ಈರುಳ್ಳಿ ಬೆಳೆಯಲ್ಲಿ ಎಲೆ ಮಚ್ಚೆ ರೋಗ: ಹತೋಟಿ ರೈತರಿಗೆ ಸಲಹೆ

ಈರುಳ್ಳಿ ಬೆಳೆಯಲ್ಲಿ ಎಲೆ ಮಚ್ಚೆ ರೋಗ: ಹತೋಟಿ ರೈತರಿಗೆ ಸಲಹೆ Leaf spot disease in onion crops: Advice to farmers on control

ಹುಲಕೋಟಿ 26 : ಗದಗ ಜಿಲ್ಲೆಯಲ್ಲಿ ಕಳೆದ ಹಲವಾರು ದಿನಗಳಿಂದ ಸತತವಾಗಿ ಬಿದ್ದ ಮಳೆಯಿಂದ ಈರುಳ್ಳಿ ಬೆಳೆಯಲ್ಲಿ ಎಲೆ ಮಚ್ಚೆ ರೋಗ ಹಾಗೂ ಸುರಳಿ ರೋಗಗಳ ಬಾಧೆ ಕಂಡು ಬಂದಿದೆ.  ಎಲೆ ಮಚ್ಚೆ ರೋಗ ಬಾಧಿತ ಗಿಡಗಳಲ್ಲಿ ಎಲೆಗಳ ಮೇಲೆ ಚಿಕ್ಕ ನೀರಿನಿಂದ ಆವೃತವಾದ ಗುಲಾಬಿ ಬಣ್ಣದ ಚುಕ್ಕೆಗಳು ಕಾಣಿಸಿಕೊಂಡು, ವಾತಾವರಣದಲ್ಲಿ ತೇವಾಂಶ ಇದ್ದಾಗ ನೇರಳೆ ಅಥವಾ ಕಂದು ಬಣ್ಣಕ್ಕೆ ತಿರುಗುತ್ತವೆ. ಬಾಧೆ ತೀವ್ರವಾದಂತೆ ಎಲೆ ಸಂಕುಚಿತಗೊಂಡು ಗಿಡಗಳು ಸಾಯುತ್ತವೆ. ಇದರ ಹತೋಟಿಗಾಗಿ 15 ಮಿ.ಲೀ ಡೈಫೆನ್‌ಕೊನಾಜೋಲ್ 25 ಇ.ಸಿ. ಅಥವಾ 15 ಮಿ.ಲೀ ಹೆಕ್ಸಾಕೋನಾಜೋಲ್ 5 ಇ.ಸಿ. ಓಷಧಿಯನ್ನು ಮತ್ತು 30 ಗ್ರಾಂ ನೀರಿನಲ್ಲಿ ಕರಗುವ 19:19:19 ಗೊಬ್ಬರವನ್ನು      15 ಲೀಟರ ಸಾಮರ್ಥ್ಯದ ಟಾಕಿಗೆ ಬೆರೆಸಿ ಬೆಳೆಗೆ ಸಿಂಪಡಿಸಬೇಕು.  

