ಸಂಸ್ಕೃತ ವಿವಿಯಿಂದ ಕೋವಿಡ್‌-19 ಜಾಗೃತಿ ಕಾರ್ಯಕ್ರಮ

ಬೆಂಗಳೂರು, ಏ.9, ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಎನ್.ಎಸ್.ಎಸ್‌ ಕೋಶದ ವತಿಯಿಂದ  ಝೂಮ್ ವಿಡಿಯೋ ಕಾನ್ಫರೆನ್ಸ್ ಮುಖಾಂತರ “ಕೋವಿಡ್ -19” (ಕೋರೋನಾ) ಎಂಬ ವಿಷಯದ ಬಗ್ಗೆ“ಜಾಗೃತಿ ಕಾರ್ಯಕ್ರಮ”ವನ್ನು ಹಮ್ಮಿಕೊಳ್ಳಲಾಗಿತ್ತು.ಈ ಕಾರ್ಯಕ್ರಮದ ಉದ್ಘಾಟನೆಯನ್ನು ರಾಜ್ಯ ಎನ್.ಎಸ್.ಎಸ್. ಘಟಕದ ಕಾರ್ಯಕ್ರಮಾಧಿಕಾರಿಗಳು ಹಾಗೂ ಜಂಟಿ ಕಾರ್ಯದರ್ಶಿ ಡಾ. ಗಣನಾಥ ಶೆಟ್ಟಿಎಕ್ಕಾರು ಉದ್ಘಾಟಿಸಿ ವಿದ್ಯಾರ್ಥಿಗಳಿಗೆ, ಪೋಷಕರಿಗೆ, ವಿಶ್ವವಿದ್ಯಾಲಯದ ಬೋಧಕ ಬೋಧಕೇತರ ಸಿಬ್ಬಂದಿಗಳಿಗೆ ಅರಿವು ಮೂಡಿಸಲು ಇದನ್ನು ಏರ್ಪಡಿಸಲಗಿದೆ. ಕೊರೋನಾ ಬಾಧೆಯಿಂದ ತತ್ತರಿಸುತ್ತಿರುವ ಈ ಸಂದರ್ಭದಲ್ಲಿ ಅದರ ಜಾಗೃತಿಗಾಗಿ ಎಲ್ಲರ ಕರ್ತವ್ಯವನ್ನು ನೆನಪಿಸಿದರು.
ಎನ್.ಎಸ್.ಎಸ್‌ಕಾರ್ಯಕ್ರಮ ಅನುಷ್ಠಾನಾಧಿಕಾರಿಗಳಾದ ಡಾ. ಪೂರ್ಣಿಮಾ ಜೋಗಿ ಅವರು ಮಾತನಾಡಿ, “ಕೋವಿಡ್”ಎನ್ನುವುದು ಕಣ್ಣಿಗೆ ಕಾಣದ ಶತ್ರು, ಇದನ್ನು ಅರಿವಿನ ಜ್ಞಾನದಿಂದ ಓಡಿಸಬೇಕು. ಯುದ್ಧದಲ್ಲಿ ಯೋಧರು ಹೋರಾಟ ಮಾಡುವಂತೆ ಇಲ್ಲಿ ಎನ್.ಎಸ್.ಎಸ್ ಸಂಪನ್ಮೂಲ ವ್ಯಕ್ತಿಗಳು, ವೈದ್ಯರು, ದಾದಿಯರು, ಆಶಾ ಕಾರ್ಯಕರ್ತರು, ಸಮಾಜ ಸೇವಕರು, ಯಾವುದೇ ಶಸ್ತ್ರದ ಸಹಾಯವಿಲ್ಲದೇ ಜ್ಞಾನವೆಂಬ ಅರಿವಿನಿಂದ ಯೋಧರಂತೆ ಹೋರಾಟ ಮಾಡುತ್ತಿದ್ದಾರೆ. ಅವರಿಗೆ ನಾವು ಸಹಕಾರ ಮತ್ತು ಬಲ ನೀಡುವ ಮೂಲಕ ಈ ಯುದ್ಧವನ್ನು ಗೆಲ್ಲೋಣ ಎಂದು ಕರೆ ಕೊಟ್ಟರು.
ಹಿರಿಯ ವೈದ್ಯಾಧಿಕಾರಿಗಳು ಹಾಗೂ ರಾಜ್ಯಮಟ್ಟದ ಸಂಪನ್ಮೂಲ ವ್ಯಕ್ತಿಗಳಾದ ಡಾ. ಶಿವಕುಮಾರ್‌, ಕೋರೋನಾ ವೈಸರ್‌ನ ಹುಟ್ಟು, ಬೆಳವಣಿಗೆ, ಅದರ ಜೀವಿತಾವಧಿ, ಅದರ ಹರಡುವಿಕೆ, ಲಕ್ಷಣಗಳು, ಅದಕ್ಕೆ ಪರಿಹಾರಗಳು ಮತ್ತು ನಾವು ಶುಚಿತ್ವವನ್ನುಕಾಪಾಡಿ, ಸಮಾಜವನ್ನು ಅದರ ಮೂಲಕ ನಮ್ಮನ್ನು ನಾವು ಹೇಗೆ ರಕ್ಷಿಸಿಕೊಳ್ಳಬೇಕೆಂದು ಕರೆ ಕೊಟ್ಟರು. ಈ ವೈರಸ್‌ನ ಉಗಮ, ಹರಡುತ್ತಿರುವ ರೀತಿ ಇತ್ಯಾದಿ ವಿವಿಧ ವಿಷಯಗಳ ಬಗ್ಗೆ ವಿಸ್ತಾರವಾಗಿ“ಝೂಮ್” ವಿಡಿಯೋಕಾನ್ಫರೆನ್ಸ್ ಮುಖಾಂತರ ತಿಳಿಸಿಕೊಟ್ಟರು. ವಿಶ್ವವಿದ್ಯಾಲಯದ ಕುಲಸಚಿವ ಪ್ರೊ. ವೀರನಾರಾಯಣ ಎನ್.ಕೆ. ಪಾಂಡುರಂಗಿ ಪ್ರಾಸ್ತಾವಿಕ ಮಾತುಗಳನ್ನು ಆಡಿದರು. ಕುಲಪತಿಗಳಾದ ಪ್ರೊ. ವಿ. ಗಿರೀಶ್‌ಚಂದ್ರ ಅಧ್ಯಕ್ಷತೆ ವಹಿಸಿ, ನಮ್ಮರಕ್ಷಣೆಯನ್ನು ನಾವೇ ಮಾಡಿಕೊಳ್ಳುವ ಮೂಲಕ ಆತ್ಮಸ್ಥೈರ್ಯವನ್ನು ಹೆಚ್ಚಿಸಿಕೊಳ್ಳಬೇಕೆಂದು ಕರೆಕೊಟ್ಟರು. ವಿಶ್ವವಿದ್ಯಾಲಯದ ಎಲ್ಲ ಬೋಧಕ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.