ವಾಷಿಂಗ್ಟನ್, ಏಪ್ರಿಲ್ 22, ಗ್ರೀನ್ ಕಾರ್ಡ್ ಹೊಂದಿರುವವರ ವಲಸೆಯನ್ನು 60 ದಿನಗಳವರೆಗೆ ತಡೆಯಲಾಗುವುದು ಎಂದಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ವಲಸೆರಹಿತ ವೀಸಾ ಹೊಂದಿರುವ ಕಾರ್ಮಿಕರಿಗೆ ಪ್ರವೇಶಕ್ಕೆ ಅವಕಾಶ ಮುಂದುವರೆಯಲಿದೆ ಎಂದು ಹೇಳಿದ್ದಾರೆ.ಶ್ವೇತಭವನದ ಈ ಕ್ರಮ ಕರೋನವೈರಸ್ ಬಿಕ್ಕಟ್ಟಿನ ಸಂದರ್ಭದಲ್ಲಿ ಅಮೆರಿಕದ ಉದ್ಯೋಗಗಳನ್ನು ಕಾಪಾಡಲಿದೆ ಎಂದು ಟ್ರಂಪ್ ಟ್ವೀಟ್‌ನಲ್ಲಿ ಹೇಳಿದ್ದಾರೆ.‘ಅಮೆರಿಕಕ್ಕೆ ವಲಸೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.’ಎಂದು ಕರೋನವೈರಸ್ ಉಲ್ಬಣ ಮತ್ತು ಉದ್ಯೋಗಗಳ ಕೊರತೆಯನ್ನು ಉಲ್ಲೇಖಿಸಿ ಟ್ರಂಪ್ ಶ್ವೇತಭವನದಲ್ಲಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಸರ್ಕಾರದ ಈ ಕ್ರಮದಿಂದ ನಿರುದ್ಯೋಗಿ ಅಮೆರಿಕನ್ನರಿಗೆ ಮೊದಲು ಉದ್ಯೋಗ ದೊರಕಲು ಸಹಾಯವಾಗಲಿದೆ. ಅಮೆರಿಕನ್ನರ ಜಾಗಗಳಿಗೆ ವಿದೇಶದಿಂದ ಬಂದ ವಲಸೆ ಕಾರ್ಮಿಕರನ್ನು ನೇಮಿಸುವುದು ತಪ್ಪಾಗುತ್ತದೆ ಎಂದು ಟ್ರಂಪ್ ಹೇಳಿರುವುದಾಗಿ ಸಿಎನ್ಎನ್ ವರದಿ ಮಾಡಿದೆ.ಅಮೆರಿಕದಲ್ಲಿ ಶಾಶ್ವತ ನೆಲೆ ಬಯಸುವ ಜನರಿಗೆ ಈ ಆದೇಶವು ಅನ್ವಯಿಸುತ್ತದೆ. ಆದರೆ ವಲಸೆ ಕೃಷಿ ಕಾರ್ಮಿಕರಿಗೆ ವಿನಾಯಿತಿ ನೀಡಲಾಗುವುದು ಎಂದು ಅವರು ಹೇಳಿದ್ದಾರೆ. ಈ ಕುರಿತ ಆದೇಶಕ್ಕೆ ಬುಧವಾರ ಸಹಿ ಮಾಡುವುದಾಗಿ ಟ್ರಂಪ್ ಹೇಳಿದ್ದು, 60 ದಿನಗಳ ಅವಧಿ ನಂತರ ಆದೇಶವನ್ನು ಪರಿಶೀಲಿಸಿ ನವೀಕರಿಸಬೇಕೇ, ಬೇಡವೇ ಎಂಬ ಬಗ್ಗೆ ನಿರ್ಧರಿಸುವುದಾಗಿ ಹೇಳಿದ್ದಾರೆ.