ಕೋವಿಡ್ -19: ಸಣ್ಣ ಉದ್ಯಮ, ಆಸ್ಪತ್ರೆಗಳಿಗೆ ನೆರವಾಗಲು 484 ಶತಕೋಟಿ ಡಾಲರ್ ಪರಿಹಾರ ಮಸೂದೆಗೆ ಟ್ರಂಪ್‍ ಸಹಿ

ವಾಷಿಂಗ್ಟನ್, ಏಪ್ರಿಲ್ 25, ಸಣ್ಣ ಉದ್ಯಮಗಳು, ಆಸ್ಪತ್ರೆಗಳಿಗೆ ಆರ್ಥಿಕ ಸಹಾಯವನ್ನು ಹೆಚ್ಚಿಸಲು ಮತ್ತು ದೇಶದಲ್ಲಿ ಕೊವಿಡ್‍-19 ಪರೀಕ್ಷೆಗಳನ್ನು ವಿಸ್ತರಿಸಲು 484 ಶತಕೋಟಿ ಡಾಲರ್ ಮೊತ್ತದ ಪರಿಹಾರ ಪ್ಯಾಕೇಜ್‌ ಕಾನೂನಿಗೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಹಿ ಹಾಕಿದ್ದಾರೆ.ಈ ಮಸೂದೆ ಸಣ್ಣ ಉದ್ಯಮಗಳಿಗೆ ಮತ್ತು ಕಾರ್ಮಿಕರಿಗೆ ಅದ್ಭುತ ಪರಿಹಾರವಾಗಲಿದೆ ಎಂದು ಶ್ವೇತಭವನದ ಓವಲ್ ಕಚೇರಿಯಲ್ಲಿ ಶುಕ್ರವಾರ ನಡೆದ ಸಹಿ ಸಮಾರಂಭದ ನಂತರ ಟ್ರಂಪ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಹಣಕಾಸು ಕಾರ್ಯದರ್ಶಿ ಸ್ಟೀವನ್ ಮ್ಯೂಚಿನ್ ಮತ್ತು ರಿಪಬ್ಲಿಕನ್ ಪಕ್ಷದ ಸಂಸದರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.  ಈ ಪರಿಹಾರ ಮಸೂದೆ ಸಣ್ಣ ಉದ್ಯಮಗಳನ್ನು ಉಳಿಸಲು ಮತ್ತು ಅಮೆರಿಕನ್ನರ ವೇತನಗಳನ್ನು ರಕ್ಷಿಸಲು ಹಣದ ನೆರವು ವಿಸ್ತರಿಸುತ್ತದೆ ಎಂದು ರಿಪಬ್ಲಿಕನ್ ಪಕ್ಷದ ಕೆಂಟುಕಿ  ಸದಸ್ಯ ಮಿಚ್ ಮೆಕ್‌ಕಾನ್ನೆಲ್ ಅವರು ಸಹಿ ಹಾಕಿದ ಸ್ವಲ್ಪ ಸಮಯದ ನಂತರ ಟ್ವಿಟರ್‌ನಲ್ಲಿ ತಿಳಿಸಿದ್ದಾರೆ.  ಇದು ಆಸ್ಪತ್ರೆಗಳು, ಆರೋಗ್ಯ ಸೇವೆ ಒದಗಿಸುವವರಿಗೆ ನೆರವನ್ನು ಬಲಪಡಿಸುವುದರೊಂದಿಗೆ ಪರೀಕ್ಷೆಗಳ ಸಾಮರ್ಥ್ಯ ಹೆಚ್ಚಿಸಲು ಅನುವು ಮಾಡಿಕೊಡಲಿದೆ. ಸಣ್ಣ ವ್ಯಾಪಾರ ಸಾಲವನ್ನು ಹೆಚ್ಚಿಸಲು ಪೇಚೆಕ್ ಪ್ರೊಟೆಕ್ಷನ್ ಪ್ರೋಗ್ರಾಂ (ಪಿಪಿಪಿ) ಗೆ 310 ಶತಕೋಟಿ ಡಾಲರ್‌ಗಳಿಗಿಂತ ಹೆಚ್ಚಿನ ಹೆಚ್ಚುವರಿ ಹಣವನ್ನು ಈ ಪ್ಯಾಕೇಜ್ ಒದಗಿಸುತ್ತದೆ. ಸಣ್ಣ ವ್ಯಾಪಾರ ಮತ್ತು ವಿಪತ್ತು ಸಹಾಯ ಸಾಲಕ್ಕಾಗಿ 60 ಶತಕೋಟಿ ಡಾಲರ್ ಗಳ ಜೊತೆಗೆ ಆಸ್ಪತ್ರೆಗಳಿಗೆ 75 ಶತಕೋಟಿ ಡಾಲರ್ ಮತ್ತು 25 ವೈರಸ್ ಪರೀಕ್ಷೆಗೆ 25 ಶತಕೋಟಿ ಡಾಲರ್ ಒದಗಿಸುತ್ತದೆ.