ಬೆಂಗಳೂರು, ಅ 16: ರಾಜ್ಯದಲ್ಲಿ ಆಡಳಿತ ವ್ಯವಸ್ಥೆ ಹಳಿ ತಪ್ಪಿದ್ದು, ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಉಪಕುಲಪತಿಯಂತಹ ಗಣ್ಯರ ಹತ್ಯೆಯಾಗುತ್ತಿದ್ದು, ಜನ ಸಾಮಾನ್ಯರಲ್ಲಿ ಆತಂಕ ಶುರುವಾಗಿದೆ ಎಂದು ಹಿರಿಯ ಕಾಂಗ್ರೆಸ್ ಮುಖಂಡ ವಿ.ಎಸ್. ಉಗ್ರಪ್ಪ ಟೀಕಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೈಲಿನಲ್ಲಿ ಪತ್ರಕರ್ತರ ಸಾವಾಗಿದ್ದು, ಬಾಗಲಕೋಟೆಯಲ್ಲಿ ಜೋಡಿಕೊಲೆ ವರದಿಯಾಗಿದೆ. ಒಟ್ಟಾರೆ ಬಿಜೆಪಿಯ ಸರ್ಕಾರದಲ್ಲಿ ಅಪರಾಧ ಚಟುವಟಿಕೆಗಳು ತಾಂಡವವಾಡುತ್ತಿದೆ. ಇದಕ್ಕೆಲ್ಲ ರಾಜ್ಯ ಸರ್ಕಾರದ ವೈಫಲ್ಯವೇ ಕಾರಣ ಎಂದು ಆರೋಪಿಸಿದರು.
ಬಿಬಿಎಂಪಿಯನ್ನು ಎನ್ ಆರ್ ರಮೇಶ್ ಎಂಬುವರು ನಿಯಂತ್ರಿಸುತ್ತಿದ್ದು, ಸ್ವತಃ ಬಿಬಿಎಂಪಿ ಅಧಿಕಾರಿಗಳೇ ಈ ಬಗ್ಗೆ ದೂರು ಕೊಡುತ್ತಿದ್ದಾರೆ.
ಎನ್. ಆರ್ ರಮೇಶ್ ಏನು ಕಮಿಷನ್ ಏಜೆಂಟರೋ, ಸೂಪರ್ ಮಿನಿಸ್ಟರೋ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರದ ಮುಖ್ಯಕಾರ್ಯದರ್ಶಿ ಅವರಿಗೆ ಎನ್ ಆರ್ ರಮೇಶ್ ಪತ್ರ ಬರೆದಿದ್ದು, ವೈಟ್ ಟಾಪಿಂಗ್ ಗೆ 4 ಜಿ ವಿನಾಯತಿ ಕೊಡಿ ಎಂದು ಮನವಿ ಮಾಡಿದ್ದಾರೆ. 16 ಕೋಟಿ ಮೊತ್ತದ ಕಾಮಗಾರಿಗಳಿಗೆ ಏಕೆ ಟೆಂಡರ್ ನೀಡಿಲ್ಲ?. ಇದರಲ್ಲಿ ಮುಖ್ಯಮಂತ್ರಿ ಕಚೇರಿಗೆ ಎಷ್ಟು ಕಿಕ್ ಬ್ಯಾಕ್ ಹೋಗಿದೆ? ಎಂದು ಎನ್ ಆರ್ ರಮೇಶ್ ವಿರುದ್ಧ ವಿ ಎಸ್ ಉಗ್ರಪ್ಪ ವಾಗ್ದಾಳಿ ನಡೆಸಿದರು.
ಮೇಲ್ಮನೆ ಸದಸ್ಯ ಪಿ.ಆರ್.ರಮೇಶ್ ಮಾತನಾಡಿ, ಹಿಂದಿನ ಬಿಜೆಪಿ ಸರ್ಕಾರದಲ್ಲಿ ಕಸದ ವಿಚಾರದಲ್ಲಿ ವಿಶ್ವಮಟ್ಟದ ಸುದ್ದಿಯಾಗಿತ್ತು. ಬಿಬಿಎಂಪಿ ಕಟ್ಟಡಗಳನ್ನೂ ಒತ್ತೆ ಇಡಲಾಗಿತ್ತು. ಬಿಜೆಪಿ ಸರ್ಕಾರದಲ್ಲಿ ಹಾಳಾಗಿದ್ದ ಬಿಬಿಎಂಪಿಯನ್ನು ಕಾಂಗ್ರೆಸ್ ಸರ್ಕಾರ ಸರಿಮಾಡಿದೆ. ಕಸವಿಲೇವಾರಿಯನ್ನು ಸಮರ್ಪಕವಾಗಿ ಮಾಡಲಾಗಿತ್ತು. ಹಾಗೆಯೇ ವೈಟ್ ಟ್ಯಾಪಿಂಗ್ ಕೂಡ ಸರಿಯಾಗಿ ನಿಭಾಯಿಸಲಾಗಿತ್ತು.
ಅದನ್ನೂ ಈಗ ಬಿಜೆಪಿ ಮತ್ತೆ ಹದಗೆಡಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಮೇಯರ್ ರಾಮಚಂದ್ರಪ್ಪ ಮಾತನಾಡಿ, ಟೆಂಡರ್ ಇಲ್ಲದೆ ಯಾವ ಕೆಲಸ ಮಾಡುವಂತಿಲ್ಲ. ಆದರೆ ಟೆಂಡರ್ ಇಲ್ಲದೆ ಬಿಜೆಪಿ ಸರ್ಕಾ ರ ನೂರಾರು ಕೋಟಿ ಕಾಮಗಾರಿಗಳಿಗೆ ಅಕ್ರಮವಾಗಿ ಟೆಂಡರ್ ನೀಡುತ್ತಿದೆ. ವೈಟ್ ಟ್ಯಾಪಿಂಗ್ ನಲ್ಲಿ ಅಕ್ರಮ ನಡೆದಿದೆ ಎಂದು ಕಾಮಗಾರಿ ನಿಲ್ಲಿಸಲಾಗಿತ್ತು. ಆದರೆ ಈಗ ಅವರೇ ಅದಕ್ಕೆ ಅವಕಾಶ ಕೊಡುತ್ತಿದ್ದಾರೆ. ಪಾಲಿಕೆ ಸದಸ್ಯರನ್ನು ಇವರು ಬ್ಲ್ಯಕ್ ಮೇಲ್ ಮಾಡುತ್ತಿದ್ದು, ಈತನ ವಿರುದ್ಧ ತನಿಖೆ ನಡೆಸಬೇಕೆಂದು ಆಗ್ರಹಿಸಿದರು.
ಮಾಜಿ ಮೇಯರ್ ಪದ್ಮಾವತಿ, ಸತ್ಯನಾರಾಯಣ್, ಶಿವರಾಜ್ ವಾಜೀದ್ ಮತ್ತಿತರರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.