ಗದಗ 17: ಇಂದಿನ ದಿನಮಾನಗಳಲ್ಲಿ ಪ್ರತಿಯೊಬ್ಬ ಮಹಿಳೆಯೂ ಕಾನೂನಿನ ಅರಿವು ಹೊಂದಬೇಕಿರುವುದು ಅಗತ್ಯವಿದೆ. ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಕಡಿವಾಣ ಹಾಕಲು ಕಠಿಣ ಕಾನೂನು ಕ್ರಮಗಳನ್ನು ಜಾರಿಗೊಳಿಸುವ ಅಗತ್ಯವಿದೆ. ಮಹಿಳೆಯೊಬ್ಬಳು ಸಮಾಜದಲ್ಲಿ ಸ್ವತಂತ್ರವಾಗಿ ಜೀವನ ನಡೆಸಲು ಕಾನೂನುಗಳು ಸಹಾಯಕವಾಗಲಿವೆ ಕೆ.ಎಲ್.ಇ ಸಂಸ್ಥೆಯ ಎಸ್. ಎ. ಮಾನ್ವಿ ಕಾನೂನು ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರಾದ ಡಾ. ಜ್ಯೋತಿ ಸಿ. ವಿ ತಿಳಿಸಿದರು.
ನಗರದ ಕೆ.ಎಲ್ ಸಂಸ್ಥೆಯ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಮಹಿಳಾ ಸಬಲೀಕರಣ ಘಟಕದ ವತಿಯಿಂದ ಮಹಿಳಾ ದಿನಾಚರಣೆ ಪ್ರಯುಕ್ತ ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸದಲ್ಲಿ ಅವರು ಮಾತನಾಡಿದರು.
ಮುಂದುವರೆದು ಮಾತನಾಡಿದ ಅವರು ಮಹಿಳೆ ಮೇಲಿನ ದೌರ್ಜನ್ಯ ಹಿಂದಿನಿಂದಲೂ ನಡೆದು ಬರುತ್ತಿದೆ. ಇವುಗಳ ಕಡಿವಾಣಕ್ಕೆ ಕಠಿಣ ಕಾನೂನು ಇದ್ದರೂ ಕೆಲವು ಸಂದರ್ಭದಲ್ಲಿ ಅದು ಬಳಕೆಯಾಗಲ್ಲ. ಅದ್ದರಿಂದ ಆರೋಪಿಗಳು ತಪ್ಪಿಸಿಕೊಳ್ಳಲು ಸಾಧ್ಯವಾಗುತ್ತಿದೆ. ಯಾವುದೇ ಮಹಿಳೆಯು ದೌರ್ಜನ್ಯಕ್ಕೆ ಒಳಗಾದಾಗ ಭಯಪಡದೆ, ನೇರವಾಗಿ ಪೋಲಿಸ್ ಠಾಣೆಗೆ ಹೋಗಿ ದೂರು ನೀಡಬೇಕು. ಕೆಲವು ಸಂದರ್ಭ ಹೆದರಿ ದೂರು ನೀಡಲು ಹಿಂಜರಿಯುತ್ತಾರೆ. ಆದ್ದರಿಂದ ದೌರ್ಜನ್ಯಗಳ ಸಂಖ್ಯೆ ಹೆಚ್ಚಾಗುತ್ತಿದೆ. ಆರ್ಥಿಕ ಸಮಸ್ಯೆ ಇದ್ದವರು ತಾಲೂಕು ಉಚಿತ ಕಾನೂನು ನೆರವು ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಉಚಿತ ಕಾನೂನು ನೆರವು ಸಿಗಲಿದೆ. ನೊಂದ ಮಹಿಳೆಯರು ಇದರ ಪ್ರಯೋಜನೆ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಎ. ಕೆ. ಮಠ ಮಾತನಾಡಿ ಪ್ರಾಚೀನ ಕಾಲದಿಂದ ಭಾರತದಲ್ಲಿ ಸ್ತ್ರೀಯರ ಮೇಲೆ ಶೋಷಣೆ ನಡೆಯುತ್ತಾ ಬಂದಿದೆ. ಪಾಶ್ಚಾತ್ಯ ದೇಶಗಳಿಗೆ ಹೋಲಿಸಿದರೆ ನಮ್ಮಲ್ಲಿ ಈಗಲೂ ಶೋಷಣೆ ಹೆಚ್ಚು ನಡೆಯುತ್ತಿದೆ. ಇಂದಿಗೂ ಸ್ತ್ರೀ ಸ್ವತಂತ್ರಳಾಗಿದ್ದಾಳೆಯೇ ಎನ್ನುವ ಪ್ರಶ್ನೆ ನಮ್ಮನ್ನು ಕಾಡುತ್ತಿದೆ. ಸಮಾಜದಲ್ಲಿರುವ ಗಂಡು ಹೆಣ್ಣಿನ ನಡುವಿನ ಅಂತರವನ್ನು ನಿವಾರಣೆ ಮಾಡಬೇಕಿದೆ. ಈ ನಿಟ್ಟಿನಲ್ಲಿ ಚಿಂತನೆ ನಡೆಸಬೇಕಿದೆ ಎಂದರು.
ಕಾರ‌್ಯಕ್ರಮದಲ್ಲಿ ಮಹಾವಿದ್ಯಾಲಯದ ಉಪನ್ಯಾಸಕರಾದ ಪ್ರೊ. ಗೌರ ಯಳಮಲಿ, ಪ್ರೊ. ವೀಣಾ ತಿರ್ಲಾಪುರ, ಪ್ರೊ. ವಿಶಾಲ ತೆಳಗಡೆ, ಪ್ರೊ. ನೇತ್ರಾವತಿ ಅಂಗಡಿ, ಡಾ. ನಿಂಗಮ್ಮ ಗದಗ ಉಪಸ್ಥಿತರಿದ್ದರು. ನಿರೂಪಣೆಯನ್ನು ಸಾಕ್ಷಿ ಹೊಸಮಠ ನೆರವೇರಿಸಿದರು. ಕು, ಮೇಘಾ ಮುದ್ದಿ ಪ್ರಾರ್ಥಿಸಿದರು. ಮಹಾವಿದ್ಯಾಲಯದ ಎಲ್ಲ ಉಪನ್ಯಾಸಕ ವೃಂದ ಮತ್ತು ವಿದ್ಯಾರ್ಥಿಗಳು ಹಾಜರಿದ್ದು ಕಾರ್ಯಕ್ರಮ ಯಶಸ್ವಿಗೊಳಿಸಿದರು.