ಪರಭಾಷೆ ವ್ಯಾಮೋಹ ಬಿಟ್ಟು ಕನ್ನಡ ಭಾಷೆಯನ್ನು ಆರಾಧಿಸಿ: ಗೋವಿಂದ ಕಾರಜೋಳ

ಕಲಬುರಗಿ, ಫೆ.5 :  ಕನ್ನಡ ಭಾಷೆಯ  ಆರಾಧನೆ ಸಾಹಿತ್ಯ ಸಮ್ಮೇಳನದ ಧ್ಯೇಯ. ಪರಭಾಷೆ  ವ್ಯಾಮೋಹ ಬಿಟ್ಟು  ಕನ್ನಡ ಭಾಷೆಯನ್ನು ಮನೆ ಮನಗಳಲ್ಲಿ ಬಳಸಬೇಕು. ಕನ್ನಡಲ್ಲೇ  ವ್ಯವಹರಿಸಿ, ಕನ್ನಡ ಭಾಷೆಯನ್ನು ಮತ್ತಷ್ಟು ಬೆಳೆಸಲು ಎಲ್ಲಾ ಕನ್ನಡಿಗರು ಶ್ರಮಿಸಿ,  ಆರಾಧಿಸಬೇಕು ಎಂದು ಉಪಮುಖ್ಯಮಂತ್ರಿ ಗೋವಿಂದ ಎಂ ಕಾರಜೋಳ ಕರೆ  ನೀಡಿದ್ದಾರೆ. 

ಕಲಬುರಗಿಯಲ್ಲಿ  ಇಂದು 85 ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ಸ್ವಾಗತ ಭಾಷಣ ಮಾಡಿದ ಅವರು, 2500  ವರ್ಷಗಳ ಐತಿಹ್ಯ ವಿರುವ ಕನ್ನಡ ಭಾಷೆ ಶ್ರೀಮಂತವಾಗಿದ್ದು, ಗಟ್ಟಿಯಾಗಿದೆ‌. 12ನೇ  ಶತಮಾನದಲ್ಲಿ ಶರಣರು ಕನ್ನಡ ಭಾಷೆ  ಬೆಳೆಸಲು ಶ್ರಮಿಸಿದ್ದಾರೆ‌. ನಾವು ಇಂದು  ಬೆಂಗಳೂರಿನಲ್ಲಿ ಕನ್ನಡ ಮಾತನಾಡುವವರ ಸಂಖ್ಯೆ ಕ್ಷೀಣಿಸುತ್ತಿರುವುದು ವಿಷಾದನೀಯ ಸಂಗತಿ.  ಯಾರು ಯಾವುದೇ ಭಾಷೆಯಲ್ಲಿ ಮಾತನಾಡಿದರೂ ಕನ್ನಡಿಗರು ಕನ್ನಡ ಭಾಷೆಯಲ್ಲೇ ಉತ್ತರಿಸಬೇಕು  ಎಂದರು. 

ನುಡಿಯ ಆರಾಧನೆ ಸಾಹಿತ್ಯ‌ಸಮ್ಮೆಳನದ ಧ್ಯೇಯ.  ಕವಿಗಳು, ಸಾಹಿತಿಗಳು, ಸಂಶೋದಕರು, ಅಧ್ಯಾಪಕರು, ವಿದ್ಯಾರ್ಥಿಗಳ ಪಾತ್ರ ಮಹತ್ತರವಾದುದು.  ಇದೊಂದು ಸ್ತುತ್ಯಾರ್ಹ ಸಮ್ಮೇಳನವಾಗಿ ಹೊರಹೊಮ್ಮಬೇಕು. ಶರಣರು, ಸೂಫಿ ಸಂತರ ಈ ನಾಡಲ್ಲಿ  ಲಕ್ಷೋಪ ಲಕ್ಷೋಪ ಸಂಖ್ಯೆಯಲ್ಲಿ ಜನಸಾಗರ ಸಮ್ಮೇಳನಕ್ಕೆ ಆಗಮಿಸುತ್ತಿರುವುದು  ಸಮ್ಮೇಳನಕ್ಕೆ ಮತ್ತಷ್ಟು ಮೆರಗು ನೀಡಿದೆ. ನಾಡು ಹಾಗೂ ನುಡಿಯ ಆರಾಧನೆ ಮತ್ತು  ಸಬಲೀಕರಣಕ್ಕೆ ಪೂರಕವಾಗುವ ಈ ರೀತಿಯ ಸಾಹಿತ್ಯ  ಸಮ್ಮೇಳನಗಳು ಬೇರಾವ ರಾಜ್ಯಗಳಲ್ಲೂ  ನಡೆದಿಲ್ಲ ಎನ್ನುವುದನ್ನು ವಿಶ್ಲೇಷಿಸಿದಾಗ ಕನ್ನಡಿಗರ ಭಾಷೆ ಹಾಗೂ ನಾಡಪ್ರೇಮದ ಬಗ್ಗೆ  ಇಮ್ಮಡಿಯಾಗಲಿದೆ ಎಂದರು.

ಕನ್ನಡ ಸಾಹಿತ್ಯ ಪರಿಷತ್ತು ರಾಜ್ಯಾದ್ಯಂತ ತನ್ನ ಕಾರ್ಯ  ಚಟುವಟಿಕೆಗಳನ್ನು ವಿಸ್ತರಿಸಿ ಕೊಂಡಿರುವುದಲ್ಲದೇ ಗಡಿ ರಾಜ್ಯಗಳಾದ ಆಂಧ್ರಪ್ರದೇಶ,  ತಮಿಳುನಾಡು, ಕೇರಳ, ಗೋವಾ ಮತ್ತು‌ ಮಹಾರಾಷ್ಟ್ರಗಳಲ್ಲೂ ತನ್ನ ಘಟಕಗಳನ್ನು ಹೊಂದಿದೆ.  ರಾಜ್ಯದ, ನೆರೆ ರಾಜ್ಯಗಳು ಹಾಗೂ ದೇಶ ವಿದೇಶಗಳಲ್ಲಿ 30 ಲಕ್ಷಕ್ಕೂ ಅಧಿಕ  ಸದಸ್ಯರನ್ನು    ಹೊಂದಿದೆ. ಮೌಲಿಕವಾದ ಅತ್ಯುತ್ತಮ ಗ್ರಂಥಗಳನ್ನು ಜನಸಾಮಾನ್ಯರಿಗಾಗಿ ಹಳಗನ್ನಡ  ಕಾವ್ಯಗಳ, ಗದ್ಯಾನುವಾದಗಳನ್ನು‌ ಸಾಹಿತ್ಯ ಪರಿಷತ್ತು  ಪ್ರಕಟಿಸಲಾಗುತ್ತಿದೆ. 2000  ಕೃತಿಗಳನ್ನು ಪ್ರಕಟಿಸಿದೆ ಎಂದು ಕಾರಜೋಳ ಹೇಳಿದರು.

ಕನ್ನಡ ಸಾಹಿತ್ಯಕ್ಕೆ ಸಂಬಂಧಿಸಿದ ಕವಿ-ಕಾವ್ಯ ವಿಚಾರ  ಸಂಕಿರಣಗಳು, ಕಮ್ಮಟಗಳು, ಗೋಷ್ಠಿ ಗಳು ಮೊದಲಾದ ಸಾಹಿತ್ಯಿಕ ಕಾರ್ಯಕ್ರಮಗಳನ್ನು  ಹಮ್ಮಿಕೊಂಡು ಕನ್ನಡಿಗರಲ್ಲಿ ಜಾಗೃತಿಯನ್ನು‌ ಮೂಡಿಸುತ್ತಿದೆ. ಅಖಿಲ ಭಾರತ ಮಟ್ಟದ ಕನ್ನಡ  ಸಾಹಿತ್ಯ ಸಮ್ಮೇಳನಗಳನ್ನು ನಡೆಸುವ ಮೂಲಕ ವಿದ್ವಾಂಸರು, ಸಾಹಿತಿಗಳು, ಕನ್ನಡ  ಸಾಹಿತ್ಯಾಭಿಮಾನಿಗಳು ಒಂದೆಡೆ ಸೇರಿ ವಿಚಾರ ವಿನಿಮಯ ಮಾಡಿಕೊಳ್ಳಲು ವೇದಿಕೆಯನ್ನು  ಕಲ್ಪಿಸಲಾಗುತ್ತಿದೆ. ಈ‌ ಸಮ್ಮೇಳನದಲ್ಲಿ ಕನ್ನಡ ಭಾಷೆ, ಸಂಸ್ಕೃತಿ, ಕಾವ್ಯ,  ಸಂಗೀತ,  ಕಲೆ, ಸಂಸ್ಕೃತಿಯ ಕುರಿತು ಅತ್ಯುತ್ತಮ ಚರ್ಚೆ ಯಾಗಲಿ ಎಂದು ಹಾರೈಸಿ, ಈ. ಸಮ್ಮೇಳನಕ್ಕೆ  ರಾಜ್ಯ, ದೇಶ, ವಿದೇಶಗಳಿಂದ  ಆಗಮಿಸಿರುವ  ಎಲ್ಲ ಕನ್ನಡಿಗರಿಗೆ ಆದರವಾಗಿ ಸ್ವಾಗತಿದರು.

ಸಮ್ಮೇಳನವನ್ನು  ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಉದ್ಘಾಟಿಸಿ ಮಾತನಾಡಿದರು.  ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ ಮನುಬಳಿಗಾರ್ ಪ್ರಾಸ್ತಾವಿಕವಾಗಿ‌ ಮಾತನಾಡಿದರು.  ಡಾ. ಎಚ್. ಎಸ್. ವೆಂಕಟೇಶ ಮೂರ್ತಿ ಅವರು ಸಮ್ಮೇಳನದ ಅಧ್ಯಕ್ಷತೆವಹಿಸಿದ್ದರು.