ಸ್ವಾತಂತ್ರ್ಯದ ದಶಕಗಳಾದರೂ ಮಾದಿಗ ಸಮುದಾಯಕ್ಕೆ ಮೂಲಸೌಕರ್ಯಗಳ ಕೊರತೆ: ಡಿಎಸ್‌ಎಸ್ ಪ್ರತಿಭಟನೆ

ಸ್ವಾತಂತ್ರ್ಯದ ದಶಕಗಳಾದರೂ ಮಾದಿಗ ಸಮುದಾಯಕ್ಕೆ ಮೂಲಸೌಕರ್ಯಗಳ ಕೊರತೆ: ಡಿಎಸ್‌ಎಸ್ ಪ್ರತಿಭಟನೆ  Lack of basic amenities for Madiga community despite decades of independence: DSS protest

ರಾಣೆಬೆನ್ನೂರು  7: ಸ್ವಾತಂತ್ರ್ಯ ದೊರೆತು ಹಲವು ದಶಕಗಳು ಕಳೆದರೂ ಮಾದಿಗ ಸಮುದಾಯದ ಜನರಿಗೆ ಸಂವಿಧಾನಬದ್ಧ ಮೂಲಭೂತ ಸೌಲಭ್ಯಗಳು ಇನ್ನೂ ಸಮರ​‍್ಕವಾಗಿ ದೊರೆಯುತ್ತಿಲ್ಲ ಎಂದು ಕರ್ನಾಟಕ ರಾಜ್ಯ ದಲಿತ ಸಂಘಟನೆ (ಡಿಎಸ್‌ಎಸ್) ರಾಜ್ಯ ಉಪಾಧ್ಯಕ್ಷೆ ಪಾರ್ವತಿ ಸಿ.ಜಿ. ಆರೋಪಿಸಿದರು.  

ಗುರುವಾರ ನಗರದ ತಹಶೀಲ್ದಾರ್ ಕಚೇರಿ ಹಾಗೂ ಹಾವೇರಿ ಜಿಲ್ಲಾಧಿಕಾರಿ ಕಚೇರಿ ಎದುರು ಡಿಎಸ್‌ಎಸ್ ವತಿಯಿಂದ ಪ್ರತಿಭಟನೆ ನಡೆಸಿ, ಅಧಿಕಾರಿಗಳಿಗೆ ಮನವಿ ಸಲ್ಲಿಸಿದ ಬಳಿಕ ಅವರು ಮಾತನಾಡಿದರು.  

ರಾಣೆಬೆನ್ನೂರು ತಾಲ್ಲೂಕಿನ ಖಂಡೇರಾಯನಹಳ್ಳಿ, ಸೋಮಲಾಪುರ, ಕೋಣತಂಬಿಗಿ, ಉದಗಟ್ಟಿ, ಮಾಕನೂರು, ಹಲಗೇರಿ, ಹಿರೇಬಿದರಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಮಾದಿಗ ಸಮುದಾಯದ ಜನರಿಗೆ ಮೂಲಭೂತ ಸೌಲಭ್ಯಗಳು ಸಮರ​‍್ಕವಾಗಿ ಲಭ್ಯವಿಲ್ಲ ಎಂದು ದೂರಿದರು.  

ಸರ್ಕಾರದ ವಿವಿಧ ಕಲ್ಯಾಣ ಯೋಜನೆಗಳು ಹಾಗೂ ಅನುದಾನಗಳು ಅರ್ಹ ಫಲಾನುಭವಿಗಳಿಗೆ ತಲುಪುತ್ತಿಲ್ಲ. ಹಲವು ಕುಟುಂಬಗಳು ಇನ್ನೂ ಗುಡಿಸಲುಗಳಲ್ಲಿ ವಾಸಿಸುತ್ತಿದ್ದು, ಸುರಕ್ಷಿತ ಮನೆ, ಕುಡಿಯುವ ನೀರು, ರಸ್ತೆ ಸೇರಿದಂತೆ ಅಗತ್ಯ ಸೌಲಭ್ಯಗಳಿಂದ ವಂಚಿತವಾಗಿವೆ ಎಂದು ಅವರು ಹೇಳಿದರು.  

