‘ಪರೀಕ್ಷೆಗಳು ಅಂದು-ಇಂದು’ ಉಪನ್ಯಾಸ ಕಾರ್ಯಕ್ರಮಕ್ಕೆ ಚಾಲನೆ

‘ಪರೀಕ್ಷೆಗಳು ಅಂದು-ಇಂದು’ ಉಪನ್ಯಾಸ ಕಾರ್ಯಕ್ರಮಕ್ಕೆ ಚಾಲನೆ Launch of 'Exams Then and Now' lecture programme

ಧಾರವಾಡ 16: ವಿದ್ಯಾರ್ಥಿಗಳ ಜೀವನದಲ್ಲಿ ಯಶಸ್ಸು ಸುಮ್ಮನೆ ಸಿಗುವುದಿಲ್ಲ. ಅದಕ್ಕೆ ನಿರಂತರ ಪ್ರಯತ್ನ, ಆತ್ಮ ವಿಶ್ವಾಸ ಹಾಗೂ ಶ್ರದ್ಧೆ ಬಹಳ ಮುಖ್ಯ ಎಂದು ಗರಗದ ಎಸ್‌.ಜಿ.ಎಂ. ಟ್ರಸ್ಟ್‌ ಅಧ್ಯಕ್ಷ ಮಡಿವಾಳಗೌಡ್ರು ಪಾಟೀಲ ಅಭಿಪ್ರಾಯಪಟ್ಟರು.  

ಕರ್ನಾಟಕ ವಿದ್ಯಾವರ್ಧಕ ಸಂಘದ ಶಿಕ್ಷಣ ಮಂಟಪವು, ತಾಲೂಕಿನ ಗರಗದ ಎಸ್‌.ಜಿ.ಎಂ. ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ‘ಪರೀಕ್ಷೆಗಳು ಅಂದು-ಇಂದು’ ಉಪನ್ಯಾಸ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. 

ಪರೀಕ್ಷೆಯ ಬಗ್ಗೆ ಮಕ್ಕಳು ವಿನಾಕಾರಣ ಭಯಪಡಬಾರದು. ಆ ಭಯ ನಿಮ್ಮ ಏಕಾಗ್ರತೆ ಹಾಗೂ ಮನಸ್ಸಿನ ಶಕ್ತಿ ಕುಗ್ಗಿಸುತ್ತದೆ. ಅಧ್ಯಯನ ನಿರತರಾದಾಗ ಉತ್ಸಾಹದ ಬುಗ್ಗೆಗಳಾಗಿರಬೇಕು. ಪುನಃ ಪುನಃ ಓದುವುದು ಹಾಗೂ ಬರೆಯುವುದರಿಂದ ಜ್ಞಾಪಕ ಶಕ್ತಿ ವೃದ್ಧಿಯಾಗುತ್ತದೆ. ಗ್ರಾಮೀಣ ಮಕ್ಕಳಿಗಾಗಿ ಕ.ವಿ.ವ. ಸಂಘದ ಈ ಪ್ರಯತ್ನ ಖಂಡಿತ ಫಲ ಕೊಡುತ್ತದೆ ಎಂದರು. 

