ತಾಯಿಯ ಹಾರೈಕೆ ಕೋಟಿ ದೇವರ ಕರುಣೆಗೆ ಸಮ ಎನ್ನುವ ಲಕ್ಷ್ಮಿಕಾಂತನ ಗಜಲ್

‘ನಿನ್ನ ಎದೆಯಲ್ಲಿ ಸೌಹಾರ್ದದ ದೀಪ ಹಚ್ಚುತ್ತೇನೆ ಎಂದಿಗೂ ಆರದೆ ಉರಿಯುವ ವಿವೇಕದ ದೀಪ ಹಚ್ಚುತ್ತೇನೆ’ ಎನ್ನುವ ಕವಿ ಲಕ್ಷ್ಮಿಕಾಂತ ಮಿರಜಕರ ಹಾವೇರಿ ಜಿಲ್ಲೆಯ ಶಿಗ್ಗಾಂವ ತಾಲ್ಲೂಕಿನವರು. ಈಗ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ದೇವನಸಮುದ್ರದ ಇಂದಿರಾಗಾಂಧಿ ವಸತಿ ಶಾಲೆಯಲ್ಲಿ ಪ್ರಭಾರಿ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಗಜಲ್, ಕವಿತೆ, ಕಥೆಗಳ ಬರವಣಿಗೆ ಮತ್ತು ಓದಿನಲ್ಲಿ ತುಂಬಾ ಆಸಕ್ತಿ ಇಟ್ಟುಕೊಂಡಿರುವ ಇವರ ಕಥೆ, ಕವಿತೆ, ಗಜಲ್‌ಗಳು ರಾಜ್ಯದ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ರಾಜ್ಯ ಮತ್ತು ಜಿಲ್ಲಾಮಟ್ಟದ ಹಲವಾರು ಕವಿಗೋಷ್ಠಿ, ಕಮ್ಮಟಗಳಲ್ಲಿ ಭಾಗವಹಿಸಿದ್ದಾರೆ. ಧಾರವಾಡ ಆಕಾಶವಾಣಿಯಿಂದ ಕವಿತೆಗಳ ವಾಚನ ಪ್ರಸಾರಗೊಂಡಿದೆ. ವಸತಿ ಶಾಲೆಯ ಪ್ರತಿಭಾವಂತ ಮಕ್ಕಳ ಬರಹಗಳನ್ನು ಒಳಗೊಂಡಿರುವ ‘ಚಿಲುಮೆ’ ಎಂಬ ಸಂಪಾದನಾ ಗ್ರಂಥ ಪ್ರಕಟಿಸಿದ್ದಾರೆ. ‘ಬಯಲೊಳಗೆ ಬಯಲಾಗಿ’ ಎಂಬ ಚೊಚ್ಚಲ ಗಜಲ್ ಸಂಕಲನ ಕೂಡ ಪ್ರಕಟಗೊಂಡಿದೆ. ಸಂಕ್ರಮಣ ಕಾವ್ಯ ಬಹುಮಾನ, ನವೀನಚಂದ್ರ ಕಾವ್ಯ ಪುರಸ್ಕಾರ, ಗೋವಿಂದ ಪೈ ಸ್ಮಾರಕ ಕಾವ್ಯ ಬಹುಮಾನ, ಹಾವೇರಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕಾವ್ಯ ಬಹುಮಾನ, ಅಕ್ಷರ ಸಿರಿ ಕಾವ್ಯ ಸ್ಪರ್ಧೆ ಬಹುಮಾನಗಳು ಇವರಿಗೆ ಲಭಿಸಿವೆ. ಮೈಸೂರಿನ ಕನ್ನಡ ಕಾವಲು ಪಡೆ ಬಳಗದಿಂದ 2016 ನೇ ಸಾಲಿನ ‘ಆದರ್ಶ ಶಿಕ್ಷಕ ಪ್ರಶಸ್ತಿ’, ಚಿತ್ರದುರ್ಗದ ಸಿರಿಗನ್ನಡ ಪ್ರಕಾಶನ ಬಳಗದಿಂದ ‘ಕನ್ನಡ ರತ್ನ ಶಿಕ್ಷಕ ಪ್ರಶಸ್ತಿ’, ಚಿತ್ರದುರ್ಗ ಕನ್ನಡ ಸಾಹಿತ್ಯ ಪರಿಷತ್‌ನಿಂದ 2018ನೇ ಸಾಲಿನ ‘ಉತ್ತಮ ಕನ್ನಡ ಶಿಕ್ಷಕ ಪ್ರಶಸ್ತಿ’, ದಲಿತ ಸಾಹಿತ್ಯ ಪರಿಷತ್ ರಾಜ್ಯ ಘಟಕದಿಂದ ಗಜಲ್ ಕಾವ್ಯ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಇವರು ಬರೆದ ಗಜಲ್‌ನ ಓದಿನ ಜೊತೆಗೆ ಅದು ಹೊರಡಿಸುವ ಒಳನೋಟ ಓದುಗರಿಗಾಗಿ. 

