2ನೇ ಬಾರಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಎಲ್‌.ಎಸ್‌.ಶಾಸ್ತ್ರಿ ಆಯ್ಕೆ

2ನೇ ಬಾರಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಎಲ್‌.ಎಸ್‌.ಶಾಸ್ತ್ರಿ ಆಯ್ಕೆ  L.S. Shastri elected as the President of the District Chutuku Sahitya Parishad for the 2nd time

ಲೋಕದರ್ಶನ ವರದಿ 

ಬೆಳಗಾವಿ 07: ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ನೂತನ ಅಧ್ಯಕ್ಷ ಹುದ್ದೆಯನ್ನು ಪತ್ರಕರ್ತ, ಸಾಹಿತಿ ಎಲ್‌.ಎಸ್‌.ಶಾಸ್ತ್ರಿ ಅವರಿಗೆ ವಹಿಸಲಾಗಿದೆ.  ರಾಜ್ಯ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ತೋಂಟದಾರ್ಯ ಅವರು ಮತ್ತು ರಾಜ್ಯ ಸಂಚಾಲಕ ಡಾ. ಎಂ.ಜಿ. ಆರ್‌. ಅರಸ್ ಅವರು ಮತ್ತೊಮ್ಮೆ ಬೆಳಗಾವಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಜವಾಬ್ದಾರಿಯನ್ನು ನನಗೆ ವಹಿಸಿದ್ದು, ಇನ್ನೊಂದು ಅವಧಿ ಅಧ್ಯಕ್ಷರಾಗಿ ಮುಂದುವರಿಯಬೇಕೆಂದು ಸೂಚಿಸಿದ್ದಾರೆ ಎಂದು ಎಲ್‌.ಎಸ್‌.ಶಾಸ್ತ್ರಿ ಅವರು ತಿಳಿಸಿದ್ದಾರೆ.  

ಬೆಳಗಾವಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಘಟಕವನ್ನು ನಾನು 1997ರಲ್ಲಿ ಪ್ರಾರಂಭಿಸಿದ್ದೆ. ನನ್ನ ಕುರಿತು ಬಹಳ ಪ್ರೀತಿಯಿದ್ದ ಹಿರಿಯ ಕವಿ ಡಾ. ಎಂ. ಅಕಬರ ಅಲಿ ಅವರ ಸಲಹೆಯಂತೆ ಡಾ. ಅರಸ್ ಅವರು ಅಂದು ನನ್ನನ್ನು ಜಿಲ್ಲಾಧ್ಯಕ್ಷರನ್ನಾಗಿ ನೇಮಿಸಿ ಜಿಲ್ಲೆಯಲ್ಲಿ ಚುಸಾಪ ಸಂಘಟಿಸುವಂತೆ ತಿಳಿಸಿದ್ದರು. ಆ ಪ್ರಕಾರ ನಾನು ಕಳೆದ ಮೂವತ್ತು ವರ್ಷಗಳಿಂದ ಈ ಸಂಸ್ಥೆಯನ್ನು ನಡೆಸುತ್ತ ಬಂದಿದ್ದೇನೆ. (ಮಧ್ಯೆ ಬೇರೊಂದು ತಾಂತ್ರಿಕ ಕಾರಣದಿಂದ ಮೂರು ವರ್ಷ ಅಶೋಕ ಮಳಗಲಿಯವರಿಗೆ ಈ ಹೊಣೆಯನ್ನು ವಹಿಸಿಕೊಟ್ಟಿದ್ದೆ). 

ಇಂದು ಬೆಳಗಾವಿ ಜಿಲ್ಲೆಯಲ್ಲಿ ಚುಟುಕು ಸಾಹಿತ್ಯ ಪರಿಷತ್ತು ಸಾಕಷ್ಟು ಖ್ಯಾತಿ ಗಳಿಸಿದ್ದು ನಿರಂತರವಾಗಿ ತನ್ನ ಕಾರ್ಯ ಚಟುವಟಿಕೆಗಳನ್ನು ನಡೆಸುತ್ತ ಬಂದಿದೆ. ನಾವಿಲ್ಲಿ ಎರಡು ರಾಜ್ಯ ಸಮ್ಮೇಳನಗಳನ್ನೂ ಮಾಡಿದ್ದೇವೆ. ನಾಲ್ಕು ಜಿಲ್ಲಾ ಸಮ್ಮೇಳನಗಳನ್ನು ನಡೆಸಿದ್ದೇವೆ. ಸಾವಿರಾರು ಬೇರೆ ಸಾಹಿತ್ಯಕ ಕಾರ್ಯಕ್ರಮಗಳನ್ನು ಮಾಡುತ್ತ ಬಂದಿದ್ದೇವೆ. ಜಿಲ್ಲಾ ಮಟ್ಟದ ಚುಟುಕು ಕಾವ್ಯ ತರಬೇತಿ ಶಿಬಿರ ನಡೆಸಿದ್ದೇವೆ. ಜಿಲ್ಲೆಯ ಹದಿನಾಲ್ಕು ತಾಲೂಕುಗಳಲ್ಲಿಯೂ ನಮ್ಮ ಶಾಖೆಗಳಿವೆ.  

