ಕಾನೂನು ಅರಿವು ಪ್ರತಿಯೊಬ್ಬರಿಗೂ ಅಗತ್ಯ: ಕೆ.ಆರ್‌. ಕೋಟಿವಾಲೆ

ಕಾನೂನು ಅರಿವು ಪ್ರತಿಯೊಬ್ಬರಿಗೂ ಅಗತ್ಯ: ಕೆ.ಆರ್‌. ಕೋಟಿವಾಲೆ Legal awareness is essential for everyone: K.R. Kotiwale

 ರಾಯಬಾಗ 18: ಕಾನೂನು ನಮ್ಮ ಹುಟ್ಟಿನಿಂದ ಹಿಡಿದು ಸಾವಿನವರೆಗೂ ನಮ್ಮೊಂದಿಗೆ ಇರುವುದರಿಂದ ಪ್ರತಿಯೊಬ್ಬರೂ ಕಾನೂನಿನ ಬಗ್ಗೆ ಅರಿವು ಹೊಂದಿರಬೇಕು ಎಂದು ವಕೀಲರ ಸಂಘದ ಅಧ್ಯಕ್ಷ ಕೆ.ಆರ್‌. ಕೋಟಿವಾಲೆ ಹೇಳಿದರು.  

ತಾಲೂಕಿನ ನಿಲಜಿ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ಕಾನೂನು ಅರಿವು ನೆರವು ಕಾರ್ಯಕ್ರಮ ಹಾಗೂ ಶಾಲಾ ಸಂಸತ್ತಿಗೆ ನೂತನವಾಗಿ ಆಯ್ಕೆಯಾದ ಪ್ರತಿನಿಧಿಗಳ ಪ್ರಮಾಣ ವಚನ ಸ್ವೀಕಾರ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.  

ಶಾಲೆಯಲ್ಲಿ ನಡೆಯುವ ಎಲ್ಲ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸಿ ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಬೇಕು. ತಂದೆ-ತಾಯಿ ಹಾಗೂ ಶಿಕ್ಷಕರನ್ನು ಗೌರವಿಸಿ, ಅವರ ಮಾರ್ಗದರ್ಶನದಲ್ಲಿ ಉನ್ನತ ಶಿಕ್ಷಣ ಪಡೆದು ಸಮಾಜಕ್ಕೆ ಮಾದರಿಯಾಗಬೇಕು ಎಂದು ಸಲಹೆ ನೀಡಿದರು.  

ವಕೀಲ ಎಂ.ಎಂ. ಮಾಳಗೆ ಮಾತನಾಡಿ, ಮಗುವಿನ ತಾಯಿಯ ಗರ್ಭಾವಸ್ಥೆಯಿಂದ ಹಿಡಿದು ಜೀವನದ ಕೊನೆಯವರೆಗೂ ಕಾನೂನು ನಮ್ಮ ರಕ್ಷಣೆಗೆ ಇರುತ್ತದೆ ಎಂದರು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಮಕ್ಕಳು, ಮಹಿಳೆಯರು, ಬಡವರು ಹಾಗೂ ನಿರಾಶ್ರಿತರಿಗೆ ಕಾನೂನು ಸೇವಾ ಪ್ರಾಧಿಕಾರದ ಮೂಲಕ ಉಚಿತ ಕಾನೂನು ನೆರವು ದೊರೆಯುತ್ತದೆ. ಇದರ ಸದುಪಯೋಗ ಪಡೆಯಬೇಕು ಎಂದು ತಿಳಿಸಿದರು.  

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಉಪ ಪ್ರಾಚಾರ್ಯ ಐ.ಆರ್‌. ನದಾಫ್ ವಹಿಸಿದ್ದರು. ಎಸ್ಡಿಎಂಸಿ ಅಧ್ಯಕ್ಷ ಎ.ಎಸ್‌. ಹಸರೇ, ಉಪಾಧ್ಯಕ್ಷ ಭೀಮಗೌಡ ಪಾಟೀಲ, ವಕೀಲರಾದ ಸುಧೀರ ಕಳ್ಳೆ, ಕೆ.ಎ. ಬಿರಡಿ, ಕುಮಾರ ಮೋರೆ, ಬಾಳಾಸಾಹೇಬ ಪಾಟೀಲ ಸೇರಿದಂತೆ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.  

ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಶಾಲಾ ಸಂಸತ್ತಿಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಬೋಧಿಸಿ ಪ್ರಮಾಣ ಪತ್ರಗಳನ್ನು ನೀಡಲಾಯಿತು.