ಸತುವಿನ ಕೊರತೆ ಸೈನಿಕ ಹುಳುವಿನ ಬಾಧೆೆ: ಹತೋಟಿ ಕ್ರಮಕ್ಕೆ ಸಲಹೆ

ಲೋಕದರ್ಶನವರದಿ

ರಾಣೆಬೆನ್ನೂರ. ಜೂ 29: ತಾಲೂಕಿನ ಕಾಕೋಳ ತಾಂಡಾ(ವೆಂಕಟಾಪುರ) ಗ್ರಾಮದಲ್ಲಿ ಮೇ ತಿಂಗಳ ಕೊನೆಯ ವಾರದಲ್ಲಿ ಗೋವಿನ ಜೋಳವು ಬಿತ್ತನೆಯಾಗಿದ್ದು, ಪೋಷಕಾಂಶಗಳಾದ ರಂಜಕ ಹಾಗೂ ಸತುವಿನ ಕೊರತೆ ಮತ್ತು ಸೈನಿಕ ಹುಳುವಿನ ಬಾಧೆ ಕಂಡು ಬಂದಿದೆ ಎಂದು ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಡಾ.ಅಶೋಕ.ಪಿ ಹೇಳಿದರು.

  ಕೃಷಿ ವಿಜ್ಞಾನಿಗಳ ನೇತೃತ್ವದ ತಂಡ ರೈತರ ಹೋಲಗಳಿಗೆ ನೇರವಾಗಿ ಭೇಟಿ ನೀಡಿ ಸೈನಿಕ ಹುಳು ಹತೋಟಿ ಕ್ರಮದ ಕುರಿತು ವೆಂಕಟಾಪುರ ಗ್ರಾಮದ ರೈತರಿಗೆ ಸಲಹೆ ನೀಡಿದರು. ಅದೇ ದಿನ ರಾಣೆಬೆನ್ನೂರ ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಗೋವಿನ ಜೋಳದ ಬೆಳೆಯನ್ನು ಪರಿಶೀಲಿಸಿದರು. ಕ್ಷೇತ್ರ ಭೇಟಿಯ ಸಮಯದಲ್ಲಿ ಗೋವಿನ ಜೋಳದ ಬೆಳೆಗಳು 15 ರಿಂದ 20 ದಿನಗಳ ಬೆಳೆಯಿದ್ದು ಪೋಷಕಾಂಶದ ಕೊರತೆಗಳು ಕಂಡು ಬಂದಿರುತ್ತದೆ ಎಂದರು.

  ಎಲೆಗಳ ಅರ್ಧ ಭಾಗವು ನೀಲಿ ಬಣ್ಣದಿಂದ ಕೂಡಿದ್ದು ಸಣ್ಣ ಎಲೆಯ ತುದಿ ಭಾಗದಲ್ಲಿ ಕೆಂಪಾಗಿ ಕಾಣುತ್ತಿದ್ದು ಇದು ರಂಜಕದ ಕೊರತೆಯಾಗಿರುತ್ತದೆ. ಜೊತೆಗೆ ಎಲೆಯ ಅಂಚಿನಲ್ಲಿ ಮತ್ತು ಮಧ್ಯದ ಭಾಗದಲ್ಲಿ ಬಿಳಿಯ ಪಟ್ಟಿಗಳು ಕಾಣಿಸುತ್ತಿದ್ದು ಸತುವಿನ ಕೊರತೆ ಆಗಿರುತ್ತದೆ. ರೈತರು ಆತಂಕ ಪಡದೆ ಈ ಬೆಳೆಯ ಎಲೆಗಳು ಕೆಂಪಾಗಿ ಮತ್ತು ಬೆಳ್ಳಗೆ ಕಂಡುಬಂದ ತಕ್ಷಣ 19:19:19 ನೀರಿನಲ್ಲಿ ಕರಗುವ ರಸಗೊಬ್ಬರ (ಪ್ರತಿ ಲೀಟರ್ ನೀರಿಗೆ 5 ಗ್ರಾಂ) ಹಾಗು ಜಿಂಕ್ ಸಲ್ಫೇಟ್ (ಪ್ರತಿ ಲೀಟರ್ ನೀರಿಗೆ 2.5 ಗ್ರಾಂ) ಮಿಶ್ರಣ ಮಾಡಿ ಸಿಂಪರಣೆ ಮಾಡಬೇಕು ಎಂದರು.

