ನವದೆಹಲಿ, ಮಾರ್ಚ್ 26, ಕರೋನವೈರಸ್ ಪೀಡಿತ ಇರಾನ್‌ನಿಂದ ಮಾರ್ಚ್ 28 ರಂದು 142 ಭಾರತೀಯ ಪ್ರಜೆಗಳ ತಂಡವನ್ನು ಸ್ಥಳಾಂತರಗೊಳಿಸಿ ಇವರನ್ನು ರಾಜಸ್ಥಾನದ ಜೋಧ್‍ಪುರದ ಭಾರತೀಯ ಸೇನಾ ಕ್ಷೇಮ ಸೌಲಭ್ಯದಲ್ಲಿ ಸಂಪರ್ಕತಡೆಯಲ್ಲಿ ಇರಿಸಲಾಗುವುದು. ಇದರೊಂದಿಗೆ ಈವರೆಗೆ ಒಟ್ಟು 808 ಭಾರತೀಯ ಪ್ರಜೆಗಳನ್ನು ಇರಾನ್‌ನಿಂದ ಸ್ಥಳಾಂತರಿಸಿದಂತಾಗುತ್ತದೆ.ಖಾಸಗಿ ವಿಮಾನಯಾನ ಸಂಸ್ಥೆ ‘ಸ್ಪೈಸ್ ಜೆಟ್’ ಮಾರ್ಚ್ 29 ರಂದು ದೆಹಲಿ ಮತ್ತು ಜೋಧ್‍ಪುರ ನಡುವೆ ವಿಶೇಷ ವಿಮಾನ ಸೇವೆ ಒದಗಿಸಲಿದ್ದು, ಸ್ಥಳಾಂತರಗೊಂಡವರನ್ನು ಜೋಧ್‍ಪುರದ ಸಂಪರ್ಕತಡೆ ಕೇಂದ್ರಕ್ಕೆ ಹೊತ್ತೊಯ್ಯಲಿದೆ. ಭಾರತ ಸರ್ಕಾರದ ಮನವಿಯಂತೆ ಸ್ಪೈಸ್ ಜೆಟ್ ವಿಶೇಷ ವಿಮಾನ ಒದಗಿಸುತ್ತಿದ್ದು, ಇದಕ್ಕಾಗಿ ಸಂಸ್ಥೆ ತನ್ನ ಬೋಯಿಂಗ್ 737 ವಿಮಾನವನ್ನು ನಿಯೋಜಿಸುತ್ತಿದೆ. ಇರಾನ್‌ನಿಂದ ಸ್ಥಳಾಂತಗೊಳ್ಳುತ್ತಿರುವ ಭಾರತೀಯ ಪ್ರಜೆಗಳ ಆರನೇ ತಂಡ ಇದಾಗಿದೆ. ಮಧ್ಯಪ್ರಾಚ್ಯ ದೇಶವಾದ ಇರಾನ್‍ನಲ್ಲಿ ಯೂರೋಪ್‍ನ ಇಟಲಿ ಮತ್ತು ಸ್ಪೇನ್ ಹಾಗೂ ಚೀನಾ ನಂತರ ಕರೋನವೈರಸ್‌ನ ಹೆಚ್ಚಿನ ಪ್ರಕರಣಗಳು ಮತ್ತು ಸಾವುಗಳು ವರದಿಯಾಗಿವೆ. ಜಗತ್ತಿನಾದ್ಯಂತ ಮಾನವಕುಲಕ್ಕೆ ಸಂಕಷ್ಟದ ಬಿಕ್ಕಟ್ಟು ಎದುರಾಗಿರುವ ಸಂದರ್ಭದಲ್ಲಿ ಕರೋನವೈರಸ್ ವಿರುದ್ಧದ ಜಂಟಿ ಹೋರಾಟಕ್ಕೆ ಸಂಸ್ಥೆಯು ಸರ್ಕಾರದೊಂದಿಗೆ ಕೈಜೋಡಿಸಲು ಹೆಮ್ಮೆಯಾಗುತ್ತಿದೆ ಎಂದು ಸ್ಪೈಸ್ ಜೆಟ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಅಜಯ್ ಸಿಂಗ್ ಹೇಳಿದ್ದಾರೆ.
ಮಾರಕ ಸೋಂಕಿನಿಂದ ಇರಾನ್‍ನಲ್ಲಿ 28,000 ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿದ್ದು, 2000 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಈ ಮಧ್ಯೆ, ಭಾರತದಲ್ಲಿ ಕೊರೊನಾವೈರಸ್‍ನ ಪ್ರಕರಣಗಳ ಸಂಖ್ಯೆ 673 ಏರಿದ್ದು, ಸಾವಿನ ಸಂಖ್ಯೆ 15 ಕ್ಕೆ ತಲುಪಿದೆ.ವಿಶ್ವದಾದ್ಯಂತ ಕರೋನವೈರಸ್ ಸೋಂಕಿನಿಂದ 21,000 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, ಇಟಲಿಯೊಂದರಲ್ಲೇ 7,500 ಕ್ಕೂ ಹೆಚ್ಚು ಸಾವುಗಳು ಸಂಭಸಿವೆ.