ಹಚ್ಚೋಣ ಬನ್ನಿ ಮತ್ತೆ ಕನ್ನಡದ ದೀಪ !
Let's light the Kannada lamp again!
ಪ್ರಾ. ಬಿ. ಎಸ್. ಗವಿಮಠ, ಬೆಳಗಾವಿ
ಬೆಳಗಾವಿ ಕನ್ನಡಿಗರ ಅಸ್ಮಿತೆ; ಕನ್ನಡಿಗರ ಪ್ರಾಣ; ಕನ್ನಡಿಗರ ರಕ್ತ. ಕಳೆದ ಶತಮಾನದ 40ರ ದಶಕದಲ್ಲಿ ವಿಶ್ವಕವಿ ಡಾ. ಡಿ.ಎಸ್.ಕರ್ಕಿ ಅವರು ಬರೆದ “ಹಚ್ಚೇವು ಕನ್ನಡದ ದೀಪ” ಕವನ ಇಂದು ವಿಶ್ವದ ತುಂಬ ಪ್ರಸಿದ್ಧಿ ಗಳಿಸಿ ಕನ್ನಡಿಗರನ್ನು ಒಗ್ಗೂಡಿಸಿದೆ. ಮರಾಠಿಗರು ಅಧಿಕವಾಗಿದ್ದ ಪ್ರದೇಶದಲ್ಲಿಯೇ ವಾಸವಾಗಿದ್ದು, ಕನ್ನಡಿಗರ ಭಾವನೆಗಳನ್ನು ಉದ್ದೀಪನಗೊಳಿಸಿದವರು ಡಾ. ಕರ್ಕಿ, ಡಾ. ಎಸ್.ಡಿ.ಇಂಚಲ, ಡಾ.ಬಿ.ಎ.ಸನದಿ, ಬ.ಗಂ. ತುರಮರಿ ಗುರುವರ‌್ಯರು. ನಾನು ಅಂದಾಜು 1950ರ ಕಾಲಘಟ್ಟದಲ್ಲಿ ಅಂದರೆ 1955-56-57ರ ಅವಧಿಯಲ್ಲಿ ಬೆಳಗಾವಿ ನರಗುಂದಕರ ಭಾವೆ ಚೌಕದಲ್ಲಿದ್ದ ಕನ್ನಡ ಪ್ರಾಥಮಿಕ ಶಾಲೆ ನಂ.1ರಲ್ಲಿ ವಿದ್ಯಾರ್ಥಿಯಾಗಿದ್ದೆ. ಆ ಶಾಲೆಯು ಕಲ್ಮಠ ಬೀದಿ, ಬಸವಣ್ಣ ಬೀದಿ, ಮಾರುತಿ ಬೀದಿ, ಗಣಪತಿ ಬೀದಿ, ಬೆಳಗಾವಿ ಮಾರ್ಕೆಟಗಳಿಗೆ ಹೊಂದಿಕೊಂಡ ಕೇಂದ್ರ ಸ್ಥಳದಲ್ಲಿತ್ತು. ಅದು 1870ರಲ್ಲಿ ಸ್ಥಾಪನೆಯಾಗಿತ್ತು. 1970ರಲ್ಲಿ ಅದರ ಶತಮಾನೋತ್ಸವವನ್ನು ಆಚರಿಸಿದ ನೆನಪು. ಮರಾಠಿ ಭಾಷಿಕರು ತುಂಬ ಆವೇಶಭರಿತರಾಗಿ, ಆಕ್ರಮಣಕಾರಿಯಾಗಿ ಬೆಳಗಾವಿಗಾಗಿ ಬೇಡಿಕೆ ಇಟ್ಟು ಹೋರಾಡುತ್ತಿದ್ದ ದಿನಗಳು. ಝೆಂಡಾ ಚೌಕದಲ್ಲಿ ಸಾರ್ವಜನಿಕ ಸಭೆಗಳನ್ನು ಆಯೋಜಿಸುವದು, ಸೈಕಲ್ ರಾ್ಯಲಿ ತೆಗೆಯುವದು, ಕನ್ನಡಿಗರನ್ನು ಕಂಡರೆ ಹೊಡಿ-ಬಡಿ ಮಾಡುವದು, ಅವರ ಟೊಪ್ಪಿಗೆಗಳನ್ನು ಕಿತ್ತೆಸೆಯುವದು, “ಜಯ ಮಹಾರಾಷ್ಟ್ರ ಮಾಝಾ” ರೆಕಾರ್ಡ ಹಾಕಿ ಇಡೀ ಊರಿಗೆ ಕೇಳುವಂತೆ ಮಾಡುವದು, ಚುನಾವಣೆಗಳಿದ್ದರೆ ಭಾವನೆಗಳನ್ನು ಕೆರಳಿಸುವ ಘೋಷಣೆಗಳನ್ನು ಕೂಗುವದು, ಕಲ್ಲೆಸೆಯುವದು, ಕನ್ನಡಿಗರ ಮನೆಗಳ ಮೇಲೆ ಹೊಲಸು ತಂದು ಹಾಕುವದು, ಕಾರ್ತಿಕ ಬುಟ್ಟಿಗಳಿಗೆ ಬೆಂಕಿ ಹಚ್ಚುವದು ಹೀಗೆ ಅನವರತ ಗಲಭೆಗಳನ್ನು ಮಾಡುತ್ತ ಬಂದವರು, ಇಂದಿಗೂ ಅವರ ಆ ಮನೋಭಾವ ಹೋಗಿಲ್ಲ. ಬಹುತಾಂಶ ಮರಾಠಿಗರು ರಾಷ್ಟ್ರೀಯ ಪ್ರವಾಹದಲ್ಲಿ ಬಂದು ಸೇರಿದ್ದಾರೆ. ಕರ್ನಾಟಕವನ್ನು ತೀವ್ರವಾಗಿ ವಿರೋಧಿಸುತ್ತಿಲ್ಲ. ಕನ್ನಡಿಗರೊಂದಿಗೆ ಹೊಂದಿಕೊಂಡಿದ್ದಾರೆ, ಕನ್ನಡ ಶಾಲೆಗಳಿಗೆ ತಮ್ಮ ಮಕ್ಕಳನ್ನು ಕಳಿಸುತ್ತಿದ್ದಾರೆ. ಕನ್ನಡ ಕಲಿಯದಿದ್ದರೆ ತಮ್ಮ ಮಕ್ಕಳಿಗೆ ಭವಿಷ್ಯವಿಲ್ಲ ಎಂಬುದನ್ನು ಅರಿತುಕೊಂಡಿದ್ದಾರೆ. ಮರಾಠಿಗರ ಅನೇಕ ಕುಟುಂಬಗಳು ಬೆಂಗಳೂರಿಗೆ ಬಂದು ಉದ್ಯೋಗ ಕಂಡುಕೊಂಡಿದ್ದಾರೆ.
1956ರಲ್ಲಿ ಕರ್ನಾಟಕ ರಾಜ್ಯದ ಉದಯವಾಯಿತು. 1973ರಲ್ಲಿ ‘ಕರ್ನಾಟಕ’ ಎಂಬ ಹೆಸರು ಅಧಿಕೃತವಾಯಿತು. ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗವೆಂದು ಬೆಳಗಾವಿಗಾಗಿ ತೀವ್ರ ಹೋರಾಟ ಮಾಡಿದವರು, ಕಲ್ಲುಗಳ ಪೆಟ್ಟು ತಿಂದವರು, ಸತತ ಹಿಂಸೆ ಅನುಭವಿಸಿದವರು ಬೆಳಗಾವಿ ನಗರದ ಕನ್ನಡಿಗರಿಗಿಂತ ಖಾಸಬಾಗ, ಶಹಾಪುರ, ವಡಗಾಂವಿಗಳ ಕನ್ನಡಿಗರು. ಅವರು ಅಶಿಕ್ಷಿತರಾಗಿದ್ದರು. ನೇಕಾರಿಕೆ ಅವರ ಉದ್ಯೋಗ. ಹರಿದು ತಿನ್ನುವ ಬಡತನ. ದಿನಾಲು ದುಡಿಯದಿದ್ದರೆ ಹೊಟ್ಟೆ ತುಂಬಲಾಗದ ಪರಿಸ್ಥಿತಿ. ಇಂಥದರಲ್ಲಿ ತಮ್ಮ ಪ್ರಾಣದ ಹಂಗು ತೊರೆದು ಬೆಳಗಾವಿಯನ್ನು ಕರ್ನಾಟಕದಲ್ಲಿ ಉಳಿಸಿಕೊಟ್ಟರು. ಬೀದಿಗೊಂದರಂತೆ ಯುವಕರ ಸಂಘ ಸ್ಥಾಪಿಸಿದರು. ಭುವನೇಶ್ವರಿ ಮೆರವಣಿಗೆ ಹೊರಡಿಸ ಹತ್ತಿದರು, ಮಹಾಜನ ಆಯೋಗ ನೇಮಕವಾದಾಗ “ರೇಲ್ ರೋಕೋ” ಮಾಡಿದರು, ದೂರದರ್ಶನದಲ್ಲಿ ಕನ್ನಡ ಕಾರ‌್ಯಕ್ರಮಗಳನ್ನು ಬಿತ್ತರಿಸಲು ಕೇಂದ್ರಕ್ಕೆ ಮುತ್ತಿಗೆ ಹಾಕಿದರು. ರಾಜಕುಮಾರ ಅಭಿಮಾನಿಗಳ ಸಂಘ ಸ್ಥಾಪಿಸಿದರು, ಬೋಗಾರವೇಸದಿಂದ ಚನ್ನಮ್ಮ ಸರ್ಕಲ್‌ವರೆಗೆ ಮೊಣಕಾಲಿನಲ್ಲಿ ನಡೆದು ರಕ್ತ ಸುರಿಯುತ್ತಿದ್ದರೂ ಜಪ್ಪೆನ್ನದೆ ಪ್ರತಿಭಟನೆ ಮಾಡಿದರು. ದೆಹಲಿವರೆಗೆ ನಿಯೋಗ ಒಯ್ದು ಕರ್ನಾಟಕದ ಹಕ್ಕೊತ್ತಾಯ ಮಾಡಿದರು.
ಖಾಸಬಾಗದ ಸಿದರಾಯಪ್ಪ ಕಣಬರಗಿ, ಶಂಕರ ಭಡಗಾವಿ, ಶಹಾಪುರದ ಮಹಾದೇವಪ್ಪ ಕಿತ್ತೂರ, ಎಸ್. ಎ. ಭೋಜ, ಮಲ್ಲಪ್ಪ ಬೆಟಗೇರಿ, ಶಂಕರ ಟೊಪಗಿ, ಮಾರುತಿ ಢವಳಿ, ಶಂಕರ ಬುಚಡಿ, ವಿಜಯ ಕಾಮಕರ, ಗಂಗಾಧರ ಕಾಕಡೆ ಇನ್ನೂ ಅನೇಕರು ನೆನಪಿಗೆ ಬರುತ್ತಾರೆ. ಶ್ರೀನಿವಾಸ ತಾಳೂಕರ ಇಂದಿಗೂ ತಮ್ಮ ಹೋರಾಟ ಬಿಟ್ಟಿಲ್ಲ. 50ರ ದಶಕದಲ್ಲಿ ಬೆಳಗಾವಿಯ ಅರವಿಂದ ಜೋಶಿ, ಬಾಬಾ ಕಟ್ಟಿ, ವೆಂಕಣ್ಣ ಗಲಗಲಿ, ಪಾರಿಸಪ್ಪ ಶೇರಿ, ಎನ್.ಎ. ಹಣಮಣ್ಣವರ, ಬಿ.ಬಿ. ಕಗ್ಗಣಗಿ ಮುಂತಾದವರು ಕನ್ನಡಕೆ ಬಲ ತುಂಬಿದರು. 1970-80ರ ಕಾಲಘಟ್ಟದಲ್ಲಿ ದಿವಂಗತ ಎಂ. ಎಸ್. ಟೋಪಣ್ಣವರ, ದಿ. ರಾಘವೇಂದ್ರ ಜೋಶಿ ಯುವಕರಲ್ಲಿ ಹೊಸ ಉತ್ಸಾಹ ತುಂಬಿ ಇತಿಹಾಸ ನಿರಿ್ಮಸಿದರು. ಕೆ.ಎಲ್.ಇ. ಸಂಸ್ಥೆಯ ಗಿಲಗಂಚಿ ಅರಟಾಳ ಹೈಸ್ಕೂಲು, ಲಿಂಗರಾಜ ಕಾಲೇಜುಗಳ ಅಧ್ಯಾಪಕರು, ವಿದ್ಯಾರ್ಥಿಗಳು ಕನ್ನಡ ಶಕ್ತಿ ಕೇಂದ್ರವಾದರು. ನಾಗನೂರು ರುದ್ರಾಕ್ಷಿಮಠದ ಉಚಿತ ಪ್ರಸಾದ ನಿಲಯದ ವಿದ್ಯಾರ್ಥಿಗಳು ಬೆಳಗಾವಿ ನಗರದಲ್ಲಿ ಕನ್ನಡಿಗರ ಭದ್ರ ಕೋಟೆ ಕಟ್ಟಿದರು. ಸಂಯುಕ್ತ ಕರ್ನಾಟಕ ದಿನಪತ್ರಿಕೆ ಕರ್ನಾಟಕ ಏಕೀಕರಣಕ್ಕಾಗಿ ಹುಟ್ಟಿಕೊಂಡು ನಿತ್ಯನಿರಂತರ ಕನ್ನಡಿಗರ ಹಿತರಕ್ಷಣೆ ಮಾಡುತ್ತ ಬಂದಿದ್ದು ಮರೆಯಲಾಗದು.
