ಕೃಷ್ಣ ಜನ್ಮಾಷ್ಟಮಿ ಭಕ್ತಿಶ್ರದ್ಧೆಯಿಂದ ಆಚರಣೆ

ಕೃಷ್ಣ ಜನ್ಮಾಷ್ಟಮಿ ಭಕ್ತಿಶ್ರದ್ಧೆಯಿಂದ ಆಚರಣೆ  Krishna Janmashtami celebrated with devotion and reverence

ಲೋಕದರ್ಶನ ವರದಿ 

ಬೆಳಗಾವಿ ಸೆ.7: ನಗರದ ಯೋಗದ ಸತ್ಸಂಗ ಧ್ಯಾನಕೇಂದ್ರದಲ್ಲಿ ಕೃಷ್ಣ ಜನ್ಮಾಷ್ಟಮಿಯನ್ನು ವಿವಿಧ ಧಾರ್ಮಿಕ ಹಾಗೂ ಆಧ್ಯಾತ್ಮಿಕ ಕಾರ್ಯಕ್ರಮಗಳೊಂದಿಗೆ ಭಕ್ತಿಶ್ರದ್ಧೆಯಿಂದ ಆಚರಿಸಲಾಯಿತು.  

ಯೋಗದ ಸತ್ಸಂಗ ಸೊಸೈಟಿ ಅಧ್ಯಕ್ಷ ಸ್ವಾಮಿ ಚಿದಾನಂದಗಿರಿ ಅವರು ಆನ್ಲೈನ್ ಮೂಲಕ ವಿಶೇಷ ಕಾರ್ಯಕ್ರಮ ನಡೆಸಿಕೊಟ್ಟರು. ಶ್ರೀಕೃಷ್ಣನ ಅವತಾರದ ಮಹತ್ವ, ಭಗವದ್ಗೀತೆಯ ಸಂದೇಶ ಹಾಗೂ ಕ್ರಿಯಾಯೋಗದ ಮಹತ್ವವನ್ನು ವಿವರಿಸಿದರು.  

ಕ್ರಿಯಾಯೋಗವನ್ನು ಅಭ್ಯಾಸ ಮಾಡುವುದರಿಂದ ಸಾಧಕನು ಆಧ್ಯಾತ್ಮಿಕ ಸಾಧನೆಯ ಹಾದಿಯಲ್ಲಿ ಮುನ್ನಡೆಯಲು ಸಾಧ್ಯ ಎಂದು ಅವರು ಹೇಳಿದರು. ಶ್ರೀಕೃಷ್ಣನ ಜೀವನ ಹಾಗೂ ಭಗವದ್ಗೀತೆಯ ಸಂದೇಶವನ್ನು ಸ್ಮರಿಸಿದ ಭಕ್ತರು ಧರ್ಮ, ಸತ್ಯ, ನೀತಿ ಮತ್ತು ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಸಂಕಲ್ಪ ಮಾಡಿದರು.  

ಸಂಜೆ ನಡೆದ ಕಾರ್ಯಕ್ರಮದಲ್ಲಿ ಸಾಮೂಹಿಕ ಧ್ಯಾನ, ಭಜನೆ, ಪುಷ್ಪಾಂಜಲಿ ಹಾಗೂ ಪ್ರಸಾದ ವಿತರಣೆ ನಡೆಯಿತು. ಧ್ಯಾನಕೇಂದ್ರದ ಪದಾಧಿಕಾರಿಗಳಾದ ಶಶಿಕಾಂತ ಚುಣಮರಿ, ಮಂಜುಳಾ ಚುಣಮರಿ, ಶ್ರೀನಿವಾಸ ಕೋಪರ್ಡೆ, ಕರ್ನಲ್ ಮಾರನಬಸರಿ, ದಾನೋಜಿ, ಶೈಲಜಾ ಕೋರಿಶೆಟ್ಟಿ ಸೇರಿದಂತೆ ಸತ್ಸಂಗದ ಸದಸ್ಯರು ಹಾಗೂ ಭಕ್ತರು ಉಪಸ್ಥಿತರಿದ್ದರು.