          ಗಜಲ್ 

ಮನೆಯಲ್ಲಿ ದೇವರಿರುವಾಗ ಗುಡಿಗೆ ಹೋಗುವ ಜರೂರು ಏನಿದೆ 

ಜನ್ಮದಾತೆ ಅಮ್ಮನಿರುವಾಗ ಮಸೀದಿಗೆ ಹೋಗುವ ಜರೂರು ಏನಿದೆ 


ವೇದ, ಕುರಾನು ಕಲಿಯಲೆಂದು ವೇದಶಾಲೆ, ಮದರಸಾಗೆ ಹೋಗುವರು 

ಗುರುವಾಗಿ ಅಮ್ಮನಿರುವಾಗ ಇವುಗಳಿಗೆ ಹೋಗುವ ಜರೂರು ಏನಿದೆ 


ಅಮ್ಮನ ಮಡಿಲು ಮನದ ಬೇಗುದಿಗಳಿಗೆ ನೆರಳು ನೀಡುವ ಆಲದಂತೆ 

ಶಾಖ ತಾಳದೇ ತಂಪು ಅರಸಿ ಬಯಲಿಗೆ ಹೋಗುವ ಜರೂರು ಏನಿದೆ 


ಅಪ್ಪ, ಅಮ್ಮನ ಸೇವೆ ಮಾಡು ಎಲ್ಲ ದೇವರು ದುವಾ ನೀಡುವರು 

ಕಾಶಿ, ಕಾಬಾ, ವಾರಣಾಸಿಗಳಿಗೆ ಹೋಗುವ ಜರೂರು ಏನಿದೆ 

 

ಅಮ್ಮನ ಪ್ರೀತಿಗೆ ಯಾವ ಜಾತಿ, ಮತ, ಧರ್ಮಗಳ ಕಟ್ಟಳೆಯಿಲ್ಲ 

ಮಮತೆ ಮರೆತು ದ್ವೇಷ ಹಂಚುವ ಗೋಜಿಗೆ ಹೋಗುವ ಜರೂರು ಏನಿದೆ 


ಕೋಟಿದೇವರ ಕರುಣೆಗೆ ಸಮ ಅಮ್ಮನ ಒಂದು ಹಾರೈಕೆ ‘ಕಾಂತ’ 