ಇಂದಿಗೆ ಕರ್ನಾಟಕ ಉದಯವಾಗಿ 69 ವರ್ಷಗಳೇ ಕಳೆದವು. ಮಹಾರಾಷ್ಟ್ರ ಸುಪ್ರೀಮ ಕೋರ್ಟ ಕದತಟ್ಟಿದೆ. ಆದರೆ ಅವರ “ಕೇಸು ಈವರೆಗೂ ಅಡಮಿಟ್” ಆಗಿಲ್ಲ. ಕಾರಣ ಗಡಿವಿವಾದ ಬಗೆಹರಿಸುವದು ಸುಪ್ರೀಮ ಕೋರ್ಟ ಕೆಲಸವಲ್ಲ. ಗಡಿಗಳ ಬದಲಾವಣೆ ಏನಿದ್ದರೂ ಸಂಸತ್ತಿನಲ್ಲಿ ಆಗಬೇಕು. ಮಹಾಜನ ವರದಿ ಜಾರಿಗೆ ಬಂದರೂ ಸರಿ, ಬರದಿದ್ದರೂ ಸರಿ ಬೆಳಗಾವಿ ಕರ್ನಾಟಕದಲ್ಲಿಯೇ ಉಳಿಯುತ್ತದೆ. ಬೆಳಗಾವಿ ಎಂದೆಂದಿಗೂ ಕನ್ನಡಿಗರದೇ. ಎಲ್ಲ ಆಯೋಗಗಳು ಅದನ್ನು ದೃಢೀಕರಿಸಿವೆ. ಬೆಳಗಾವಿ ಈಗ ಕರ್ನಾಟಕದ ಎರಡನೇ ರಾಜಧಾನಿ. ವಿಧಾನಮಂಡಲದ ಅಧಿವೇಶನಗಳು ಜರುಗುತ್ತಿವೆ. ಆದರೂ ಮರಾಠಿಗರು ಕನಸು ಕಾಣುವುದನ್ನು ಬಿಟ್ಟಿಲ್ಲ. ಮಹಾರಾಷ್ಟ್ರ ಸರಕಾರ ಕರ್ನಾಟಕದಲ್ಲಿನ ಗಡಿಭಾಗದ ಜನರ ನೆರವಿಗೆ ಅನೇಕ ಯೋಜನೆಗಳನ್ನು ರೂಪಿಸಿ, ಅವರಿಗೆ ಪ್ರೋತ್ಸಾಹಿಸುತ್ತಿದೆ. ಆದರೆ ಕರ್ನಾಟಕ ಸರಕಾರ ರಾಜ್ಯೋತ್ಸವ ಆಚರಣೆಗೆ ಅನುದಾನ ನೀಡುತ್ತಿಲ್ಲ, ಇಲ್ಲಿನ ಕನ್ನಡಪರ ಸಂಘ-ಸಂಸ್ಥೆಗಳಿಗೆ ಅನುದಾನ ನೀಡುತ್ತಿಲ್ಲ, ಇಲ್ಲಿಯ ಹೋರಾಟಗಾರರ ಬೇಡಿಕೆಗಳನ್ನು, ಇಲ್ಲಿಯ ಅನೇಕ ಖ್ಯಾತ ಸಾಹಿತಿಗಳ ಅನಿಸಿಕೆ, ಅಂಬೋಣ ಕೇಳುತ್ತಿಲ್ಲ, ಮನವಿಗಳನ್ನು ಪುರಸ್ಕರಿಸುತ್ತಿಲ್ಲ, ವಿಧಾನಸೌಧಕ್ಕೆ ಸಚಿವಾಲಯಗಳನ್ನು ತರುತ್ತಿಲ್ಲ !
ಇಲ್ಲಿಯ ಕನ್ನಡಿಗರು ಯಾರ ವಿರುದ್ಧ ಪ್ರತಿಭಟಿಸಬೇಕು ಹೇಳಿ?
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 