ಕಳೆದ ಮಾರ್ಚ್‌ ತಿಂಗಳು ಎರಡು ದಿನ ನಮ್ಮ ಜಿಲ್ಲಾ ಘಟಕದ ಬೆಳ್ಳಿಹಬ್ಬವನ್ನು ಆಚರಿಸಿದೆವು. ನಮ್ಮ ಜಿಲ್ಲಾ ಸಮ್ಮೇಳನಗಳು ರಾಜ್ಯ ಮಟ್ಟದ ಸಮ್ಮೇಳನಗಳಂತೆ ನಡೆದಿವೆ. ರಾಜ್ಯ ಸಂಚಾಲಕ ಡಾ. ಅರಸ್ ಅವರು ಯಾವತ್ತೂ ನಮ್ಮ ಘಟಕದ ಮೇಲೆ ಪ್ರೀತಿ ವಿಶ್ವಾಸ ಇಟ್ಟುಕೊಂಡು ನಾವು ಕರೆದಾಗೆಲ್ಲ ಮೈಸೂರಿಂದ ಬಂದು ಭಾಗವಹಿಸಿದ್ದಾರೆ.  

ಕಸಾಪದಂತೆ ನಮಗೆ ರಾಜ್ಯ ಸರಕಾರದ ಯಾವುದೇ ನೆರವು ಇಲ್ಲ. ಆದರೂ ನಾವು ಹಿಂಜರಿದಿಲ್ಲ. ಯಾವತ್ತೂ ನಮ್ಮ ಚಟುವಟಿಕೆಗಳನ್ನು ನಿಲ್ಲಿಸಿಲ್ಲ. ಈ ವರ್ಷವಂತೂ ನಾವು ಹನ್ನೆರಡು ತಿಂಗಳುಗಳ ಕಾರ್ಯಕ್ರಮ ಮಾಲಿಕೆಯ ಒಂದು ವಿಶಿಷ್ಟ  ಯೋಜನೆಯನ್ನೇ ಕನ್ನಡ ಸಾಹಿತ್ಯ ಭವನ ವಿಶ್ವಸ್ತ ಮಂಡಳಿಯೊಡನೆ ರೂಪಿಸಿಕೊಂಡಿದ್ದೇವೆ. ಗಡಿ ಭಾಗದಲ್ಲಿ ಕನ್ನಡದ ಅಸ್ತಿತ್ವವನ್ನು ಉಳಿಸಿ ಬೆಳೆಸುವಲ್ಲಿ ನಮ್ಮ ಜಿಲ್ಲಾ ಘಟಕ ಬಹಳ ಮಹತ್ವದ ಪಾತ್ರ ನಿರ್ಹಿಸುತ್ತಿದೆ. ಕಳೆದ ಮೂರು ದಶಕಗಳಲ್ಲಿ ನಾಡಿನ ಎಲ್ಲ ಹೆಸರಾಂತ ಸಾಹಿತಿಗಳೂ ನಮ್ಮ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ.  

ವಯಸ್ಸಿನ ಕಾರಣದಿಂದ (83) ನಾನು ಈ ಸ್ಥಾನವನ್ನು ಬೇರೆಯವರಿಗೆ ವಹಿಸಿಕೊಡುವ ವಿಚಾರದಲ್ಲಿದ್ದೆ. ಆದರೆ ಕೇಂದ್ರ ಸಮಿತಿ ಮತ್ತೆ ನನಗೇ ಇನ್ನೊಂದು ಅವಧಿಗೆ ಮುಂದುವರಿಯಲು ಸೂಚಿಸಿದೆ. ಅವರ ವಿಶ್ವಾಸಕ್ಕೆ ಋಣಿ. ಬೆಳಗಾವಿಯ ಸಾಹಿತ್ಯ ಬಳಗ ಯಾವತ್ತೂ ನನ್ನೊಂದಿಗಿದೆಯೆಂಬ ಧೈರ್ಯ, ವಿಶ್ವಾಸದ ಮೇಲೆ ನಾನು ಸಾಧ್ಯವಾದಷ್ಟು ಕಾಲ ಈ ಹೊಣೆಯನ್ನು ನಿಭಾಯಿಸಲು ಪ್ರಯತ್ನಿಸುತ್ತೇನೆ.  

ಬರೆಹಗಾರ ಸೋದರ-ಸೋದರಿಯರು ಈತನಕವೂ ನನ್ನ ಎಲ್ಲ ಕಾರ್ಯಗಳಿಗೆ ಸಹಕರಿಸುತ್ತ ಬಂದಿದ್ದಾರೆ. ಅವರಿಗೂ ನಾನು ಕೃತಜ್ಞನಿದ್ದೇನೆ. ಎಲ್ಲ ತಾಲೂಕು ಘಟಕದವರೂ ನಮಗೆ ಅವರಿಂದಾದ ಸಹಕಾರ ನೀಡುತ್ತ ಬಂದಿದ್ದಾರೆ. ಅವರಿಗೂ ಧನ್ಯವಾದಗಳು. ಮುಂದಿನ ದಿನಗಳಲ್ಲಿ ಹೊಸ ಸಮಿತಿಗಳೊಂದಿಗೆ ಹೊಸ ಹುರುಪಿನಿಂದ ಚಟುವಟಿಕೆಗಳನ್ನು ಆರಂಭಿಸಲು ಎಲ್ಲರ ಪ್ರೀತಿಯ ಸಹಕಾರ ಕೋರುತ್ತಿದ್ದೇನೆ ಎಂದು ಚುಸಾಪ ಜಿಲ್ಲಾಧ್ಯಕ್ಷ ಎಲ್‌.ಎಸ್‌.ಶಾಸ್ತ್ರಿ ತಿಳಿಸಿದ್ದಾರೆ.