ವಿಜಯ್ ಸರ್ಕಾರಕ್ಕೆ ಹೊರಗಿನಿಂದಲೇ ಬೆಂಬಲ ಮುಂದುವರಿಕೆ; ಟಿವಿಕೆ ಮೈತ್ರಿ ಸಭೆಗೆ ಎಡಪಕ್ಷಗಳು ಗೈರು
Left Parties Skip TVK’s Post-Poll Allies’ Meet, Reiterate Outside Support to Vijay Government
ಚೆನ್ನೈ, ಜುಲೈ 1 : ಭಾರತೀಯ ಕಮ್ಯುನಿಸ್ಟ್ ಪಕ್ಷ (ಸಿಪಿಐ) ಮತ್ತು ಭಾರತೀಯ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸಿಸ್ಟ್) [ಸಿಪಿಐ(ಎಂ)] ಬುಧವಾರ ಆಡಳಿತಾರೂಢ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಆಯೋಜಿಸಿರುವ ಚುನಾವಣೋತ್ತರ ಮೈತ್ರಿಕೂಟ ಸಭೆಯಲ್ಲಿ ಭಾಗವಹಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದು, ತಾವು ವಿಜಯ್ ನೇತೃತ್ವದ ಸರ್ಕಾರಕ್ಕೆ ಹೊರಗಿನಿಂದ ಮಾತ್ರ ಬೆಂಬಲ ನೀಡುತ್ತಿದ್ದೇವೆ, ಸರ್ಕಾರದ ಭಾಗವಾಗಿಲ್ಲ ಎಂದು ಪುನರುಚ್ಚರಿಸಿವೆ.
ಮುಖ್ಯಮಂತ್ರಿ ವಿಜಯ್ ಅವರು ಮೇ 10ರಂದು ಅಧಿಕಾರ ವಹಿಸಿಕೊಂಡ ಬಳಿಕ ಟಿವಿಕೆ ಮೊದಲ ಬಾರಿಗೆ ಆಯೋಜಿಸಿರುವ ಈ ಸಭೆ ಚೆನ್ನೈನಿಂದ ಸುಮಾರು 40 ಕಿ.ಮೀ. ದೂರದ ಮಾಮಲ್ಲಪುರದಲ್ಲಿ ಬುಧವಾರ ಸಂಜೆ ನಡೆಯಲಿದೆ.
ಮುಖ್ಯ ಪ್ರತಿಪಕ್ಷ ಡಿಎಂಕೆ ಸರ್ಕಾರದ ಸ್ಥಿರತೆಯನ್ನು ಪ್ರಶ್ನಿಸುತ್ತಾ, ಯಾವುದೇ ಕ್ಷಣದಲ್ಲಿ ಮಧ್ಯಂತರ ವಿಧಾನಸಭೆ ಚುನಾವಣೆ ನಡೆಯಬಹುದು ಎಂದು ಪದೇ ಪದೇ ಹೇಳುತ್ತಿರುವ ಹಿನ್ನೆಲೆಯಲ್ಲಿ ಈ ಸಭೆಗೆ ಮಹತ್ವ ಬಂದಿದೆ.
ಪಕ್ಷದ ಮೂಲಗಳ ಪ್ರಕಾರ, ಈ ಸಭೆಯಲ್ಲಿ ಟಿವಿಕೆ ನೇತೃತ್ವದ ಮೈತ್ರಿಕೂಟಕ್ಕೆ ಹೊಸ ಹೆಸರನ್ನು ಅಂತಿಮಗೊಳಿಸುವ ಜೊತೆಗೆ, ರಾಜ್ಯದ ಪ್ರಸ್ತುತ ರಾಜಕೀಯ ಪರಿಸ್ಥಿತಿಯ ಬಗ್ಗೆಯೂ ಚರ್ಚೆ ನಡೆಯುವ ಸಾಧ್ಯತೆಯಿದೆ.
