ಆಲಮಟ್ಟಿ ಜಲ ಸಂಗ್ರಹ ಮಟ್ಟ ಹೆಚ್ಚಳಕ್ಕೆ ಕೃಷ್ಣಾ ಕೊಳ್ಳ ಜಲ ಸಂರಕ್ಷಣಾ ಹೋರಾಟ ಸಮಿತಿಯಿಂದ ಸಚಿವ ಎಂ.ಬಿ. ಪಾಟೀಲರಿಗೆ ಮನವಿ

ಆಲಮಟ್ಟಿ ಜಲ ಸಂಗ್ರಹ ಮಟ್ಟ ಹೆಚ್ಚಳಕ್ಕೆ ಕೃಷ್ಣಾ ಕೊಳ್ಳ ಜಲ ಸಂರಕ್ಷಣಾ ಹೋರಾಟ ಸಮಿತಿಯಿಂದ ಸಚಿವ ಎಂ.ಬಿ. ಪಾಟೀಲರಿಗೆ ಮನವಿ  Krishna Kolla Water Conservation Struggle Committee appeals to Minister M.B. Patil to increase Almat

ವಿಜಯಪುರ 25: ಕೃಷ್ಣಾ ಕೊಳ್ಳ ಜಲ ಸಂರಕ್ಷಣಾ ಹೋರಾಟ ಸಮಿತಿಯ ಸದಸ್ಯರು ರಾಜ್ಯದ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಅವರನ್ನು ಭೇಟಿ ಮಾಡಿ, ಆಲಮಟ್ಟಿ ಅಣೆಕಟ್ಟಿನಲ್ಲಿ 524.256 ಮೀಟರ್ ಮಟ್ಟದವರೆಗೆ ನೀರು ಸಂಗ್ರಹಿಸಲು ಅಗತ್ಯವಾದ ಗಜೆಟ್ ಅಧಿಸೂಚನೆಯನ್ನು ಕೇಂದ್ರ ಸರ್ಕಾರ ತಕ್ಷಣ ಪ್ರಕಟಿಸಬೇಕು ಎಂದು ಒತ್ತಾಯಿಸಿದರು.  ಸಮಿತಿಯು, ಎರಡನೇ ಕೃಷ್ಣಾ ಜಲ ವಿವಾದ ನ್ಯಾಯಮಂಡಳಿ  ಅಂತಿಮ ತೀಪು ನೀಡಿದ ಬಳಿಕವೂ ಕೇಂದ್ರ ಸರ್ಕಾರ ಗಜೆಟ್ ಅಧಿಸೂಚನೆ ಪ್ರಕಟಿಸದೆ ವಿಳಂಬ ಮಾಡುತ್ತಿರುವುದು ಉತ್ತರ ಕರ್ನಾಟಕದ ಜನತೆಗೆ ಅನ್ಯಾಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿತು.  

ನೀರಿನ ವಿಚಾರದಲ್ಲಿ ರಾಜಕೀಯ ಲಾಭ-ನಷ್ಟಗಳ ಲೆಕ್ಕಾಚಾರ ನಡೆಯಬಾರದು. ರೈತರ ಬದುಕು, ಜನರ ಭವಿಷ್ಯ ಹಾಗೂ ಉತ್ತರ ಕರ್ನಾಟಕದ ಅಭಿವೃದ್ಧಿಗಿಂತ ಯಾವುದೇ ಸರ್ಕಾರದ ರಾಜಕೀಯ ಆದ್ಯತೆ ದೊಡ್ಡದಾಗಬಾರದು ಎಂದು ಸಮಿತಿ ಅಭಿಪ್ರಾಯಪಟ್ಟಿತು. ಆಲಮಟ್ಟಿ ಯೋಜನೆ ಪೂರ್ಣ ಪ್ರಮಾಣದಲ್ಲಿ ಜಾರಿಯಾದರೆ ಲಕ್ಷಾಂತರ ರೈತರಿಗೆ ನೀರಾವರಿ ಸೌಲಭ್ಯ ದೊರೆಯುವುದರ ಜೊತೆಗೆ ಕುಡಿಯುವ ನೀರು ಹಾಗೂ ಕೈಗಾರಿಕಾ ಅಭಿವೃದ್ಧಿಗೂ ಉತ್ತೇಜನ ಸಿಗಲಿದೆ. ಆದರೆ ರಾಜಕೀಯ ಇಚ್ಛಾಶಕ್ತಿ ಕೊರತೆ ಮತ್ತು ಆಡಳಿತಾತ್ಮಕ ವಿಳಂಬದಿಂದ ಯೋಜನೆಯ ಪೂರ್ಣ ಪ್ರಯೋಜನ ಜನರಿಗೆ ದೊರೆಯುತ್ತಿಲ್ಲ ಎಂದು ಸಮಿತಿ ಆರೋಪಿಸಿತು.  

