ಹುಲತ್ತಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ: ಕೃಷಿ ಚಟುವಟಿಕೆ ಸ್ಥಗಿತ

ಹುಲತ್ತಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ: ಕೃಷಿ ಚಟುವಟಿಕೆ ಸ್ಥಗಿತ  Leopard spotted in Hulatti village; agricultural activities halted


ರಾಣೇಬೆನ್ನೂರು, ಸೆ.17: ತಾಲೂಕಿನ ಹುಲತ್ತಿ ಗ್ರಾಮದ ಅರಣ್ಯ ಪ್ರದೇಶದ ಗಡಿ ಭಾಗದಲ್ಲಿರುವ ರೈತರ ಜಮೀನುಗಳಲ್ಲಿ ಚಿರತೆ ಕಾಣಿಸಿಕೊಂಡಿರುವುದರಿಂದ ರೈತರು, ಕುರಿಗಾಹಿಗಳು ಹಾಗೂ ಗ್ರಾಮಸ್ಥರಲ್ಲಿ ಆತಂಕ ಉಂಟಾಗಿದೆ.  

ಕಳೆದ ಕೆಲ ದಿನಗಳಿಂದ ಗುಡ್ಡದ ಆನೆವೇರಿ ಪ್ರದೇಶದಲ್ಲಿ ಚಿರತೆ ಕಾಣಿಸಿಕೊಂಡಿದ್ದು, ಕುರಿಹಿಂಡಿನಲ್ಲಿದ್ದ ನಾಲ್ಕು ಮೇಕೆ ಮರಿಗಳನ್ನು ಚಿರತೆ ಹೊತ್ತೊಯ್ದು ತಿಂದಿರುವ ಘಟನೆ ನಡೆದಿದೆ. ರೈತರು ತಮ್ಮ ದೈನಂದಿನ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾಗ ಚಿರತೆ ಏಕಾಏಕಿ ಎತ್ತುಗಳ ಮೇಲೆ ದಾಳಿ ಮಾಡಲು ಮುಂದಾಗಿದ್ದು, ರೈತರು ಜೋರಾಗಿ ಕಿರುಚಿಕೊಂಡ ಪರಿಣಾಮ ಚಿರತೆ ಸ್ಥಳದಿಂದ ಕಾಲ್ಕಿತ್ತಿದೆ. ಆತಂಕಗೊಂಡ ರೈತರು ಎತ್ತುಗಳನ್ನು ಓಡಿಸಿಕೊಂಡು ಮನೆಗೆ ಮರಳಿದ್ದಾರೆ.  

ಘಟನೆ ಕುರಿತು ಮಾಹಿತಿ ಪಡೆದ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಅಧಿಕಾರಿಗಳು ಸ್ಥಳ ಪರೀಶೀಲನೆ ನಡೆಸಿದರು. ರೈತರ ಜಮೀನುಗಳಲ್ಲಿ ಚಿರತೆ ಓಡಾಡಿರುವ ಹೆಜ್ಜೆ ಗುರುತುಗಳು ಪತ್ತೆಯಾಗಿವೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಖಚಿತಪಡಿಸಿದ್ದಾರೆ.  

ಚಿರತೆಯ ಚಲನವಲನ ಗಮನಿಸಿ ಎರಡು ಚಿರತೆ ಬೋನುಗಳನ್ನು ಅಳವಡಿಸಲಾಗಿದ್ದು, ಚಿರತೆಯನ್ನು ಸೆರೆ ಹಿಡಿಯಲು ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.  ಮುಂಗಾರು ಮಳೆ ಕೈಕೊಟ್ಟಿರುವ ಹಿನ್ನೆಲೆಯಲ್ಲಿ ಬೆಳೆ ಉಳಿಸಿಕೊಳ್ಳಲು ರೈತರು ನೀರಾವರಿ ಕಾರ್ಯಕ್ಕೆ ಜಮೀನುಗಳಿಗೆ ತೆರಳಬೇಕಾಗಿದೆ. ಆದರೆ ಚಿರತೆ ಭೀತಿಯಿಂದ ಕೃಷಿ ಕಾರ್ಮಿಕರು ಜಮೀನುಗಳಿಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಚಿರತೆಯನ್ನು ಶೀಘ್ರವಾಗಿ ಸೆರೆ ಹಿಡಿಯಬೇಕು ಎಂದು ರೈತರು ಒತ್ತಾಯಿಸಿದ್ದಾರೆ.  

ಇದೇ ವೇಳೆ, ರಾತ್ರಿ ವೇಳೆ ಮಾತ್ರ ನೀಡಲಾಗುತ್ತಿರುವ ವಿದ್ಯುತ್ನ್ನು ಹಗಲು ವೇಳೆಯಲ್ಲೂ ನೀಡುವಂತೆ ರೈತರು ಹೆಸ್ಕಾಂ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಈ ಕುರಿತು ಅರಣ್ಯ ಇಲಾಖೆ ಅಧಿಕಾರಿಗಳು ಹೆಸ್ಕಾಂ ಅಧಿಕಾರಿಗಳೊಂದಿಗೆ ಚರ್ಚಿಸಿ, ಪರಿಸ್ಥಿತಿ ತಿಳಿಯಾಗುವವರೆಗೆ ರೈತರಿಗೆ ಹಗಲು ವೇಳೆಯಲ್ಲಿ ವಿದ್ಯುತ್ ಪೂರೈಸುವ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.