ಬಾಪು ತನ್ನ ಪ್ರಾಣಕ್ಕಿಂತಲೂ ಹೆಚ್ಚು ಪ್ರೀತಿಸಿದ ಕೋಮುಸೌಹಾರ್ದತೆಗೆ ಕಟಿಬದ್ಧರಾಗಿರೋಣ: ಸಿದ್ದರಾಮಯ್ಯ

ಬೆಂಗಳೂರು, ಜ.30 ಮಹಾತ್ಮ ಗಾಂಧಿ ಅವರ ಹುತಾತ್ಮ ದಿನದ ಅಂಗವಾಗಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ರಾಷ್ಟ್ರಪಿತನಿಗೆ ಗೌರವ ಸಲ್ಲಿಸಿದ್ದಾರೆ.ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಮಹಾತ್ಮ ಗಾಂಧೀಜಿ ಬದುಕಿದ ಸತ್ಯ, ಅಹಿಂಸೆ ಮತ್ತು ಶಾಂತಿಯ ಜೀವನ ಮೌಲ್ಯಗಳನ್ನು ನಮ್ಮದಾಗಿಸಿಕೊಂಡು ಮುನ್ನಡೆಯೋಣ.  ಬಾಪು ತನ್ನ ಪ್ರಾಣಕ್ಕಿಂತಲೂ ಹೆಚ್ಚು ಪ್ರೀತಿಸಿದ ಕೋಮುಸೌಹಾರ್ದತೆಗೆ ಕಟಿಬದ್ಧರಾಗಿರೋಣ ಎಂದು ತಿಳಿಸಿದ್ದಾರೆ.ಮಹಾತ್ಮ ಗಾಂಧೀಜಿಯವರ ಪುಣ್ಯ ತಿಥಿಯ ಅಂಗವಾಗಿ ನಗರದಲ್ಲಿ ಇಂದು ವಿವಿಧ ಸಂಘಟನೆಗಳು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿವೆ.

ಕರ್ನಾಟಕ ಗಾಂಧಿ ಸ್ಮಾರಕ ನಿಧಿಯಿಂದ ಬಾಪು 150ನೆ ಜನ್ಮ ವರ್ಷಾಚರಣೆ, ಗಾಂಧಿ ಚಿಂತಕರೊಂದಿಗೆ ಸಂವಾದ ಕಾರ್ಯಕ್ರಮವನ್ನು ಗಾಂಧಿ ಭವನದಲ್ಲಿ ಹಮ್ಮಿಕೊಂಡಿದೆ.  ಅದೇ ರೀತಿ ರಾಷ್ಟ್ರಪಿತ ಮಹಾತ್ಮ ಗಾಂಧಿ ಚಿಂತನಾ ವೇದಿಕೆಯಿಂದ ಗಾಂಧಿ ಕುರಿತ ಚಿಂತನ-ಮಂಥನ ಕಾರ್ಯಕ್ರಮ ಏರ್ಪಡಿಸಿದೆ.  ಸೌಹಾರ್ದತೆಗಾಗಿ ಕರ್ನಾಟಕ ಸಂಘಟನೆ ವತಿಯಿಂದ ಸೌಹಾರ್ದ ಸಂಕಲ್ಪ ಮಾನವ ಸರಪಳಿಯನ್ನು ಪುರಭವನದ ಬಳಿ ಆಯೋಜಿಸಿದೆ. ಗಾಂಧಿಯಾನ ಟ್ರಸ್ಟ್ ವತಿಯಿಂದ ಗಾಂಧಿಸ್ಮೃತಿ ಮಾಲೆಯ 15 ಕೃತಿಗಳ ಲೋಕಾರ್ಪಣಾ ಕಾರ್ಯಕ್ರಮವನ್ನು  ಭಾರತೀಯ ವಿದ್ಯಾಭವನದಲ್ಲಿ ಹಮ್ಮಿಕೊಂಡಿದೆ. ಗಾಂಧಿಯವರ ಹುತಾತ್ಮತೆಯನ್ನು ನೆನಪಿಸುವ ಮತ್ತು  ಎನ್‌ಆರ್‌ಸಿ ಮತ್ತು ಸಿಎಎ ಬಹಿಷ್ಕರಿಸಲು ಬೃಹತ್ ಮಾನವ ಸರಪಳಿಯನ್ನು ನಿರ್ಮಿಸಲು ನಾವು ಭಾರತೀಯರು ಸೇರಿದಂತೆ ವಿವಿಧ ಸಂಘಟನೆಗಳು ನಿರ್ಧರಿಸಿವೆ.  ಬೆಂಗಳೂರಿನ ನಾನಾ ಭಾಗಗಳಲ್ಲಿ ಸಂಜೆ 5.17ಕ್ಕೆ ಬೃಹತ್ ಮಾನವ ಸರಪಳಿ ನಿರ್ಮಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.