ಕಾಗವಾಡ 02: ಓದಿದ್ದು ಕೆಎಎಸ್, ಈಗ ಕೇವಲ 36 ವರ್ಷ, ಅಪ್ಪನ ಮುದ್ದಿನ ಮಗಳು ಅನಿಸಿಕೊಂಡ ಅಪ್ರತಿಮ ಛಲಗಾರ್ತಿ, ತಂದೆಯ ರಾಜಕೀಯ ಜೀವನಕ್ಕೆ ಚಾಣಾಕ್ಷಳಂತೆ ಮುಂದೆ ನಿಂತು, ಧೈರ್ಯ ತುಂಬಿದ ಮಗಳು, ಅರ್ಧಕ್ಕೆ ಇಹಲೋಕ ತ್ಯಜಿಸಿದ್ದು, ಯಾವ ತಂದೆಗೂ ಸಹಿಸಲು ಅಸಾಧ್ಯ.
ಹೌದು.. ಬೆಳಗಾವಿ ಜಿಲ್ಲೆ ಕಾಗವಾಡ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ರಾಜು ಕಾಗೆ ಅವರ ಜೇಷ್ಠ ಪುತ್ರಿ ಕೃತಿಕಾ ನಿನ್ನೆ ತಮ್ಮ ಜೀವನಕ್ಕೆ ಅಂತಿಮ ವಿದಾಯ ಹೇಳಿದ್ದಾರೆ. ಕಳೆದ ಒಂದು ವರ್ಷಗಳಿಂದ ಕ್ಯಾನ್ಸರ್ ಅನ್ನೋ ಮಹಾಮಾರಿಗೆ ತುತ್ತಾದ ಕೃತಿಕಾ ಬೆಂಗಳೂರಿನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೇ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಮಧ್ಯಾನ ಕೊನೆಯುಸಿರೆಳೆದರು. ತಮ್ಮ ಬದುಕಿನುದ್ದಕ್ಕೂ ಸ್ಫೂರ್ತಿಯಾಗಿದ್ದ ಮಗಳ ಸಾವಿನ ಸುದ್ದಿ ತಿಳಿದ ಕುಟುಂಬಕ್ಕೆ ಬರಸಿಡಿಲೆ ಅಪ್ಪಳಿಸಿದಂತಾಗಿದೆ.
ರವಿವಾರ ದಿ. 2 ರಂದು ಬೆಳಿಗ್ಗೆ 6 ಗಂಟೆಗೆ ಮೃತ ದೇಹ ಉಗಾರ ಖುರ್ದ ಗ್ರಾಮಕ್ಕೆ ತರಲಾಯಿತು. ಪಂಚಮಸಾಲಿ ವಿಧಿ ವಿಧಾನಗಳಂತೆ 11.30 ರ ಸುಮಾರಿಗೆ ಪಟ್ಟಣದ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಯಯಿತು. ಅಪಾರ ಬಂಧು ಬಳಗ ಅಗಲಿದ ಮೃತ ಕೃತಿಕಾ ಅಂತಿಮ ದರ್ಶನಕ್ಕೆ ಸಾಗರೋಪಾದಿಯಲ್ಲಿ ಜನ ಹರಿದು ಬಂದಿತು. ಅಂತ್ಯಕ್ರಿಯೆಗೆ ಮಠಾಧೀಶರು, ರಾಜಕೀಯ ನಾಯಕರು ಸೇರಿದಂತೆ ಲಕ್ಷಾಂತರ ಸಂಖ್ಯೆಯಲ್ಲಿ ಆಗಮಿಸಿದ ಜನ ಕುಟುಂಬಕ್ಕೆ ಸಾಂತ್ವನ ತಿಳಿಸಿದರು.
ಇನ್ನು ಏನು ಅರಿಯದ ಪುಟಾಣಿ ಮಗು ಅಮ್ಮನ ಮೃತ ದೇಹದ ಮುಂದೆ ಕಣ್ಣೀರು ಹಾಕಿದ್ದು ಎಲ್ಲರ ಕಣ್ಣಲ್ಲೂ ನೀರು ಬರಿಸಿತು. ಒಟ್ಟಾರೆಯಾಗಿ ಬಾಳಿ ಬದುಕಬೇಕಿದ್ದ ಕೃತಿಕಾ ಚಿಕ್ಕ ವಯಸ್ಸಿಗೆ ಇಹಲೋಕ ತ್ಯಜಿಸಿದ್ದು, ಕುಟುಂಬಕ್ಕೆ ತುಂಬಲಾರದ ನಷ್ಟವಾಗಿದ್ದು ಮಾತ್ರ ಸುಳ್ಳಲ್ಲ.