ಶೀಲೀಂದ್ರಗಳ ಬಾಧೆ, ಅತಿ ಹೆಚ್ಚಿನ ತೇವಾಂಶ ಹಾಗೂ ಬೋರಾನ್ ಕೊರತೆಯಿಂದ ಸುರಳಿರೋಗ ಕಾಣಿಸಿಕೊಳ್ಳುತ್ತದೆ. ಒಂದರಿಂದ ಮೂರು ತಿಂಗಳ ಬೆಳೆಯು ಸುರಳಿ ರೋಗಕ್ಕೆ ಬಹು ಬೇಗನೆ ತುತ್ತಾಗುತ್ತದೆ. ರೋಗದ ಬಾಧೆಗೊಳಗಾದ ಗಿಡವು ಸರಿಯಾಗಿ ಅಭಿವೃದ್ಧಿಯಾಗದೆ, ಎಲೆ ಹಾಗೂ ಕಾಂಡವು ಹಳದಿ ಬಣ್ಣಕ್ಕೆ ತಿರುಗುತ್ತವೆ ಹಾಗೂ ಕಾಂಡದ ಅಸಹಜ ಉದ್ದನೆಯ ಬೆಳವಣಿಗೆಯಾಗಿ ಮುದುಡಿ ತಿರುಗಿದಂತೆ ಕಾಣಿಸುತ್ತದೆ. ತೀವ್ರ ಬಾಧೆಗೊಳಗಾದಾಗ ಗಡ್ಡೆಗಳ ಬೆಳವಣಿಗೆ ಬಹಳಷ್ಟು ಕುಂಠಿತವಾಗಿ ಗಡ್ಡೆಯ ಕೊಳೆಯುವಿಕೆ ಪ್ರಾರಂಭವಾಗುತ್ತದೆ. ಇದರ ಹತೋಟಿಗಾಗಿ ರೈತರು ಹೊಲದಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು ಹಾಗೂ ಸಕಾಲದಲ್ಲಿ ಕಳೆಗಳ ನಿಯಂತ್ರಣ ಮಾಡಬೇಕು.  ಜೊತೆಗೆ ಎಲೆ ಮಚ್ಚೆ ರೋಗ ಹಾಗೂ ಸುರುಳಿ ರೋಗ ಕಂಡ ತಕ್ಷಣ 15 ಗ್ರಾಂ ಕಾರ್ಬನ್ ಡೈಜಿಮ್ ಅಥವಾ 15 ಮಿ.ಲೀ ಹೆಕ್ಸಾಕೊನಜೋಲ್, 30 ಗ್ರಾಂ ಬೋರಾನ್ ಮತ್ತು 75 ಗ್ರಾಂ 0:0:50 ನೀರಿನಲ್ಲಿ ಕರಗುವ ಗೊಬ್ಬರಗಳನ್ನು 15 ಲೀಟರ  ಸಾಮರ್ಥ್ಯದ ಟಾಕಿಗೆ ಬೆರೆಸಿ ಸಿಂಪಡಿಸಬೇಕು. ರೋಗದ ತೀವ್ರತೆ ಅಧಿಕವಾದಲ್ಲಿ 15 ಮಿ.ಲೀ ಅಜಾಕ್ಸಿಸ್ಟ್ರಾಬಿನ್‌+ಟೆಬುಕೊನಾಜೊಲ್ ಶೀಲೀಂದ್ರ ನಾಶಕವನ್ನು ಸಿಂಪಡಿಸಬೇಕು. ಸಾವಯವ ಪದ್ಧತಿಯಲ್ಲಿ ಈ ರೋಗಗಳನ್ನು ನಿರ್ವಹಣೆ ಮಾಡಲು 90 ಗ್ರಾಂ ಟ್ರೈಕೋಡರ್ಮಾ ಹಾರ್ಜಿಯಾನಮ್, 90 ಗ್ರಾಂ ಬ್ಯಾಸಿಲಸ್ ಸಬ್ಟಿಲಸ್  ಮತ್ತು 90 ಗ್ರಾಂ  ಸೂಡೋಮೋನಾಸ್ ಪ್ಲ್ಯೊರೊಸೆನ್ಸ ಜೈವಿಕ ಶೀಲೀಂಧ್ರನಾಶಕಗಳನ್ನು 15 ಲೀಟರ  ಸಾಮರ್ಥ್ಯದ ಟಾಕಿಗೆ ಬೆರೆಸಿ ಸಿಂಪಡಿಸಬೇಕು. ಈ ಶೀಲೀಂಧ್ರನಾಶಕಗಳು ಮೋಡ ಕವಿದ ವಾತಾವರಣವದಲ್ಲಿ ಉತ್ತಮವಾಗಿ ಕೆಲಸ ಮಾಡುತ್ತವೆ. ಲಘು ಪೋಷಕಾಂಶಗಳ ನಿರ್ವಹಣೆಗಾಗಿ 45 ಗ್ರಾಂ ಲಘು ಪೋಷಕಾಂಶಗಳ ಮಿಶ್ರಣವಾದ ಅರ್ಕಾ ತರಕಾರಿ ಸ್ಪೇಷಲ್, ಒಂದು ಶ್ಯಾಂಪೂ ಮತ್ತು ಒಂದು ನಿಂಬೆ ಹಣ್ಣಿನ ರಸವನ್ನು 15 ಲೀಟರ್ ನೀರಿನೊಂದಿಗೆ ಮಿಶ್ರಣಮಾಡಿ 40, 60 ಮತ್ತು 80 ದಿನಗಳ ಬೆಳೆಗೆ ಸಿಂಪಡಿಸುವುದರಿಂದ ಗುಣಮಟ್ಟದ ಗಡ್ಡೆಗಳನ್ನು ಪಡೆಯಬಹುದು.   

ಅರ್ಕಾ ತರಕಾರಿ ಸ್ಪೆಷಲ್ ಕೆ.ಎಚ್‌.ಪಾಟೀಲ ಕೃಷಿ ವಿಜ್ಞಾನ ಕೇಂದ್ರದಲ್ಲಿ ಲಭ್ಯವಿರುತ್ತದೆ.