ಜಮೀನು ವಂಚನೆ ಆರೋಪ: 12 ರೈತರಿಂದ ಸುದ್ದಿಗೋಷ್ಠಿ

ಜಮೀನು ವಂಚನೆ ಆರೋಪ: 12 ರೈತರಿಂದ ಸುದ್ದಿಗೋಷ್ಠಿ  Land fraud allegations: Press conference by 12 farmers


ಬಳ್ಳಾರಿ, ಸೆ. 24: ತಾಲೂಕಿನ ರೂಪನಗುಡಿ ಹೋಬಳಿಯ ಸರ್ವೆ ನಂ. 253 ಮತ್ತು 254ಕ್ಕೆ ಸಂಬಂಧಿಸಿದ ಸುಮಾರು 56 ಎಕರೆ ಜಮೀನಿನ ವಿಚಾರದಲ್ಲಿ ವಂಚನೆ ನಡೆದಿದೆ ಎಂದು ಆರೋಪಿಸಿ 12 ರೈತರು ಸುದ್ದಿಗೋಷ್ಠಿ ನಡೆಸಿದರು.  

1992ರಲ್ಲಿ ಲಕ್ಷ್ಮೀನಾರಾಯಣ ಶೆಟ್ಟಿ ಕುಟುಂಬದವರಿಂದ ಜಮೀನು ಖರೀದಿಸುವ ಕುರಿತು ಅಗ್ರಿಮೆಂಟ್ ಮಾಡಿಕೊಂಡಿದ್ದು, 2025ರಲ್ಲಿ ತಮ್ಮ ಹೆಸರಿಗೆ ನೋಂದಣಿ ಮಾಡಿಸಿಕೊಂಡಿದ್ದಾಗಿ ರೈತರು ತಿಳಿಸಿದ್ದಾರೆ. ಆದರೆ, ಇದೇ ಜಮೀನನ್ನು ಸಿಂಗಾರಿ ಸೋಲಾರ್ ವಿದ್ಯುತ್ ಕಂಪನಿಗೆ ಎಕರೆಗೆ ?30 ಸಾವಿರ ಬಾಡಿಗೆ ದರದಲ್ಲಿ 29 ವರ್ಷಗಳ ಅವಧಿಗೆ ಗುತ್ತಿಗೆ ನೀಡಲಾಗಿದೆ ಎಂದು ಆರೋಪಿಸಿದ್ದಾರೆ.  

ಅನಂತಪುರ ಜಿಲ್ಲೆಯ ಉರವಕೊಂಡ ತಾಲೂಕಿನ ಕೊತ್ತಕೋಟ ಗ್ರಾಮದ ಸಿಂಗಾರಿ ಆಂಜನೇಯ, ಚಿಂಗಾರಿ ಸಂಜಣ್ಣ, ಜೋನಗಿರಿ ಭೀಮಣ್ಣ, ಜೋನಗಿರಿ ರಂಗಯ್ಯ, ಮಚ್ಚು ರವಿ, ಮಚ್ಚು ಕಾಶೀನಾಥ್, ಮಚ್ಚು ರಂಗಣ್ಣ ಸೇರಿದಂತೆ 12 ರೈತರು ಈ ಆರೋಪ ಮಾಡಿದ್ದಾರೆ.  

ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೈತರು, ತಮ್ಮ ಹೆಸರಿಗೆ ಜಮೀನು ನೋಂದಣಿ ಹಾಗೂ ಪಹಣಿ ವರ್ಗಾವಣೆ ಆಗದಂತೆ ಪೂರ್ವನಿಯೋಜಿತವಾಗಿ ತಕರಾರು ಅರ್ಜಿ ಸಲ್ಲಿಸಿ ದಾಖಲೆಗಳ ವರ್ಗಾವಣೆಗೆ ತಡೆ ಉಂಟುಮಾಡಲಾಗಿದೆ ಎಂದು ಆರೋಪಿಸಿದರು.  

ಜಮೀನು ಖರೀದಿ ಒಪ್ಪಂದದ ಬಳಿಕ ತಮ್ಮ ಹೆಸರಿಗೆ ನೋಂದಣಿ ಮಾಡಿಸುವ ಸಂದರ್ಭದಲ್ಲಿ ಸುಮಾರು ?40 ಲಕ್ಷವನ್ನು ಲಕ್ಷ್ಮೀನಾರಾಯಣ ಶೆಟ್ಟಿ ಕಂದಾಯ ಅಧಿಕಾರಿಗಳಿಗೆ ನೀಡುವಂತೆ ತಮ್ಮಿಂದ ವಸೂಲಿ ಮಾಡಿದ್ದಾರೆ ಎಂದು ರೈತರು ಆರೋಪಿಸಿದರು. ಆದರೂ ಪಹಣಿ ಮತ್ತು ಮ್ಯುಟೇಷನ್ ವರ್ಗಾವಣೆ ಆಗದಂತೆ ತಕರಾರು ಅರ್ಜಿ ಸಲ್ಲಿಸಿ ಜಮೀನಿನ ದಾಖಲೆಗಳನ್ನು ತಮ್ಮ ಹೆಸರಿಗೆ ವರ್ಗಾಯಿಸದಂತೆ ಮಾಡಿದ್ದಾರೆ ಎಂದು ದೂರಿದರು.  

ಈ ನಡುವೆ 56 ಎಕರೆ ಜಮೀನಿಗೂ ಸೌರ ವಿದ್ಯುತ್ ಕಂಪನಿಯಿಂದ ಮುಳ್ಳುತಂತಿ ಫೆನ್ಸಿಂಗ್ ಅಳವಡಿಸಲಾಗುತ್ತಿದ್ದು, ಇದರಿಂದ ಜಮೀನಿನಲ್ಲಿ ಕೃಷಿ ಚಟುವಟಿಕೆ ನಡೆಸಲು ತೊಂದರೆಯಾಗುತ್ತಿದೆ ಎಂದು ರೈತರು ತಿಳಿಸಿದ್ದಾರೆ.  

ತಮ್ಮ ಜಮೀನಿನ ಸಮಸ್ಯೆಯನ್ನು ಕೂಡಲೇ ಬಗೆಹರಿಸಿ, ದಾಖಲೆಗಳನ್ನು ತಮ್ಮ ಹೆಸರಿಗೆ ವರ್ಗಾಯಿಸುವಂತೆ ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ರೈತರು ಒತ್ತಾಯಿಸಿದ್ದಾರೆ.