'ಮಹಾ ಗಡಿ' ಕ್ಯಾತೆ ಬಿಡಿ: ಸಂಜಯ್ ರಾವತ್ ಗೆ ಅಶ್ವತ್ಥನಾರಾಯಣ ಸಲಹೆ

ಬೆಂಗಳೂರು, ಜ 19 :    ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಜನರನ್ನು ಭಾವನಾತ್ಮಕವಾಗಿ ಪ್ರಚೋದಿಸುವುದನ್ನು ಬಿಟ್ಟು ಒಳ್ಳೆಯ ಕೆಲಸ ಮಾಡುವುದು ಸೂಕ್ತ  ಎಂದು ಶಿವಸೇನಾ ಮುಖಂಡ ಸಂಜಯ್ ರಾವತ್ಗೆ ಉಪಮುಖ್ಯಮಂತ್ರಿ ಡಾ. ಸಿ ಎನ್  ಅಶ್ವತ್ಥನಾರಾಯಣ ಸಲಹೆ ನೀಡಿದ್ದಾರೆ.

ಮಲ್ಲೇಶ್ವರದಲ್ಲಿ  ಭಗವತ್ ಮಧ್ವಾಚಾರ್ಯರ ಪ್ರತಿಮೆ ಲೋಕಾರ್ಪಣೆ ಸಮಾರಂಭದಲ್ಲಿ ಭಾನುವಾರ ಪಾಲ್ಗೊಂಡ ಸಚಿವರು, ಮಾಧ್ಯಮದವರ ಜತೆ ಮಾತನಾಡಿದ ಅವರು,  ಮಹಾರಾಷ್ಟ್ರ-ಕರ್ನಾಟಕ ಗಡಿ ವಿಚಾರ ಮಹಾಜನ್ ವರದಿಯಲ್ಲೇ ಇತ್ಯರ್ಥ ಆಗಿದೆ. ಈ ವಿಚಾರವಾಗಿ  ಪದೇಪದೆ ರಾಜಕೀಯ ಪ್ರೇರಿತ ಹೇಳಿಕೆ ನೀಡಿ ಜನರನ್ನು ಭಾವನಾತ್ಮಕವಾಗಿ ಕೆರಳಿಸುವ ಕೆಲಸ ಕೈ ಬಿಡಬೇಕು. ಈಗಾಗಲೇ ಒಂದು ನಿಗದಿತ ಗಡಿ ನಿಶ್ಚಯ ಆಗಿದೆ. ಈ ವಿಚಾರವನ್ನು ಮತ್ತೆ ಮತ್ತೆ ಪ್ರಸ್ತಾಪಿಸುವುದು ಅನಗತ್ಯ ಎಂದರು.  

ಸಂಜಯ್ ರಾವತ್ ತಿಳಿವಳಿಕೆ ಇರುವ ವ್ಯಕ್ತಿ ಇಂಥ ಕ್ಷುಲ್ಲಕ ವಿಷಯದಲ್ಲಿ ಹೆಸರು ಹಾಳು ಮಾಡಿಕೊಳ್ಳಬಾರದು. ಇಂಥ ವಿಷಯ ಬಿಟ್ಟು, ಮಾಡಬೇಕಿರುವ ಉತ್ತಮ ಕಾರ್ಯಗಳನ್ನು ಕೈಗೆತ್ತಿಕೊಂಡರೆ ಒಳ್ಳೆಯದು ಎಂದರು.

ಮಾನವೀಯತೆಗೆ ಹಾಗೂ ಉತ್ತಮ ಕೆಲಸಗಳಿಗೆ ಯಾವುದೇ  ಗಡಿ ಇಲ್ಲ. ಕರ್ನಾಟಕ ಮತ್ತು ಮಹಾರಾಷ್ಟ್ರದ ಜನ ಸೌಹಾರ್ದತೆಯಿಂದ ಬಾಳುತ್ತಿದ್ದೇವೆ. ಅನಗತ್ಯ ವಿವಾದ ಎಳೆದು ತಂದು ಸಮಾಜದ ಶಾಂತಿ ಹಾಳುಗೆಡವಬಾರದು. ಸಾಮಾಜಿಕ, ಆರ್ಥಿಕ ಪ್ರಗತಿ ಸಾಧಿಸುವ ನಿಟ್ಟಿನಲ್ಲಿ ಎರಡು ರಾಜ್ಯಗಳು ಒಟ್ಟಿಗೆ ಕೆಲಸ ಮಾಡಬೇಕಿದೆ ಎಂದು ಮನವಿ ಮಾಡಿದರು.

ಶೀಘ್ರದಲ್ಲೇ ಸಂಪುಟ ವಿಸ್ತರಣೆ 

ಸಂಪುಟ ವಿಸ್ತರಣೆ ಕುರಿತು ಪ್ರತಿಕ್ರಿಯಿಸಿದ ಅಶ್ವತ್ಥನಾರಾಯಣ, ಈ ಸಂಬಂಧ ಮುಖ್ಯಮಂತ್ರಿ  ಬಿ.ಎಸ್.ಯಡಿಯೂರಪ್ಪ ಅವರು  ಕೇಂದ್ರ ಗೃಹಸಚಿವ ಅಮಿತ್ ಶಾ ಅವರ  ಜತೆ ಮಾತನಾಡಿದ್ದಾರೆ.  ಯಡಿಯೂರಪ್ಪ ಅವರು ವಿಶ್ವ ಆರ್ಥಿಕ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ದಾವೋಸ್ಗೆ ಪ್ರಯಾಣ ಬೆಳೆಸಿದ್ದು, ಅಲ್ಲಿಂದ ವಾಪಸಾದ ಕೂಡಲೇ ದಿಲ್ಲಿಗೆ ತೆರಳಿ ವರಿಷ್ಠರ ಜತೆ ಚರ್ಚೆ ನಡೆಸಲಿದ್ದಾರೆ. ಸಂಪುಟ ವಿಸ್ತರಣೆ ವಿಚಾರವಾಗಿ ಹೆಚ್ಚಿನ ಸ್ಪಷ್ಟತೆಗೆ ಮತ್ತೆ ಚರ್ಚೆ ಮಾಡಬೇಕಾದ ಕಾರಣ ಪ್ರಕ್ರಿಯೆ ಕೊಂಚ ವಿಳಂಬವಾಗಿದೆ. ಮುಖ್ಯಮಂತ್ರಿಗಳು ವಿದೇಶದಿಂದ ವಾಪಾಸ್ ಬಂದ ತಕ್ಷಣ ಸಂಪುಟ ವಿಸ್ತರಣೆ ನಡೆಯಲಿದೆ ಎಂದರು.

ಉಪಮುಖ್ಯಮಂತ್ರಿ ಸ್ಥಾನ ಕುರಿತು ಪಕ್ಷದ ವರಿಷ್ಠರು ಹಾಗೂ ಮುಖ್ಯಮಂತ್ರಿ ನಿರ್ಣಯ ಕೈಗೊಳ್ಳುವರು. ಪಕ್ಷ ಹಾಗೂ ಸರ್ಕಾರದ ಹಿತದೃಷ್ಟಿಯಿಂದ ವರಿಷ್ಠರು ಸೂಕ್ತ ನಿರ್ಣಯ ಕೈಗೊಳ್ಳುವರು ಎಂದರು.