ಬೆಂಗಳೂರಿನಲ್ಲಿ ಎಲ್.ಕೆ.ಜಿ, ಯು.ಕೆ.ಜಿ, ನರ್ಸರಿ ತರಗತಿಗಳಿಗೆ ಇಂದಿನಿಂದ ಮುಂದಿನ ಆದೇಶದವರೆಗೆ ರಜೆ

ಬೆಂಗಳೂರು, ಮಾ.9,ಕೊರೋನಾ ಭೀತಿ ಹಿನ್ನೆಲೆ ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ ಹಾಗೂ ಬೆಂಗಳೂರು ಗ್ರಾಮಾಂತರ ಭಾಗದ ಎಲ್.ಕೆ.ಜಿ, ಯು.ಕೆ.ಜಿ ಮತ್ತು ನರ್ಸರಿ ತರಗತಿಗಳಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ರಜೆ ಘೋಷಿಸಿದೆ.ಎಲ್ಲೆಡೆ  ಮಾರಣಾಂತಿಕ ಕೊರೋನಾ ವೈರಸ್ ಸೋಂಕು ಹರಡುವ ಭೀತಿ ಕಾಡುತ್ತಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಶಾಲೆಗಳ ಎಲ್.ಕೆ.ಜಿ ಮತ್ತು ಯು.ಕೆ.ಜಿ ವಿಭಾಗಗಳನ್ನು ಮುಚ್ಚಲು ಆರೋಗ್ಯ ಇಲಾಖೆ ನಿರ್ದೇಶನ ನೀಡಿರುವ ಹಿನ್ನೆಲೆ, ಶಿಕ್ಷಣ ಸಚಿವ ಸುರೇಶ್ ಕುಮಾರ್ ಬೆಂಗಳೂರು ಗ್ರಾಮಾಂತರ, ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ ಶಾಲೆಗಳಲ್ಲಿ ಎಲ್.ಕೆ.ಜಿ, ಯು.ಕೆ.ಜಿ ಮತ್ತು ನರ್ಸರಿ ತರಗತಿ ಗಳಿಗೆ ಮಾರ್ಚ್ 9 ರಿಂದ  ಆರೋಗ್ಯ ಆಯುಕ್ತರ ಸಲಹೆ ಮೇರೆಗೆ ರಜೆ ಘೋಷಿಸಿ ಸಚಿವ ಸುರೇಶ್ ಕುಮಾರ್ ಟ್ವೀಟ್ ಮಾಡಿದ್ದಾರೆ.ಸಚಿವರು ರಾತ್ರಿ 11 ಗಂಟೆಯ ನಂತರ ಟ್ವೀಟ್ ಮಾಡಿದ್ದರಿಂದ ಮಾಹಿತಿ ಸಿಗದ ಹಿನ್ನೆಲೆಯಲ್ಲಿ ಹೆಚ್ಚಿನ ಪೋಷಕರು ತಮ್ಮ ಮಕ್ಕಳನ್ನು ಇಂದು ಬೆಳಗ್ಗೆ ಕರೆ ತಂದಿದ್ದರು. ಬಳಿಕ ಶಾಲಾ ಸಿಬ್ಬಂದಿ ಮಾಹಿತಿ ನೀಡಿದ ಬಳಿಕ ಮನೆಗೆ ಹಿಂದಿರುಗುತ್ತಿದ್ದ ದೃಶ್ಯ ಕಂಡುಬಂತು. ಶಾಲಾ ಆಡಳಿತ ಮಂಡಳಿ ಕೂಡ ಬೆಳಗ್ಗೆ 8 ಗಂಟೆಯ ನಂತರ ಪೋಷಕರ ಮೊಬೈಲ್ಗೆ ರಜೆಯ ಸಂದೇಶ ಕಳುಹಿಸಿತ್ತು.ಈಗಾಗಲೇ ನೆರೆಯ ರಾಜ್ಯಗಳಾದ ಆಂಧ್ರಪ್ರದೇಶದ, ಕೇರಳ, ತೆಲಂಗಾಣ, ತಮಿಳುನಾಡು, ದೆಹಲಿ, ರಾಜಸ್ಥಾನ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಸೋಂಕು ಪ್ರಕರಣಗಳು ದೃಢಪಟ್ಟಿದ್ದು, ಈ ಹಿನ್ನೆಲೆಯಲ್ಲಿ  ಮುನ್ನೆಚ್ಚರಿಕಾ ಕ್ರಮವಾಗಿ ಈ ನಿರ್ಣಯ ತೆಗೆದುಕೊಳ್ಳಲಾಗಿದೆ.