ಇದೇ ವೇಳೆ, ನೀರಿನ ಸಂಗ್ರಹ ಮಟ್ಟ ಹೆಚ್ಚಳದಿಂದ ಸ್ಥಳಾಂತರಗೊಳ್ಳಬೇಕಿರುವ 22 ಹಳ್ಳಿಗಳ ಜನರಿಗೆ ನ್ಯಾಯಯುತ ಪುನರ್ವಸತಿ ಹಾಗೂ ಸಮರ​‍್ಕ ಪರಿಹಾರ ಒದಗಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಸಮಿತಿ ತಿಳಿಸಿತು. ಅಭಿವೃದ್ಧಿಯ ಹೆಸರಿನಲ್ಲಿ ಸಂತ್ರಸ್ತರನ್ನು ಅನಿಶ್ಚಿತತೆಯಲ್ಲಿ ಬಿಡುವುದು ಸರಿಯಲ್ಲ ಎಂದು ಒತ್ತಾಯಿಸಲಾಯಿತು. ಮನವಿಗೆ ಸ್ಪಂದಿಸಿದ ಸಚಿವ ಎಂ.ಬಿ. ಪಾಟೀಲ ಅವರು ವಿಷಯದ ಗಂಭೀರತೆಯನ್ನು ಅರಿತು, ಸಂಬಂಧಿತ ಹಂತಗಳಲ್ಲಿ ಅಗತ್ಯ ಕ್ರಮ ಕೈಗೊಳ್ಳಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು.  

ಈ ಸಂದರ್ಭದಲ್ಲಿ ಮಾತನಾಡಿದ ಸಮಿತಿಯ ಮುಖಂಡರು, “ಭರವಸೆಗಳಲ್ಲ, ಫಲಿತಾಂಶ ಬೇಕು. ಘೋಷಣೆಗಳಲ್ಲ, ಗಜೆಟ್ ಅಧಿಸೂಚನೆ ಬೇಕು. ವಿಳಂಬದ ರಾಜಕಾರಣದಿಂದ ಉತ್ತರ ಕರ್ನಾಟಕದ ಜನರು ಮತ್ತಷ್ಟು ಸಂಕಷ್ಟ ಅನುಭವಿಸಲು ಸಿದ್ಧರಿಲ್ಲ” ಎಂದು ಎಚ್ಚರಿಸಿದರು. ಅಗತ್ಯವಿದ್ದರೆ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಸಮಿತಿ ತಿಳಿಸಿತು.  ಈ ಸಂದರ್ಭದಲ್ಲಿ ಅರವಿಂದ ಕುಲಕರ್ಣಿ, ಪಂಚಪ್ಪ ಕಲಬುರ್ಗಿ, ಎಸ್‌.ವಿ. ಪಾಟೀಲ, ಅಕ್ರಮ ಮಾಶಾಳ್ಕರ್, ಲಲಿತಾ ಬಿಜ್ಜರಗಿ, ಸುರೇಶ್ ಜಿಬಿ, ಸುರೇಶ್ ಬಿಜಾಪುರ, ಸಿದ್ದಲಿಂಗ ಬಾಗೇವಾಡಿ, ಭೋಗೇಶ್ ಸೋಲಾಪುರ, ಸತೀಶ ಭಾವಿ, ಗುರುರಾಜ ಪಡಶೆಟ್ಟಿ, ಗೀರೀಶ ಕಲಘಟಗಿ, ಲಕ್ಷ್ಮಣ ಕಂಬಾಗಿ, ನೀಲಾಂಬಿಕಾ ಬಿರಾದಾರ ಹಾಗೂ ಶ್ರೀಕಾಂತ ಕೊಂಡಗೂಳಿ ಸೇರಿದಂತೆ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.