ಲತಾ ಮಂಗೇಶ್ಕರ್ ಆರೋಗ್ಯ ಸ್ಥಿರ, ಚೇತರಿಸಿಕೊಳ್ಳುತ್ತಿದ್ದಾರೆ; ಕುಟುಂಬ ಮೂಲಗಳ ಹೇಳಿಕೆ

ಮುಂಬೈ, ನ 15   :     ತೀವ್ರ ಅಸ್ವಸ್ಥಗೊಂಡು  ಕಳೆದ ಸೋಮವಾರದಿಂದ ಇಲ್ಲಿನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ  ದಾಖಲಾಗಿ  ಚಿಕಿತ್ಸೆ ಪಡೆದುಕೊಳ್ಳುತ್ತಿರುವ   ಹಿರಿಯ ಗಾಯಕಿ ಲತಾ ಮಂಗೇಶ್ಕರ್  ಅವರ ಆರೋಗ್ಯ  ಸ್ಥಿರವಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಕುಟುಂಬ ಮೂಲಗಳು  ಶುಕ್ರವಾರ ಹೇಳಿವೆ.

"ಲತಾ ದೀದಿ   ಅವರ ಆರೋಗ್ಯ ಸ್ಥಿರವಾಗಿದೆ,  ಅವರು ಚೇತರಿಸಿಕೊಳ್ಳುತ್ತಿದ್ದಾರೆ.  ಅವರ ಆರೋಗ್ಯದ  ಕಾಳಜಿ ವಹಿಸಿ  ಅಕ್ಕರೆ ತೋರಿ ಪ್ರಾರ್ಥಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳು"  ಎಂದು  ಲತಾ ಮಂಗೇಶ್ಕರ್  ಟ್ವೀಟರ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ. 

ಅನಗತ್ಯ ವದಂತಿಗಳಿಗೆ ಕಿವಿಗೊಟ್ಟು,  ಪ್ರತಿಕ್ರಿಯಿಸುವುದರ ಬದಲು   ಲತಾ ದೀದಿ  ಅವರ  ಸುದೀರ್ಘ  ಬದುಕಿಗಾಗಿ ನಾವೆಲ್ಲ ಸಾಮೂಹಿಕವಾಗಿ ಪ್ರಾರ್ಥಿಸೋಣ  ಎಂದು  ಹಿರಿಯ  ಗಾಯಕಿಯ ತಂಡ  ಹೇಳಿಕೆಯಲ್ಲಿ  ಮನವಿಮಾಡಿದೆ. 

ಲತಾ ಮಂಗೇಶ್ಕರ್   ನ್ಯೂಮೋನಿಯಾ ಹಾಗೂ  ಶ್ವಾಶಕೋಶ ಸೋಂಕಿಗೆ ಒಳಗಾಗಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ  ಪತ್ತೆಯಾಗಿದೆ. 

ಅವರು ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ಆದರೆ, ಅವರು  ಚೇತರಿಸಿಕೊಳ್ಳಲು  ಸ್ವಲ್ಪ ಸಮಯ ತೆಗೆದುಕೊಳ್ಳಲಿದೆ.   ನ್ಯೂಮೋನಿಯಾ ಹಾಗೂ ಶ್ವಾಸಕೋಶ ಸೋಂಕಿನಿಂದ ಬಳಲುವ ಯಾವುದೇ ವ್ಯಕ್ತಿ   ಚೇತರಿಸಿಕೊಳ್ಳಲು ಸಾಕಷ್ಟು ಸಮಯ  ಬೇಕಾಗುತ್ತದೆ ಎಂದು ಆಸ್ಪತ್ರೆ ಮೂಲಗಳು ಹೇಳಿವೆ.