ಸಭೆಗೆ ಮುನ್ನ ಸಿಪಿಐ ರಾಜ್ಯ ಕಾರ್ಯದರ್ಶಿ ಎಂ. ವೀರಪಾಂಡಿಯನ್ ಹಾಗೂ ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಪಿ. ಶಣ್ಮುಗಂ ಅವರು ರಾಜ್ಯ ಕಾರ್ಯಾಲಯದಲ್ಲಿ ಮುಖ್ಯಮಂತ್ರಿ ವಿಜಯ್ ಅವರನ್ನು ಭೇಟಿ ಮಾಡಿ, ಸಭೆಯಲ್ಲಿ ಭಾಗವಹಿಸದಿರುವ ತಮ್ಮ ನಿರ್ಧಾರವನ್ನು ತಿಳಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮ ಪಕ್ಷಗಳು ಸರ್ಕಾರಕ್ಕೆ ಹೊರಗಿನಿಂದ ನೀಡುತ್ತಿರುವ ಬೆಂಬಲ ಮುಂದುವರಿಯಲಿದೆ ಎಂದು ಹೇಳಿದರು.
"ನಾವು ಸರ್ಕಾರದ ಭಾಗವಾಗಿಲ್ಲ. ನಾವು ಹೊರಗಿನಿಂದ ಬೆಂಬಲ ನೀಡುತ್ತಿದ್ದೇವೆ ಮತ್ತು ಅದು ಮುಂದುವರಿಯುತ್ತದೆ. ನಾವು ಅಧಿಕೃತವಾಗಿ ಮೈತ್ರಿಗೆ ಸೇರ್ಪಡೆಯಾಗಿಲ್ಲ. ಆದ್ದರಿಂದ ಮೈತ್ರಿಕೂಟ ಸಭೆಯಲ್ಲಿ ಭಾಗವಹಿಸುವುದಿಲ್ಲ," ಎಂದು ಅವರು ಹೇಳಿದರು.
ಈ ವೇಳೆ ಕರ್ನಾಟಕದೊಂದಿಗೆ ಉಂಟಾಗಿರುವ ಮೇಕೆದಾಟು ಅಣೆಕಟ್ಟು ವಿವಾದದ ಕುರಿತು ಸರ್ವಪಕ್ಷ ಸಭೆ ಕರೆಯುವುದು, ನಿರುದ್ಯೋಗ ಸಮಸ್ಯೆ ನಿವಾರಣೆ, ಶಿಕ್ಷಣ ಸಂಸ್ಥೆಗಳು ಹಾಗೂ ಸರ್ಕಾರಿ ಇಲಾಖೆಗಳಲ್ಲಿನ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವಂತಹ ಪ್ರಮುಖ ವಿಷಯಗಳನ್ನು ಮುಖ್ಯಮಂತ್ರಿ ಅವರ ಗಮನಕ್ಕೆ ತಂದಿದ್ದೇವೆ. ಈ ಎಲ್ಲ ವಿಷಯಗಳನ್ನು ಪರಿಗಣಿಸುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ ಎಂದು ಅವರು ತಿಳಿಸಿದರು.
ಎಡಪಕ್ಷಗಳನ್ನು ಹೊರತುಪಡಿಸಿ, ಕಾಂಗ್ರೆಸ್, ವಿದುತಲೈ ಚಿರುಥೈಗಲ್ ಕಚ್ಚಿ (ವಿಸಿಕೆ), ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್) ಹಾಗೂ ಮರುಮಲರ್ಚಿ ದ್ರಾವಿಡ ಮುನ್ನೇತ್ರ ಕಳಗಂ (ಎಂಡಿಎಂಕೆ) ಸೇರಿದಂತೆ ಉಳಿದ ಎಲ್ಲಾ ಬೆಂಬಲ ಪಕ್ಷಗಳು ಸಭೆಯಲ್ಲಿ ಭಾಗವಹಿಸಲಿವೆ.