ಧಾರವಾಡದ ಡಿಮ್ಹಾನ್ಸ ಆಸ್ಪತ್ರೆಯ ಸಾಮಾಜಿಕ ಆರೋಗ್ಯ ಕಾರ್ಯಕರ್ತರಾಧ ಪ್ರಶಾಂತ ಪಾಟೀಲ ಉಪನ್ಯಾಸ ನೀಡಿ, ಪಿ.ಯು.ಸಿ ವಿದ್ಯಾರ್ಥಿ ಜೀವನದ ಮಹತ್ವದ ತಿರುವು. ಹಾರ್ಡವರ್ಕ ಬದಲು ವಿದ್ಯಾರ್ಥಿಗಳು ಸ್ಮಾರ್ಟ್‌ವರ್ಕ ಮಾಡಬೇಕು. ಓದುವಾಗ ಅನ್ಯ ವಿಷಯಗಳು ಮನಸ್ಸಿನಲ್ಲಿ ಪ್ರವೇಶಿಸದಂತೆ ಕಡಿವಾಣ ಹಾಕಬೇಕು. ಒತ್ತಡ ಹಾಗೂ ಮನಸ್ಸು ಗೊಂದಲದಲ್ಲಿದ್ದಾಗ ಓದಲೇಬಾರದು. ಸಮಯದ ಸದ್ಬಳಕೆ ಮಾಡಿಕೊಂಡು ಓದಿರಿ. ಹಾಳು ಹರಟೆ ನಿಮ್ಮ ಮನಸ್ಸಿನ ಏಕಾಗ್ರತೆ ನಷ್ಟ ಮಾಡುತ್ತದೆ. ಪಠ್ಯ ಪುಸ್ತಕ ಬಿಟ್ಟು ಅನ್ಯ ಡೈಜಿಸ್ಟ ಗೈಡ್ ಬಳಸಬಾರದು. ಆರೋಗ್ಯದ ಕಡೆ ಗಮನಹರಿಸಿ ಅಧ್ಯಯನಶೀಲರಾಗಿ ಎಂದರು. 

ಎಸ್‌.ಜಿ.ಎಂ. ಪ.ಪೂ. ಕಾಲೇಜ ಪ್ರಾಚಾರ್ಯ ಆನಂದ ತೋಟಗಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಧಾರವಾಡದ ಕ.ವಿ.ವ. ಸಂಘದ ಶಿಕ್ಷಣ ಮಂಟಪದ ಈ ಕಾರ್ಯ ಅಭಿನಂದನೀಯ. ಕಲಿಕೆಯಲ್ಲಿ ಗುಣಾತ್ಮಕ ಬದಲಾವಣೆ ತರಲು ಸಂಘದ ಈ ವಿನೂತನ ಪ್ರಯತ್ನ ಗ್ರಾಮೀಣ ಮಕ್ಕಳಿಗೆ ತುಂಬಾ ಲಾಭದಾಯಕವಾಗುತ್ತದೆ ಎಂದರು.  ವೇದಿಕೆಯ ಮೇಲೆ ಎಸ್‌.ಜಿ.ಎಂ. ಟ್ರಸ್ಟ್‌ ಸದಸ್ಯರಾದ ಸೋಮನಗೌಡ್ರು ಪಾಟೀಲ, ಸವಿತಾ ಕರೀಕಟ್ಟಿ, ಎಂ. ಜಿ. ಸುಬೇದಾರ ಮುಂತಾದವರಿದ್ದರು.  

ಪ್ರೊ. ಬಿ.ಎಚ್‌. ಕೋಟಿಗೌಡ್ರ ಸ್ವಾಗತಿಸಿದರು. ಉಪನ್ಯಾಸಕ ಭರತೇಶ ಕುರಕುರಿ ನಿರೂಪಿಸಿದರು. ಕ.ವಿ.ವ. ಸಂಘದ ಶಿಕ್ಷಣ ಮಂಟಪದ ಸಂಚಾಲಕ ವೀರಣ್ಣ ಒಡ್ಡೀನ ಪ್ರಾಸ್ತಾವಿಕವಾಗಿ ಮಾತನಾಡಿದರು. ಸೀತಾ ಸಾತಿಹಾಳ ವಂದಿಸಿದರು. ಉಪನ್ಯಾಸಕರಾದ ನಾಗರಾಜ ಪೆಂಡಾರಿ, ಶರಣು ಬಳಿಗಾರ, ಅಶೋಕ ಲಕ್ಕಪ್ಪನವರ್, ಜಹೀರ ತೋರಗಲ್ ಸೇರಿದಂತೆ 300 ವಿದ್ಯಾರ್ಥಿಗಳು ಬೋಧಕೇತರ ಸಿಬ್ಬಂದಿ ಇದ್ದರು.