  ನಂತರ ಗೋವಿನ ಜೋಳ ಬೆಳೆಯು ಅತೀ ಹೆಚ್ಚಾಗಿ ಬಿತ್ತನೆ ಆಗಿದ್ದು, ಉತ್ತಮ ತೇವಾಂಶದಿಂದ ಹೊಂದಿರುತ್ತದೆ ಎಂದು ರೈತರೊಂದಿಗೆ ಚಚರ್ಿಸುತ್ತಾ ಬಿತ್ತುವ ಮುನ್ನ ಬೀಜೋಪಚಾರ ಮಾಡುವುದು ಹಾಗೂ ಅವಶ್ಯಕತೆಗೆ ತಕ್ಕಂತೆ ಶಿಫಾರಸ್ಸು ಮಾಡಿದ ಕೀಟನಾಶಕ, ರಸಗೊಬ್ಬರವನ್ನು ಬಳಸಬೇಕು ಹಾಗೂ ಕೃಷಿ ಇಲಾಖೆಯಿಂದ ರೈತರಿಗೆ ದೊರೆಯುವ ಗೊಬ್ಬರ, ಬೀಜ ಮತ್ತು ಔಷಧಿಗಳ ಬಗ್ಗೆ ರೈತರಿಗೆ ತಾಂತ್ರಿಕ ಮಾಹಿತಿ  ನೀಡಿದರು.

  ಮಣ್ಣು ವಿಜ್ಞಾನಿಯಾದ ಡಾ. ರಾಜಕುಮಾರ ಜಿ ಆರ್ ಮಾತನಾಡಿ, ಮಣ್ಣಿನ ಗುಣಧರ್ಮಗಳು ಮತ್ತು ಲಘುಪೋಷಕಾಂಶಗಳ, ಮಣ್ಣು ಮಾದರಿ ಸಂಗ್ರಹಣೆಯ ಬಗ್ಗೆ ಹಾಗೂ ಗೋವಿನ ಜೋಳದ ಬೆಳೆಗಳಲ್ಲಿ ಕಂಡು ಬಂದ ಸೈನಿಕ ಹುಳ ಬಾಧೆಯ ಲಕ್ಷಣ, ಅದರ ಹರಡುವಿಕೆ, ಕೀಟದ ಜೀವನ ಚಕ್ರ ಹಾಗೂ ಅದರ ಹತೋಟಿ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.  ಗೋವಿನಜೋಳ ಬೆಳೆಯು ಸುಮಾರು 15 ರಿಂದ 20 ದಿನಗಳ ಬೆಳೆಯಾಗಿದ್ದು, ಈ ಅವಧಿಯಲ್ಲಿ ಸೈನಿಕ ಹುಳುವಿನ ಮೊದಲನೇ ಮತ್ತು ಎರಡನೇಯ ಮರಿ ಹಂತಗಳು ಕಂಡು ಬಂದಿರುತ್ತದೆ. ಮೊದಲನೇಯ ಮರಿ ಹಂತವು ಎಲೆಗಳ ಮೇಲೆ ಆಕ್ರಮಿಸಿ ಪತ್ರಹರಿತ್ತನ್ನು ತಿಂದು ನಾಶಪಡಿಸುತ್ತದೆ ಹಾಗೂ ಎರಡನೇಯ ಹಂತದ ಮರಿ ಕೀಟಗಳು ಎಲೆಗಳನ್ನು ತಿಂದು ಬಾಧಿಸುತ್ತಿರುವುದು ಕಂಡು ಬಂದಿರುತ್ತದೆೆ. ಈ ಹಂತದಲ್ಲಿ ರೈತರು ಇಮಾಮೆಕ್ಟಿನ್ ಬೆಂಜೊಯಟ್ 0.2 ಗ್ರಾಂ ಪ್ರತಿ ಲೀಟರ್ ನೀರಿಗೆ ಅಥವಾ ಮೆಟಾರೈಜಿಯಂ ರಿಲೈ 2 ಗ್ರಾಂ ಅಥವಾ ನಿಮೋರಿಯಾ ರಿಲೈ 2 ಗ್ರಾಂ ಅಥವಾ 0.2 ಮಿ.ಲೀ ಸ್ಪೈನೋಸಾಡ್ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು ಎಂದು ರೈತರಿಗೆ ಮಾಹಿತಿ ನೀಡಿದರು.

  ಪ್ರಗತಿಪರ ರೈತರಾದ  ಹೆಗಪ್ಪ ಜಾಧವ, ಚಂದ್ರು ಶಿಡೇನೂರ, ರಾಜು ಲಮಾಣಿ, ಚಂದ್ರಪ್ಪ ಲಮಣಿ ಸೇರಿದಂತೆ ಹಲವು ರೈತರು ಮಾಹಿತಿ ಪ್ರಯೋಜನ ಪಡೆದುಕೊಂಡರು.