ಪುಣೆ, ಏಪ್ರಿಲ್ 9,ಕೊರೊನವೈರಸ್ ಸೋಂಕಿನಿಂದ ನಗರದಲ್ಲಿ ಗುರುವಾರದವರೆಗೆ ಸಾವನ್ನಪ್ಪಿದವರ ಸಂಖ್ಯೆ 20 ಕ್ಕೆ ತಲುಪಿದ್ದು, ದೃಢಪಟ್ಟ ಒಟ್ಟು ಪ್ರಕರಣಗಳ ಸಂಖ್ಯೆ 200 ದಾಟಿದೆ.ಪುಣೆ ನಗರ ಪಾಲಿಕೆ ಪ್ರದೇಶಗಳಿಂದ ಹೊಸ 22 ಪ್ರಕರಣಗಳು ದೃಢಪಟ್ಟಿದ್ದು, 14 ಪ್ರಕರಣಗಳು ಪುಣೆ ಗ್ರಾಮೀಣ ಪ್ರದೇಶಗಳಿಂದ ವರದಿಯಾಗಿವೆ. ಸಾವನ್ನಪ್ಪಿರುವ 20 ಜನರ ಪೈಕಿ ಒಬ್ಬರು ಬಾರಾಮತಿಯವರಾಗಿದ್ದರೆ, 19 ಮಂದಿ ಪುಣೆ ಮಹಾನಗರ ಪಾಲಿಕೆ (ಪಿಎಮ್‌ಸಿ) ಪ್ರದೇಶದವರಾಗಿದ್ದಾರೆ ಎಂದು ಪುಣೆ ಮೇಯರ್ ಮುರಳೀಧರ್ ಮೊಹೋಲ್ ಇಲ್ಲಿ ತಿಳಿಸಿದ್ದಾರೆ.
ಮಹಾರಾಷ್ಟ್ರ ಆರೋಗ್ಯ ಇಲಾಖೆಯ ಮಾಹಿತಿಯಂತೆ, ಮಹಾರಾಷ್ಟ್ರದಲ್ಲಿ ಗುರುವಾರ 162 ಹೊಸ ಕೊವಿದ್-19 ಪ್ರಕರಣಗಳು ವರದಿಯಾಗಿದ್ದು, ರಾಜ್ಯದಲ್ಲಿ ದೃಢಪಟ್ಟ ಒಟ್ಟು ಪ್ರಕರಣಗಳ ಸಂಖ್ಯೆ 1297 ಕ್ಕೆ ತಲುಪಿದೆ.ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಮಾಹಿತಿಯಂತೆ, ದೇಶಾದ್ಯಂತ, ಕಳೆದ 24 ಗಂಟೆಗಳಲ್ಲಿ 540 ಹೊಸ ಕೊವಿದ್-19 ಪ್ರಕರಣಗಳು ವರದಿಯಾಗಿದ್ದು, 17 ಸಾವುಗಳು ಸಂಭವಿಸಿವೆ. ಈ ಮಧ್ಯೆ, ಭಾರತದಲ್ಲಿ ಕೊರೊನಾವೈರಸ್ ನ ದೃಢಪಟ್ಟ ಪ್ರಕರಣಗಳ ಸಂಖ್ಯೆ 5734 ಕ್ಕೆ ಏರಿದೆ. ಇವುಗಳಲ್ಲಿ 5095 ಸಕ್ರಿಯ ಪ್ರಕರಣಗಳು, ಗುಣಮುಖರಾದ 473 ಪ್ರಕರಣಗಳು ಮತ್ತು 166 ಸಾವುಗಳು ಸೇರಿವೆ.