ಹುಲ್ಲತ್ತಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ: ಕೃಷಿ ಚಟುವಟಿಕೆ ಸ್ಥಗಿತ; ಚಿರತೆ ಸೆರೆಗೆ ಗ್ರಾಮಸ್ಥರ ಆಗ್ರಹ
Leopard spotted in Hullatti village; farming activities halted; villagers demand capture of the leop
ರಾಣೆಬೆನ್ನೂರು, ಸೆ.17: ತಾಲೂಕಿನ ಹುಲ್ಲತ್ತಿ ಗ್ರಾಮದ ಅರಣ್ಯ ಪ್ರದೇಶದ ಗಡಿ ಭಾಗಕ್ಕೆ ಹೊಂದಿಕೊಂಡಿರುವ ರೈತರ ಜಮೀನುಗಳಲ್ಲಿ ಚಿರತೆ ಕಾಣಿಸಿಕೊಂಡಿದ್ದು, ರೈತರು, ಕುರಿಗಾಹಿಗಳು ಹಾಗೂ ಗ್ರಾಮಸ್ಥರಲ್ಲಿ ಆತಂಕ ಉಂಟಾಗಿದೆ.
ಕಳೆದ ಕೆಲವು ದಿನಗಳಿಂದ ಗುಡ್ಡದ ಆನ್ವೇರಿ ಭಾಗದಲ್ಲಿ ಕುರಿಗಾಹಿಗಳಿಗೆ ಚಿರತೆ ಪ್ರತ್ಯಕ್ಷವಾಗಿ ಕಂಡಿದೆ. ಕುರಿ ಹಿಂಡಿನಲ್ಲಿದ್ದ ಮೂರ್ನಾಲ್ಕು ಮೇಕೆ ಮರಿಗಳನ್ನು ಚಿರತೆ ಹೊತ್ತೊಯ್ದು ತಿಂದಿರುವ ಘಟನೆ ಕೂಡ ನಡೆದಿದೆ ಎನ್ನಲಾಗಿದೆ.
ರೈತರು ಜಮೀನಿನಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದ ವೇಳೆ ಚಿರತೆ ಎತ್ತುಗಳ ಮೇಲೆ ದಾಳಿ ಮಾಡಲು ಮುಂದಾಗಿದ್ದು, ರೈತರು ಕೂಗಿಕೊಂಡಾಗ ಸ್ಥಳದಿಂದ ಪರಾರಿಯಾಗಿದೆ. ಇದರಿಂದ ಭಯಗೊಂಡ ರೈತರು ಎತ್ತುಗಳನ್ನು ಕರೆದುಕೊಂಡು ಮನೆಗೆ ಮರಳಿದ್ದಾರೆ.
ವಿಷಯ ತಿಳಿದು ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರೀಶೀಲನೆ ನಡೆಸಿದ್ದು, ರೈತರ ಜಮೀನುಗಳಲ್ಲಿ ಚಿರತೆ ಸಂಚರಿಸಿರುವ ಹೆಜ್ಜೆ ಗುರುತುಗಳು ಪತ್ತೆಯಾಗಿರುವುದನ್ನು ಖಚಿತಪಡಿಸಿದ್ದಾರೆ. ಚಿರತೆಯ ಚಲನವಲನಗಳ ಕುರಿತು ಸ್ಥಳೀಯರಿಂದ ಮಾಹಿತಿ ಪಡೆದು, ಎರಡು ಬೋನುಗಳನ್ನು ಅಳವಡಿಸಿದ್ದು, ಶೀಘ್ರವೇ ಚಿರತೆಯನ್ನು ಸೆರೆ ಹಿಡಿಯುವುದಾಗಿ ತಿಳಿಸಿದ್ದಾರೆ.
ಇದೇ ವೇಳೆ ಮುಂಗಾರು ಮಳೆ ಕೈಕೊಟ್ಟಿರುವ ಹಿನ್ನೆಲೆಯಲ್ಲಿ ಬೆಳೆ ಉಳಿಸಿಕೊಳ್ಳಲು ರೈತರು ಜಮೀನುಗಳಿಗೆ ನೀರು ಹಾಯಿಸಬೇಕಾಗಿದೆ. ಬೆಳಗಿನ ಜಾವ 4 ಗಂಟೆಗೆ ವಿದ್ಯುತ್ ಪೂರೈಕೆ ಮಾಡುತ್ತಿರುವುದರಿಂದ ಚಿರತೆ ಭೀತಿಯ ನಡುವೆ ಜಮೀನಿಗೆ ತೆರಳುವುದು ಕಷ್ಟವಾಗಿದ್ದು, ರಾತ್ರಿ ಬದಲಿಗೆ ಹಗಲು ವೇಳೆ ವಿದ್ಯುತ್ ಪೂರೈಸುವಂತೆ ರೈತರು ಹೆಸ್ಕಾಂ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ಅರಣ್ಯ ಇಲಾಖೆ ಅಧಿಕಾರಿಗಳು ಹೆಸ್ಕಾಂ ಅಧಿಕಾರಿಗಳೊಂದಿಗೆ ಚರ್ಚಿಸಿ, ಪರಿಸ್ಥಿತಿ ತಿಳಿಯಾಗುವವರೆಗೆ ರೈತರಿಗೆ ಹಗಲು ವೇಳೆ ವಿದ್ಯುತ್ ಪೂರೈಸುವಂತೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಚಿರತೆ ಸೆರೆಗೆ ಸಿಗುವವರೆಗೆ ಜಮೀನುಗಳಲ್ಲಿ ಕೃಷಿ ಕಾರ್ಮಿಕರು ಕೆಲಸಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಆದ್ದರಿಂದ ಕೂಡಲೇ ಚಿರತೆಯನ್ನು ಸೆರೆ ಹಿಡಿದು ರೈತರ ಆತಂಕ ನಿವಾರಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಅರಣ್ಯ ಇಲಾಖೆಯ ಜ್ಯೋತಿ ನಂದಿಕೋಳ (ಡಿಆರ್‌ಎಫ್), ಚಂದ್ರಮೌಳಿ ದುರ್ಗದ (ಅರಣ್ಯ ವೀಕ್ಷಕ), ಚನ್ನಬಸಪ್ಪ ಗುಗ್ಗರಿ, ಜಗದೀಶ ಕೆರೋಡಿ, ಮಂಜಣ್ಣ ಗುಗ್ಗರಿ, ಪುಟ್ಟು ಜ್ಯೋತಿ, ಮಲ್ಲೇಶ್ ಗುಗ್ಗರಿ, ಮಾರುತಿ ದೊಡ್ಡಮನಿ ಸೇರಿದಂತೆ ಹಲವರು ಇದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 