, ಪ್ರಾಸ್ತಾವಿಕ ಮಾತನಾಡಿದರು.  ಮುಖಂಡರಾದ ಶಿವಬಸಪ್ಪ ಮುದ್ದಿ, ಹನುಮಂತಪ್ಪ ಒಡೆಯರ್, ಮಲ್ಲಿಕಾರ್ಜುನ  ಕೆ.ಬಿ, ದಾಸಪ್ಪ ಕರ್ಜಗಿ, ಜಗದೀಶ ಸವಣೂರ, ಆರ್.ಡಿ ಹಾವನೂರ, ವಾಯ್.ಎಚ್ ಪಾತ್ರೋಟಿ, ಬಸವರಾಜ ಸವಣೂರ, ದ್ಯಾಮಪ್ಪ ಅರಸನಾಳ, ನಿವೃತ ಸೈನಿಕರಾದ ರಾಮಣ್ಣ ಅರಸನಾಳ ಸೇರಿದಂತೆ ಇತರರು ಉಪಸ್ಥಿತರಿದ್ದರು. 

ಮೆರವಣಿಗೆ: ಮುಂಜಾನೆ 8 ಗಂಟೆಗೆ  ಶಿವಯೋಗಿ ಸಿದ್ಧರಾಮೇಶ್ವರ ಭಾವಚಿತ್ರದ ಮೆರವಣಿಗೆಗೆ ಶಾಸಕರಾದ ನೆಹರು ಓಲೇಕಾರ ಅವರು ಚಾಲನೆ ನೀಡಿದರು. ಹುಕ್ಕೇರಿಮಠದ ಸದಾಶಿವ ಸ್ವಾಮಿಜಿಗಳು, ಸಮಾಜದ ಮುಖಂಡರು ಭಾಗವಹಿಸಿದ್ದರು.  ಮೆರವಣಿಗೆಯಲ್ಲಿ ಪುರವಂತಿಕೆ, ಸಮ್ಮಾಳ, ವೀರಗಾಸೆ, ಡೊಳ್ಳು ಕುಣಿತ, ಜಗ್ಗಲಿಗೆ, ಕೋಲಾಟ, ಝಾಂಜ ಪಥಕ, ನಂದಿಕೋಲು ಕಲಾ ತಂಡಗಳು ಆಕರ್ಷಣೆ ಮೂಡಿಸಿದವು.