ಕುಮಾರಸ್ವಾಮಿ ಸಿಡಿ 'ಕಟ್ ಅಂಡ್ ಪೇಸ್ಟ್'-ಶೋಭಾ ಕರಂದ್ಲಾಜೆ

ಬೆಂಗಳೂರು, ಜ10 :            ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮಂಗಳೂರು ಗಲಭೆ ಕುರಿತು ಬಿಡುಗಡೆ ಮಾಡಿರುವ ಸಿಡಿ 'ಕಟ್ ಅಂಡ್ ಪೇಸ್ಟ್ ಸಿಡಿ'ಯಾಗಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ವ್ಯಂಗ್ಯವಾಡಿದ್ದಾರೆ.  

ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಆರೇಳು ವರ್ಷಗಳಿಂದ ಅನೇಕ ಬಾರಿ ಅವರು ಸಿಡಿಗಳನ್ನು ಬಿಡುಗಡೆ ಮಾಡಿದ್ದಾರೆ. ಆದರೆ ಯಾವುದನ್ನೂ ತಾರ್ಖಿಕ ಅಂತ್ಯಕ್ಕೆ ಮುಟ್ಟಿಸಲಿಲ್ಲ. ಕುಮಾರಸ್ವಾಮಿ ಅವರು ಸಿಡಿ ಪ್ರಿಯರಾಗಿದ್ದಾರೆ. ಮಂಗಳೂರು ಗಲಭೆ ನಡೆದು ಇಷ್ಟು ದಿನವಾದ ಮೇಲೆ ವಿಡಿಯೋ ಬಿಡುಗಡೆ ಮಾಡಿದ್ದು ಏಕೆ? ಷಡ್ಯಂತ್ರದಿಂದ ಕೂಡಿರುವ ಈ ಸಿಡಿಯನ್ನು ವಿಧಿವಿಜ್ಞಾನ ಪ್ರಯೋಗದಲ್ಲಿ ಪರೀಕ್ಷೆ ನಡೆಸಿ, ಇದರ ಬಗ್ಗೆ ತನಿಖೆಯಾಗಬೇಕು. ಮಾಜಿ ಮುಖ್ಯಮಂತ್ರಿಯೂ ಆದ ಕುಮಾರಸ್ವಾಮಿ ಅವರು, ಪೊಲೀಸರ ನೈತಿಕಸ್ಥೈರ್ಯ ಕುಗ್ಗಿಸುವ ಪ್ರಯತ್ನ ಮಾಡಿದ್ದಾರೆ. ಕರ್ನಾಟಕ ಪೊಲೀಸರಿಗೆ ಒಳ್ಳೆಯ ಹೆಸರಿದೆ. ಇದಕ್ಕೆ ಮಸಿ ಬಳಿಯುವ ಪ್ರಯತ್ನವನ್ನು ಕುಮಾರಸ್ವಾಮಿ ಮಾಡಿದ್ದಾರೆ. ಈ ಮೂಲಕ ಮೂಲಭೂತವಾದಿಗಳು, ಗಲಭೆಕೋರರಿಗೆ, ಕೇರಳದ ಗುಂಡಾಗಳಿಗೆ ಬೆಂಬಲವಾಗಿ ನಿಂತಿದ್ದಾರೆ. ಕೇರಳದಿಂದ ಬಂದ ಗೂಂಡಾಗಳನ್ನು ಪತ್ತೆ ಮಾಡಿ ಒಳಗೆ ಹಾಕುವಲ್ಲಿ ಸಹಕರಿಸಬೇಕಾಗಿದ್ದ ಮಾಜಿ ಮುಖ್ಯಮಂತ್ರಿ ಈ ರೀತಿ ದಿಕ್ಕು ತಪ್ಪಿಸಲು ಹೊರಟಿರುವುದನ್ನು ಬಿಜೆಪಿ ಖಂಡಿಸುತ್ತದೆ ಎಂದು  ಹೇಳಿದ್ದಾರೆ.  

ಜೆಎನ್ಯು ಸೇರಿದಂತೆ ಅನೇಕ ವಿಶ್ವವಿದ್ಯಾಲಯಗಳಲ್ಲಿ ಕೆಲ ವಿದ್ಯಾರ್ಥಿಗಳು ಅವಧಿ ಮೀರಿ ಅನೇಕ ವರ್ಷಗಳು ನೆಲೆಸಿ ಅಶಾಂತಿ ಘಟನೆಗಳಿಗೆ ಕಾರಣರಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ದೇಶದಲ್ಲಿನ ಎಲ್ಲ ವಿಶ್ವವಿದ್ಯಾಲಯಗಳಲ್ಲಿ ಅವಧಿ ಮೀರಿ ನೆಲೆಸಿರುವ ವಿದ್ಯಾರ್ಥಿಗಳನ್ನು ಹೊರಹಾಕಲು ತಕ್ಷಣ ಕ್ರಮ ತೆಗೆದುಕೊಳ್ಳಬೇಕು. ಅದೇ ರೀತಿ ಬೆಂಗಳೂರಿನ ಪಿ.ಜಿ.ಗಳಲ್ಲಿ ವಿಳಾಸವಿಲ್ಲದ ಸಾವಿರಾರು ಮಂದಿ ಅನಧಿಕೃತವಾಗಿ ವಾಸವಿದ್ದಾರೆ. ಈ ಹಿನ್ನೆಲೆಯಲ್ಲಿ ಪಿಜಿಗಳನ್ನು ಸಮೀಕ್ಷೆ ನಡೆಸಿ ಅನಧಿಕೃತವಾಗಿ ನೆಲೆಸಿರುವವರನ್ನು ತಕ್ಷಣ ಗಡೀಪಾರು ಮಾಡಬೇಕು ಎಂದು ಶೋಭಾ ಕರಂದ್ಲಾಜೆ ಒತ್ತಾಯಿಸಿದ್ದಾರೆ.  

ವಿಧಾನಪರಿಷತ್ ಪರಿಷತ್ ಸದಸ್ಯರಾದ ಎನ್.ರವಿಕುಮಾರ್ ಮಾತನಾಡಿ, ಜೆಎನ್ಯು ವಿಶ್ವವಿದ್ಯಾಲಯದಲ್ಲಿ ಶುಲ್ಕ ಏರಿಕೆಗಾಗಿ ಹೋರಾಟ ನಡೆದಿತ್ತು. ವಾಮಪಂಥೀಯ ಸಂಘಟನೆಗಳು ಅಲ್ಲದೆ, ಎಬಿವಿಪಿ ಸಹ ಶುಲ್ಕ ಏರಿಕೆ ವಿರುದ್ದ ಹೋರಾಟ ನಡೆಸಿತ್ತು. ವಾಮಪಂಥೀಯ ಸಂಘಟನೆಗಳು ವಿವೇಕಾನಂದರ ಪುತ್ಧಳಿಯನ್ನು ಒಡೆದುಹಾಕಿದರು. ಇದರ ವಿರುದ್ಧ ಎಬಿವಿಪಿ ಹೋರಾಟ ನಡೆಸಿತ್ತು. ಎಬಿವಿಪಿ ಹೋರಾಟದ ಫಲವಾಗಿ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಶುಲ್ಕ ಏರಿಕೆಯ ಏಳು ಕೋಟಿ ರೂ. ಭರಿಸುತ್ತಿದೆ ಎಂದು ಹೇಳಿದ್ದಾರೆ.