ಈ ಸಭೆಯನ್ನು 'ಧನ್ಯವಾದ ಸಮಾವೇಶ' ಎಂದು ಬಣ್ಣಿಸಲಾಗಿದ್ದು, ಟಿವಿಕೆ ನೇತೃತ್ವದ ಮೈತ್ರಿಕೂಟಕ್ಕೆ ಅಧಿಕೃತ ರೂಪ ಹಾಗೂ ಹೊಸ ಹೆಸರನ್ನು ನೀಡುವ ಸಾಧ್ಯತೆಯಿದೆ.
ವಿಧಾನಸಭೆ ಚುನಾವಣೆಯಲ್ಲಿ ಟಿವಿಕೆ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ, ಸ್ಪಷ್ಟ ಬಹುಮತ ಪಡೆಯಲು ವಿಫಲವಾಗಿತ್ತು. ನಂತರ ಅಗತ್ಯ ಸಂಖ್ಯಾಬಲವನ್ನು ಒಗ್ಗೂಡಿಸಿಕೊಂಡ ವಿಜಯ್ ಅವರು ಮೇ 10ರಂದು ಸರ್ಕಾರ ರಚಿಸಿ, 234 ಸದಸ್ಯರ ವಿಧಾನಸಭೆಯಲ್ಲಿ 118 ಸದಸ್ಯರ ಬಹುಮತದ ಗಡಿಯನ್ನು ದಾಟಿದ್ದರು.
ನಂತರ ಸರ್ಕಾರ ವಿಶ್ವಾಸಮತವನ್ನು ಗೆದ್ದು, ಕಾಂಗ್ರೆಸ್, ವಿಸಿಕೆ ಹಾಗೂ ಐಯುಎಂಎಲ್ ಸದಸ್ಯರನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳುವ ಮೂಲಕ ರಾಜ್ಯದ ಮೊದಲ ಸಮ್ಮಿಶ್ರ ಸರ್ಕಾರವನ್ನು ರಚಿಸಿತು. ಸಿಪಿಐ ಮತ್ತು ಸಿಪಿಐ(ಎಂ) ಮಾತ್ರ ಸರ್ಕಾರದ ಹೊರಗಿನಿಂದ ಬೆಂಬಲ ನೀಡುವುದನ್ನು ಮುಂದುವರಿಸಿವೆ.
ಟಿವಿಕೆ ಸಚಿವರಾದ ಆಧವ್ ಅರ್ಜುನಾ ಮತ್ತು ಎನ್. ಆನಂದ್ ಸೇರಿದಂತೆ ಪಕ್ಷದ ಹಿರಿಯ ನಾಯಕರು ಮೈತ್ರಿ ಪಕ್ಷಗಳ ನಾಯಕರ ನಿವಾಸಗಳಿಗೆ ತೆರಳಿ ಸಭೆಗೆ ವೈಯಕ್ತಿಕ ಆಹ್ವಾನ ನೀಡಿದ್ದರು. ಮುಖ್ಯಮಂತ್ರಿ ವಿಜಯ್ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಸಭೆಯಲ್ಲಿ ಮೈತ್ರಿ ಪಕ್ಷಗಳ ಹಿರಿಯ ನಾಯಕರು, ಸಂಸದರು, ಶಾಸಕರು ಹಾಗೂ ಪ್ರಮುಖ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ.
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ
ಮಹಾ ಸಿಎಂ ಜೊತೆ ಎಮ್ ಇಎಸ್ ಉನ್ನತಾಧಿಕಾರ ಸಭೆ ರದ್ದು: ಝಾಪಾ ಮುಖಂಡರು ಬರಿಗೈಯಿಂದ ವಾಪಸ್
ವಿವಾಹಿತೆಯ ಜೊತೆ ಪಲಾಯನ ಮಾಡಿದ ಯುವಕನ ಮನೆ ಧ್ವಂಸ : ಮಾರಕಾಸ್ತ್ರ ಹಿಡಿದು 50ಕ್ಕು ಹೆಚ್ಚು ಜನರಿಂದ ಕೃತ್ಯ 