ಒಳಚರಂಡಿ, ರಸ್ತೆಯ ಅವೈಜ್ಞಾನಿಕ ಕಾಮಗಾರಿಗೆ ತಡೆ ನೀಡಲು ಕೃಷ್ಣಾ ಹಡಪದ ಆಗ್ರಹ

ಒಳಚರಂಡಿ, ರಸ್ತೆಯ ಅವೈಜ್ಞಾನಿಕ ಕಾಮಗಾರಿಗೆ ತಡೆ ನೀಡಲು ಕೃಷ್ಣಾ ಹಡಪದ ಆಗ್ರಹ Krishna Hadapada demands to stop unscientific work on drainage and roads

ಗದಗ 24: ನಗರದ 16ನೇ ವಾರ್ಡ್ನ ಹೊಂಬಳ ನಾಕಾ ಜನತಾ ಕಾಲೋನಿಯಲ್ಲಿ ಕಳೆದ 40 ವರ್ಷಗಳಿಂದ ರಸ್ತೆ ಮತ್ತು ಒಳಚರಂಡಿ ಇಲ್ಲದೆ ನಿವಾಸಿಗಳು ಅನುಭವಿಸುತ್ತಿರುವ ನರಕಯಾತನೆಗೆ ಕೊನೆಗೂ ಮುಕ್ತಿ ಸಿಗುವ ಲಕ್ಷಣಗಳು ಕಂಡುಬಂದಿವೆ. ಆದರೆ, ಈಗ ಆರಂಭವಾಗಿರುವ ರಸ್ತೆ ಕಾಮಗಾರಿಯು ಕೇವಲ ಹೆಸರಿಗೆ ಮಾತ್ರವಾಗದೆ, ವೈಜ್ಞಾನಿಕವಾಗಿ ಮತ್ತು ದೂರದೃಷ್ಟಿಯಿಂದ ನಡೆಯಬೇಕು ಎಂದು ಹೊಂಬಳನಾಕಾ ಜನತಾ ಕಾಲೋನಿ ಅಭಿವೃದ್ಧಿಪರ ಸೇವಾ ಸಂಘದ ಅಧ್ಯಕ್ಷರಾದ ಕೃಷ್ಣಾ ಎಚ್ ಹಡಪದ ಅವರು ಗಂಭೀರವಾಗಿ ಒತ್ತಾಯಿಸಿದ್ದಾರೆ.      

 ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, "ನಮ್ಮ ಕಾಲೋನಿಯಲ್ಲಿ ತುರ್ತು ಸಂದರ್ಭದಲ್ಲಿ ಒಂದು ಸಣ್ಣ ಆಂಬುಲೆನ್ಸ್‌ ಬರಲು ಕೂಡ ಜಾಗವಿಲ್ಲದ ಪರಿಸ್ಥಿತಿ ದಶಕಗಳಿಂದ ಇದೆ. ಅನಾರೋಗ್ಯ ಪೀಡಿತರನ್ನು ಅಥವಾ ಗರ್ಭಿಣಿಯರನ್ನು ಮುಖ್ಯ ರಸ್ತೆಯವರೆಗೆ ಹೊತ್ತುಕೊಂಡು ಹೋಗುವ ಅನಿವಾರ್ಯತೆ ಇಂದಿಗೂ ಇದೆ. ಈಗ ರಸ್ತೆ ನಿರ್ಮಾಣವಾಗುತ್ತಿರುವುದು ಸಂತೋಷದ ವಿಷಯವೇ ಆದರೂ, ರಸ್ತೆ ಮಧ್ಯದಲ್ಲಿರುವ ಗಿಡಗಂಟಿಗಳನ್ನು ತೆರವುಗೊಳಿಸದೆ ಕಾಮಗಾರಿ ನಡೆಸಿದರೆ ರಸ್ತೆ ವಿಸ್ತರಣೆಯ ಉದ್ದೇಶವೇ ಅಯಶಸ್ವಿಯಾಗುತ್ತದೆ.     

  ಇದು ಕೇವಲ ಅತಿಕ್ರಮಣಕಾರರಿಗೆ ಅನುಕೂಲ ಮಾಡಿಕೊಟ್ಟಂತಾಗುತ್ತದೆ" ಎಂದು ಆತಂಕ ವ್ಯಕ್ತಪಡಿಸಿದ್ದಾರೆ    "ದಶಕಗಳ ಹೋರಾಟದ ನಂತರ ಸಿಕ್ಕಿರುವ ಈ ರಸ್ತೆ ಭಾಗ್ಯವು ಶಾಶ್ವತವಾಗಿರಬೇಕು. ಒಳಚರಂಡಿ ಸಂಪರ್ಕವನ್ನು ನೀಡುವ ಮೊದಲೇ ಸಿಸಿ ರಸ್ತೆ ನಿರ್ಮಿಸಿದರೆ, ಮುಂದೆ ಕಲೆಕ್ಷನ್ಗಾಗಿ ಹೊಸ ರಸ್ತೆಯನ್ನೇ ಅಗೆಯಬೇಕಾಗುತ್ತದೆ. ಇದು ಸಾರ್ವಜನಿಕರ ತೆರಿಗೆ ಹಣದ ಪೋಲು. ಆದ್ದರಿಂದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಮೊದಲು ಒಳಚರಂಡಿ ಕಾಮಗಾರಿ ಪೂರ್ಣಗೊಳಿಸಿ, ನಂತರ ಸುಸಜ್ಜಿತ ಸಿಸಿ ರಸ್ತೆ ನಿರ್ಮಿಸಬೇಕು" ಎಂದು ಕೃಷ್ಣಾ ಎಚ್ ಹಡಪದ ಅವರು ಆಗ್ರಹಿಸಿದ್ದಾರೆ.     

  ಬಡವರ ನೋವಿಗೆ ಸ್ಪಂದಿಸುವ ಸಚಿವರ ಸುಪುತ್ರರಾದ ಕೃಷ್ಣಗೌಡ್ರು ಪಾಟೀಲ್, ನಗರಸಭೆಯ ದಕ್ಷ ಅಧಿಕಾರಿಗಳಾದ ಲಕ್ಷ್ಮಣ ಜೋಗದಂಡ್ಕರ್ ಹಾಗೂ 16ನೇ ವಾರ್ಡ್ನ ಸಮಗ್ರ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ನಗರಸಭೆಯ ಹಿರಿಯ ಸದಸ್ಯರಾದ ಕೃಷ್ಣಾ ಪರಾಪೂರ ಅವರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು. ಕಾಮಗಾರಿ ನಡೆಯುವ ಸ್ಥಳಕ್ಕೆ ಭೇಟಿ ನೀಡಿ, ರಸ್ತೆ ಅತಿಕ್ರಮಣವಾಗದಂತೆ ಗಿಡಗಳನ್ನು ತೆರವುಗೊಳಿಸಿ, ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಹೊಂಬಳನಾಕಾ ಜನತಾ ಕಾಲೋನಿ ಅಭಿವೃದ್ಧಿಪರ ಸೇವಾ ಸಂಘದ ಅಧ್ಯಕ್ಷರಾದ ಕೃಷ್ಣಾ ಎಚ್ ಹಡಪದ ಅವರು ಕಾಲೋನಿಯ ಸಮಸ್ತ ನಾಗರಿಕರ ಪರವಾಗಿ ವಿನಂತಿಸಿದ್ದಾರೆ.