ಅವಳ ಭಾವನೆಗೆ ಬೆಲೆಕೊಡು, ಜನ್ನತ್‌ಗೆ ಹೋಗುವ ಜರೂರು ಏನಿದೆ 


                                   - ಲಕ್ಷ್ಮಿಕಾಂತ ಮಿರಜಕರ 


ಕಣ್ಣಿಗೆ ಕಾಣುವ ಪ್ರತ್ಯಕ್ಷ ದೇವರು ಎಂದರೆ ತಾಯಿ ಮಾತ್ರ. ದೇವರು ತಾನು ಎಲ್ಲ ಕಡೆಗಳಲ್ಲೂ ಇರಲಿಕ್ಕಾಗುವುದಿಲ್ಲ ಎಂಬ ಕಾರಣಕ್ಕೆ ತಾಯಿಯನ್ನು ಸೃಷ್ಟಿಸಿದ ಎಂಬ ಮಾತು ಜನಜನಿತವಾದುದು. ಹೆತ್ತ ತಾಯಿಯ ಮಡಿಲು ಸ್ವರ್ಗಕ್ಕಿಂತಲೂ ಮಿಗಿಲು ಎಂಬುದು ಆಕೆಗಿರುವ ಎತ್ತರದ ಸ್ಥಾನವನ್ನು ಸೂಚಿಸುತ್ತದೆ. ಮೊದಲ ಗುರು ಎಂದೂ ಕೂಡ ತಾಯಿಯನ್ನು ಕರೆಯಲಾಗುತ್ತದೆ. ನವಮಾಸಗಳು ನಾವು ನೀಡಿದ ನೋವನ್ನುಂಡು ನಮಗೆ ಜನ್ಮ ನೀಡಿದವಳು. ನಾವು ಅತ್ತಾಗ ಅತ್ತು, ನಕ್ಕಾಗ ನಕ್ಕು ತನ್ನೆದೆಯ ದುಃಖಗಳನ್ನೆಲ್ಲ ದೂರವಿರಿಸಿದವಳು. ಅವ್ವನ ನಿಷ್ಕಲ್ಮಶ ಹೃದಯ, ಸ್ವಾರ್ಥರಹಿತ ತ್ಯಾಗ, ವಿಶಾಲ ಸಾಗರದಂಥ ಮಮತೆ, ಕಪಟವರಿಯದ ನಗು, ತೀರದ ಪ್ರೀತಿಯ ಒರತೆ ಎಂದೆಂದಿಗೂ ವರ್ಣಿಸಲಿಕ್ಕೆ, ವಿವರಿಸಲಿಕ್ಕೆ ಸಾಧ್ಯವಿಲ್ಲ. ಅಂತಹ ಅಮ್ಮನ ಅಪ್ಪಟ ಪ್ರೀತಿ, ಕರುಣೆ, ತ್ಯಾಗದ ಕುರಿತಾಗಿ ಬರೆದಿರುವ ಲಕ್ಷ್ಮಿಕಾಂತ ಮಿರಜಕರ ಅವರ ಗಜಲ್ ಕಾಡುತ್ತದೆ. 