ಕೆಲವು ಗ್ರಾಮಗಳಲ್ಲಿ ಕೆರೆ, ಹೊಳೆ ಮತ್ತು ಹಳ್ಳಗಳ ದಂಡೆಯಲ್ಲೇ ಜನರು ವಾಸಿಸುತ್ತಿದ್ದು, ಮಳೆಗಾಲದಲ್ಲಿ ಗುಡಿಸಲುಗಳು ಹಾನಿಗೊಳಗಾಗುವ ಪರಿಸ್ಥಿತಿ ಎದುರಾಗುತ್ತಿದೆ. ಅನೇಕ ಕುಟುಂಬಗಳು 6 ರಿಂದ 7 ಸದಸ್ಯರೊಂದಿಗೆ ಸಂಕಷ್ಟದ ಜೀವನ ನಡೆಸುತ್ತಿವೆ.

ನಿವೇಶನ ರಹಿತ ಹಾಗೂ ವಸತಿ ರಹಿತ ಕುಟುಂಬಗಳನ್ನು ಗುರುತಿಸಿ, ಗ್ರಾಮ ಪಂಚಾಯಿತಿಗಳ ಮೂಲಕ ಸರ್ಕಾರದ ವಸತಿ ಯೋಜನೆಗಳಡಿ ಮನೆಗಳನ್ನು ಒದಗಿಸಬೇಕು ಎಂದು ಅವರು ಆಗ್ರಹಿಸಿದರು.  

ಮಾದಿಗ ಸಮುದಾಯದ ಜನರು ಇತರ ನಾಗರಿಕರಂತೆ ಗೌರವಯುತ ಜೀವನ ನಡೆಸಲು ಅಗತ್ಯ ಮೂಲಸೌಕರ್ಯ ಹಾಗೂ ಸರ್ಕಾರಿ ಸೌಲಭ್ಯಗಳನ್ನು ತಕ್ಷಣ ಕಲ್ಪಿಸುವಂತೆ ಸರ್ಕಾರಕ್ಕೆ ಸಲ್ಲಿಸಿದ ಮನವಿಯಲ್ಲಿ ಒತ್ತಾಯಿಸಲಾಗಿದೆ.  

ಈ ಸಂದರ್ಭದಲ್ಲಿ ಸಂಘಟನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷೆ ವಸಂತಕುಮಾರಿ ಎಲ್‌.ಸಿ. ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಗಂಗಮ್ಮ ಉದಗಟ್ಟಿ, ಕರಬಸಮ್ಮ ಹಲಗೇರಿ, ಸೌಭಾಗ್ಯ ಹಲಗೇರಿ, ಹೊನ್ನಮ್ಮ ಉದಗಟ್ಟಿ, ರೇಣುಕಮ್ಮ ಹರಿಜನ, ಜಯಮ್ಮ ಉದಗಟ್ಟಿ, ಸೌಭಾಗ್ಯಮ್ಮ ಕೋಣತಂಬಿಗಿ, ಹಾಲವ್ವ ಹಿರೇಬಿದರಿ, ಕರಬಸಮ್ಮ ಖಂಡೇರಾಯನಹಳ್ಳಿ, ಕೆಂಚಮ್ಮ ಸೋಮಲಾಪುರ, ಶೋಭಾ ಕೋಣತಂಬಿಗಿ ಸೇರಿದಂತೆ ಹಲವು ಮಹಿಳೆಯರು ಹಾಗೂ ಸಂಘಟನೆಯ ಪದಾಧಿಕಾರಿಗಳು ಪಾಲ್ಗೊಂಡಿದ್ದರು.