ಕೂರ್ಮಗಡ ಜಾತ್ರೆ - ಮುನ್ನೆಚ್ಚರಿಕೆ ವಹಿಸಿ; ಶಾಸಕಿ ಸೂಚನೆ
ಕಾರವಾರ: ಕೂರ್ಮಗಡ ಜಾತ್ರೆ ಸಂದರ್ಭದಲ್ಲಿ ಯಾವುದೇ ನಿರ್ಲಕ್ಷ್ಯ ಸಲ್ಲದು. ಯಾವುದೆ ಅಹಿತಕರ ಘಟನೆ ನಡೆಯದಂತೆ ಕಟ್ಟುನಿಟ್ಟಿನ ಸುರಕ್ಷತಾ ಕ್ರಮ ಕೈಗೊಳ್ಳಬೇಕು ಎಂದು ಕಾರವಾರ-ಅಂಕೋಲಾ ವಿಧಾನಸಭಾ ಕ್ಷೇತ್ರದ ಶಾಸಕರಾದ ರೂಪಾಲಿ ಎಸ್. ನಾಯ್ಕ ಅಧಿಕಾರಿಗಳಿಗೆ ಸೂಚಿಸಿದರು.
ತಾಲೂಕು ಪಂಚಾಯತಿ ಸಭಾಂಗಣದಲ್ಲಿ ಸೋಮವಾರ ನಡೆದ ಕೂರ್ಮಗಡ ಜಾತ್ರೆಯ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಜಾತ್ರೆಗೆ ಹೋಗುವ ಸಂದರ್ಭದಲ್ಲಿ ಭಕ್ತರು ದೋಣಿ ಹತ್ತುವ ಸ್ಥಳ ಹಾಗೂ ಇಳಿಯುವ ಸ್ಥಳದಲ್ಲಿ ಪೊಲೀಸ್ ಸಿಬ್ಬಂದಿ ನಿಯೋಜಿಸಿ, ಜನರ ಮಾಹಿತಿಯನ್ನು ಪಡೆದುಕೊಳ್ಳಬೇಕು. ಬೈತ್‌ಖೋಲ್‌ನಲ್ಲಿಯೇ ದೋಣಿ ಹತ್ತುವಂತೆ ನೋಡಿಕೊಳ್ಳಬೇಕು. ಖಾಸಗಿ ಹಾಗೂ ಪರವಾನಗಿ ಇಲ್ಲದ ದೋಣಿಗಳಿಗೆ ಸಮುದ್ರಕ್ಕೆ ಇಳಿಯದಂತೆ ಜಾಗೃತಿ ವಹಿಸಬೇಕು ಎಂದರು.
ಹೊಸ ಬೋಟ್‌ಗಳನ್ನು ಬಳಕೆ ಮಾಡಿಕೊಳ್ಳಬೇಕು. ಬೋಟ್‌ಗಳಲ್ಲಿ ನಿಗದಿಗಿಂತ ಹೆಚ್ಚು ಜನರನ್ನು ಒಯ್ಯಬಾರದು. ಜಾತ್ರೆಗೆ ಹೋಗುವ ಜನರ ವಾಹನ ಪಾರ್ಕಿಂಗ್ ವ್ಯವಸ್ಥೆಯನ್ನು ಬೈತ್‌ಖೋಲ್ ಬಳಿ ಖಾಲಿ ಜಾಗದಲ್ಲಿ ಮಾಡಬೇಕು. ಹಿರಿಯರು ಹಾಗೂ ಮಕ್ಕಳ ಬಗ್ಗೆ ತೀರಾ ಕಾಳಜಿ ವಹಿಸಬೇಕು ಎಂದರು.
ಲೈಫ್‌ಜಾಕೆಟ್ ವ್ಯವಸ್ಥೆ ಕಡ್ಡಾಯವಾಗಿ ಇರಬೇಕು, ಕರಾವಳಿ ಕಾವಲು ಪಡೆ ಹಾಗೂ ಕೋಸ್ಟ್ ಗಾರ್ಡ್ ಸಿಬ್ಬಂದಿ, ವೈದ್ಯಕೀಯ, ಅಗ್ನಿಶಾಮಕ ಸಿಬ್ಬಂದಿಗಳನ್ನು ನಿಯೋಜನೆ ಮಾಡಬೇಕು ಎಂದರು.
ಮೀನುಗಾರಿಕೆ ಇಲಾಖೆ ಅಧಿಕಾರಿ ಮಾತನಾಡಿ, ಜಾತ್ರೆಗೆ ಭಕ್ತರನ್ನು ಕರೆದುಕೊಂಡು ಹೋಗಲು, 17 ಪರ್ಷಿಯನ್, 2 ಟ್ರಾಲ್ ಬೋಟ್ ಗಳ ಅರ್ಜಿ ಹಾಕಿದ್ದಾರೆ. ಅವರೆಲ್ಲರ ದಾಖಲೆಗಳನ್ನು ಪರಿಶೀಲಿಸಿ ಅನುಮತಿ ನೀಡಲಾಗುವುದು ಎಂದರು.
ಈ ಸಂದರ್ಭದಲ್ಲಿ ನಗರಸಭೆ ಉಪಾಧ್ಯಕ್ಷರು, ತಹಶೀಲ್ದಾರ, ತಾಲ್ಲೂಕ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ, ಪೊಲೀಸ್ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು.