ಯೋಗಿನಾರೇಯಣ ಯತೀಂದ್ರರ ಜಯಂತಿ ಅರ್ಥಪೂರ್ಣವಾಗಿ ಆಚರಿಸೋಣ- ಕ್ಯಾಪ್ಟನ್ ಮಹೇಶ್ ಮಾಲಗಿತ್ತಿ
ಕೊಪ್ಪಳ 28: ಮಾರ್ಚ್ 15 ರಂದು ಯೋಗಿನಾರೇಯಣ ಯತೀಂದ್ರರ (ಕೈವಾರ ತಾತಯ್ಯ) ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸೋಣ ಎಂದು ಕೊಪ್ಪಳ ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ್ ಮಾಲಗಿತ್ತಿ ಹೇಳಿದರು.
ಅವರು ಶುಕ್ರವಾರ ಸಹಾಯಕ ಆಯುಕ್ತರ ಕಚೇರಿ ಸಭಾಂಗಣದಲ್ಲಿ ಕರೆದ ಯೋಗಿನಾರೇಯಣ ಯತೀಂದ್ರರ ಜಯಂತಿ ಆಚರಣೆ ಕುರಿತಾದ ಪೂರ್ವಭಾವಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.ಯೋಗಿನಾರೇಯಣ ಯತೀಂದ್ರರ (ಕೈವಾರ ತಾತಯ್ಯ) ಜಯಂತಿಯನ್ನು ಮಾರ್ಚ್ 14ರ ಬದಲಿಗೆ ಮಾ. 15 ರಂದು ಸರಳವಾಗಿ ಆಚರಿಸಬೇಕೆಂಬ ಸಮುದಾಯಗಳ ಮುಖಂಡರ ಕೋರಿಕೆ ಮೇರೆಗೆ ಅಂದು ಬೆಳಿಗ್ಗೆ 10.30 ಗಂಟೆಗೆ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಈ ಇಬ್ಬರೂ ಮಹನಿಯರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಪುಪ್ಪಾರ್ಚನೆ ಮಾಡಿ ಗೌರವಿಸಲಾಗುವುದು. ಈ ಸಂದರ್ಭದಲ್ಲಿ ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸಮಾಜದ ಮುಖಂಡರು ಉಪಸ್ಥಿತರಿರಬೇಕೆಂದು ಹೇಳಿದರು.ಜಯಂತಿ ದಿನದಂದು ಎಲ್ಲಾ ಶಾಲಾ-ಕಾಲೇಜುಗಳು ಹಾಗೂ ಸರಕಾರಿ ಕಛೇರಿಗಳಲ್ಲಿ ಯೋಗಿನಾರೇಯಣ ಯತೀಂದ್ರರ (ಕೈವಾರ ತಾತಯ್ಯ) ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಬೇಕು. ಜಯಂತಿ ಆಚರಣೆ ಕುರಿತು ಜನ ಪ್ರತಿನಿಧಿಗಳಿಗೂ ಮಾಹಿತಿ ನೀಡಿ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸೇರಿದಂತೆ ಇತರೆ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಈ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಬೇಕು. ಜಯಂತಿ ನಿಮಿತ್ತ ಜಿಲ್ಲಾಡಳಿತ ಭವನದಲ್ಲಿ ನಡೆಯುವ ಪೂಜಾ ಕಾರ್ಯಕ್ರಮಕ್ಕೆ ಅಗತ್ಯ ಸಿದ್ದತೆಗಳನ್ನು ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸಭೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕೊಟ್ರೇಶ ಮರಬನಳ್ಳಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಿಬ್ಬಂದಿ ತಿಪ್ಪಯ್ಯ ನಾಯ್ಡು, ಸಮಾಜದ ಮುಖಂಡರಾದ ಶ್ರೀನಿವಾಸ ಕಟ್ಟಿಮನಿ, ವಿನಯ ಕಟ್ಟಿಮನಿ, ವರಲಕ್ಷ್ಮೀ ಪಂಪಾಪತಿ, ಗೀರಿಶ್ ಕನಕಗಿರಿ, ಶ್ರೀಕಾಂತ ಕನಕಗಿರಿ ಹಾಗೂ ಮತ್ತಿತರರು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.