‘ನೂರು ದೇವರನ್ನೆಲ್ಲ ನೂಕಾಚೆ ದೂರ ಹೆತ್ತ ತಾಯಿಯೇ ದೇವರೆಂದು ಪೂಜಿಸುವ ಬಾರಾ’ ಎಂಬ ಆಲೋಚನೆ ನಮ್ಮ ನಮ್ಮ ಮನಸಿನಲ್ಲಿ ಬಂದಂದೇ ಮಂದಿರ, ಮಸೀದಿ, ಚರ್ಚುಗಳ ಹೆಸರಿನಲ್ಲಿ ನಡೆಯುವ ಒಡಕು, ಭಿನ್ನಾಭಿಪ್ರಾಯಗಳು ದೂರವಾಗಬಹುದು. ಹಾಗೆಂದೇ ಮನೆಯಲ್ಲಿಯೇ ದೈವಸ್ವರೂಪಿ ಮಾತೆಯಿರುವಾಗ ಬೇರೆ ದೇವಸ್ಥಾನಗಳು ಅವಶ್ಯಕವೇ ಎಂಬ ಅಭಿಪ್ರಾಯವನ್ನು ಗಜಲ್ ವ್ಯಕ್ತಪಡಿಸುತ್ತದೆ. ತಾಯ ಕಾಲಬಳಿಯೇ ಜಗತ್ತಿನ ಸರ್ವಖುಷಿಗಳು ಅಡಗಿರುವಾಗ ‘ಎಲ್ಲೋ ಹುಡುಕಿದೆ ಇಲ್ಲದ ದೇವರ ಕಲ್ಲು ಮಣ್ಣುಗಳ ಗುಡಿಯೊಳಗೆ’ ಎಂಬ ವ್ಯರ್ಥಪ್ರಯತ್ನ ಮಾಡುವುದಾದರೂ ಏಕೆ? ಇನ್ನು, ಮನೆಯೇ ಮೊದಲ ಪಾಠಶಾಲೆ ಜನನಿ ತಾನೇ ಮೊದಲ ಗುರು. ಸಂಸ್ಕೃತಿ, ಮಾನವೀಯತೆ, ಧೈರ್ಯ, ತ್ಯಾಗ ಮುಂತಾದ ಗುಣಗಳನ್ನು ನಾವು ಅವ್ವನಿಂದಲೇ ಕಲಿಯುತ್ತೇವೆ. ಅಮ್ಮನ ಮಡಿಲಿನಲ್ಲಿ ಜಗತ್ತಿನ ಎಲ್ಲ ನೋವುಗಳಿಗೂ ಸಾಂತ್ವನವಿದೆ. ಹೆತ್ತ ತಾಯಿಯ ಸೇವೆ ಮಾಡಿದರೆ ಮಾತ್ರ ಎಲ್ಲ ದೇವರುಗಳ ಒಲುಮೆ ದಕ್ಕುತ್ತದೆ. ಬೇರೆ ಬೇರೆ ಧಾರ್ಮಿಕ ಸ್ಥಳಗಳಿಗೆ ತೆರಳಿದರೆ ಪುಣ್ಯ ಸಿಗುತ್ತದೆ ಎಂಬುದು ಸುಳ್ಳು. ಆಕೆಯ ಪ್ರೀತಿಗೆ ಧರ್ಮ, ಜಾತಿ, ಮತ, ಪಂಥಗಳ ಲಕ್ಷ್ಮಣರೇಖೆಯಿಲ್ಲ ಆಕೆಯ ಮಮತೆಯ ಸವಿಯನುಂಡ ಮೇಲೆ ದ್ವೇಷ ಹಂಚುವ ಮನಸ್ಸು ಯಾರೂ ಮಾಡಲಾರರು. ಆಕೆಯ ಒಂದು ಹಾರೈಕೆ ಕೋಟಿ ದೇವರ ಕರುಣೆಗೆ ಸಮ ಇದ್ದ ಹಾಗೆ, ಅವಳನ್ನು ಚೆನ್ನಾಗಿ ನೋಡಿಕೋ. ಸತ್ತ ನಂತರದ ಸ್ವರ್ಗಕ್ಕೆ ಹಂಬಲಿಸಬೇಡ; ಸ್ವರ್ಗವೇ ನಿನ್ನ ಬಳಿ ಬರುವುದು.  

‘ಕಾಂತ’ನ ಈ ಗಜಲ್ ಹೆತ್ತವಳನ್ನು ಹೇಗೆ ನೋಡಿಕೊಳ್ಳಬೇಕು ಎಂಬುದನ್ನು ಹೇಳುವುದರ ಜೊತೆಗೆ ತಾಯ ಪ್ರೀತಿಯ ಮುಂದೆ ಇನ್ಯಾವ ದೈವದ ಪ್ರೀತಿಯೂ ಸರಿಸಮ ನಿಲ್ಲಲಾರದು ಎಂಬ ಕರುಳಿನ ಸತ್ಯವನ್ನು ಅರಹುತ್ತದೆ. ಮತ್ತೆ ಮತ್ತೆ ಓದಬೇಕೆನ್ನುವ ಇಂತಹ ಅಪರೂಪದ ಗಜಲ್ ನೀಡಿದ ಕವಿಗೆ ನಮಸ್ಕರಿಸುವೆ. 

- * * * -