ಕಾರವಾರ, ಮಾ.30, ಕೊರೋನಾ ಸೋಂಕು ಶಂಕಿತ ಎಂದು ಭಟ್ಕಳ ತಾಲೂಕು ಆಸ್ಪತ್ರೆಯಲ್ಲಿ ದಾಖಲಾಗಿ ಭಾನುವಾರ ರಾತ್ರಿ ಪರಾರಿಯಾಗುವ ಮೂಲಕ ಆತಂಕ ಸೃಷ್ಟಿಸಿದ್ದ ಯುವಕನೊಬ್ಬನನ್ನು ಕಾರ್ಯಾಚರಣೆ ನಡೆಸಿ ಪೊಲೀಸರು ಪತ್ತೆಹಚ್ಚಿ ಆಸ್ಪತ್ರೆಗೆ ಮರಳಿ ದಾಖಲಿಸುವಲ್ಲಿ ಯಶಸ್ವಿಯಾಗಿದ್ದಾರೆ.ಕಳೆದ ಶುಕ್ರವಾರ ಕೊರೊನಾ ಶಂಕಿಯ ಮೇಲೆ ಆಸ್ಪತ್ರೆಗೆ ದಾಖಲಾಗಿದ್ದು ಭಾನುವಾರ ಬೆಳಿಗ್ಗೆನಿಂದ ಆಸ್ಪತ್ರೆಯ ಸುತ್ತಮುತ್ತ ಯುವತಿಯೋರ್ವಳು ಮಾಸ್ಕ್ ಧರಿಸಿಕೊಂಡು ಓಡಾಡಿಕೊಂಡಿದ್ದಳು.
ಇದೇ ಯುವತಿ, ಯುವಕನಿಗೆ ಊಟ ನೀಡುವ ನೆಪದಲ್ಲಿ ವಾರ್ಡ್ ಪ್ರವೇಶಿಸಿ ಯುವಕನನ್ನು ಕರೆದುಕೊಂಡು ಹೋಗಿದ್ದಾಳೆ. ಜ್ವರ ಹಾಗೂ ಗಂಟಲು ನೋವು ಹೊಂದಿರುವ ಈತ ಸಂಶಯ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ. ಪರಾರಿಯಾಗಿದ್ದ ಶಂಕಿತ ಯುವಕನನ್ನು ಪೊಲೀಸರು ಕೊನೆಗೂ ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.ಜ್ವರ ಹಾಗೂ ಗಂಟಲು ನೋವು ಹೊಂದಿದ್ದ ಈತನನ್ನು ಅನುಮಾನದ ಮೇಲೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಈತ ಕೊರೊನಾ ಸೋಂಕಿತರ ಅಥವಾ ವಿದೇಶದಿಂದ ಬಂದ ಯಾರ ಸಂಪರ್ಕಕ್ಕೂ ಹೋಗಿರಲಿಲ್ಲ. ಜೊತೆಗೆ ಕೊರೊನಾ ಲಕ್ಷಣ ಕಂಡು ಬಂದಿರಲಿಲ್ಲ ಎಂದು ವೈದ್ಯರು ದೃಢಪಡಿಸಿದ್ದು ಮುನ್ನೆಚ್ಚರಿಕಾ ಕ್ರಮವಾಗಿ ಕ್ವಾರಂಟೈನ್ ಮಾಡಲಾಗಿತ್ತು.ಆದರೆ ಭಯಗೊಂಡ ಯುವಕ ಪರಾರಿಯಾಗಿ ತನ್ನ ಮನೆ ಸೇರಿಕೊಂಡಿದ್ದ. ಮಾಹಿತಿ ತಿಳಿದ ಭಟ್ಕಳ ಪೊಲೀಸರು ಈತನ ಮನೆಗೆ ತೆರಳಿ ಕೌನ್ಸಿಲಿಂಗ್ ಮಾಡಿ ಭಟ್ಕಳ ಆಸ್ಪತ್ರೆಗೆ ಮರಳಿ ಕರೆ ತಂದಿದ್ದಾರೆ. ಇಡೀ ಭಟ್ಕಳದಲ್ಲಿ ಭಯ ಹುಟ್ಟಿಸಿದ್ದ ಶಂಕಿತನ ಪರಾರಿ ಪ್ರಕರಣ ಸುಖಾಂತ್ಯ ಕಂಡಿದ್ದು ಜನ ನಿಟ್ಟುಸಿರು ಬಿಡುವಂತಾಗಿದೆ.