ಕೋವಿಡ್-19: ರಾಯಚೂರಿನಲ್ಲಿ ಗುಣಮುಖರಾದ 34 ಮಂದಿ ಬಿಡುಗಡೆ

ರಾಯಚೂರು, ಮೇ 31,ನೋವೆಲ್ ಕೊರೋನಾ ವೈರಸ್ ದೃಢಪಟ್ಟ ಹಿನ್ನೆಲೆಯಲ್ಲಿ ಚಿಕಿತ್ಸೆಗೆಂದು ನಗರದ ಒಪೆಕ್  ಆಸ್ಪತ್ರೆಯಲ್ಲಿರುವ ಕೋವಿಡ್-19 ಆಸ್ಪತ್ರೆಗೆ ದಾಖಲಾಗಿದ್ದವರಲ್ಲಿ 34 ಮಂದಿ  ಸಂಪೂರ್ಣವಾಗಿ ಗುಣಮುಖರಾಗಿ ಆರೋಗ್ಯವಂತ ಸ್ಥಿತಿ ತಲುಪಿದ ಹಿನ್ನೆಲೆಯಲ್ಲಿ ಅವರನ್ನು   ಭಾನುವಾರ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು. ನಗರದ ಕೋವಿಡ್ ಆಸ್ಪತ್ರೆಯ ಆವರಣದಲ್ಲಿ ಜಿಲ್ಲಾಧಿಕಾರಿ ಆರ್. ವೆಂಕಟೇಶ ಕುಮಾರ, ಜಿಲ್ಲಾ  ಪೊಲೀಸ್ ವರಿಷ್ಠಾಧಿಕಾರಿ ಡಾ. ಸಿ.ಬಿ. ವೇದಮೂರ್ತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ  ಕಲ್ಯಾಣಾಧಿಕಾರಿ ಡಾ. ರಾಮಕೃಷ್ಣ, ರಿಮ್ಸ್ ಡೀನ್ ಡಾ. ಬಸವರಾಜ ಪೀರಾಪುರ, ಒಪೆಕ್  ವಿಶೇಷಾಧಿಕಾರಿ ಡಾ. ನಾಗರಾಜ ಗದ್ವಾಲ್, ಜಿಲ್ಲಾ ಸರ್ಜನ್ ಡಾ. ವಿಜಯ ಶಂಕರ್, ಡಿಎಸ್‌ಒ  ಡಾ. ನಾಗರಾಜ ಹಾಗೂ ಇತರೆ ಅಧಿಕಾರಿಗಳು ಗುಣಮುಖರಾದ ರೋಗಿಗಳ ಮೇಲೆ ಪುಷ್ಪವೃಷ್ಟಿಗರೆದು  ಸ್ವಾಗತಿಸಿ, ಅವರನ್ನು ಆಸ್ಪತ್ರೆಯಿಂದ  ಆಂಬುಲೇನ್ಸ್ ಮೂಲಕ ಅವರವರ ಮನೆಗೆ  ಕಳುಹಿಸಿಕೊಟ್ಟರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ  ಆರ್.ವೆಂಕಟೇಶ ಕುಮಾರ ಮಾತನಾಡಿ, ಹಸಿರು ವಲಯದಲ್ಲಿ ಗುರುತಿಸಿಕೊಂಡಿದ್ದ  ಜಿಲ್ಲೆಯಲ್ಲಿ ಇದೇ ಮೇ 17,18 ಮತ್ತು 19ರಂದು ಕೋವಿಡ್-19 ಸೋಂಕು ಹರಡಿರುವುದು ದೃಢ  ಪಟ್ಟನಂತರ ಎಲ್ಲ ಸೋಂಕಿತರನ್ನು ಓಪೆಕ್ ಆಸ್ಪತ್ರೆಯಲ್ಲಿರುವ ಐಸೋಲೇಷನ್ ವಾರ್ಡ್  ಸ್ಥಳಾಂತರಿಸಿ, 14 ದಿನಗಳ ಕಾಲ ಚಿಕಿತ್ಸೆ ನೀಡಿದ ನಂತರ ಗುಣಮುಖರಾದವರನ್ನು ಇಂದು  ಬಿಡುಗಡೆ ಮಾಡಲಾಗಿದೆ ಎಂದರು.ರಾಯಚೂರು ನಗರ, ಆಟೋ ನಗರ,  ಮಡ್ಡಿಪೇಟೆ, ಮಂದ್ರಕಲ್ ಗ್ರಾಮಕ್ಕೆ ಸೇರಿದ ಕೊರೋನಾ ಸೋಂಕಿತರು ಗುಣಮುಖರಾದ  ನಿಟ್ಟಿನಲ್ಲಿ ಬಿಡುಗಡೆ ಮಾಡಲಾಗಿದೆ. ಬಿಡುಗಡೆ ಹೊಂದಿರುವ ಸೋಂಕಿತರು ಇಂದಿನಿಂದ 14  ದಿನಗಳ ಕಾಲ ಕಡ್ಡಾಯವಾಗಿ ಹೋಂ ಕ್ವಾರೆಂಟೈನ್‌ನಲ್ಲಿಯೇ ಇರಬೇಕು, ಅವರ ಕೈಗಳ ಮೇಲೆ ಠಸ್ಸೆ  ಹಾಕಲಾಗಿದೆ, ಸೋಂಕಿತರ ಕೋವಿಡ್ ತಪಾಸಣೆಯನ್ನು ಎರಡು ಬಾರಿ ಪರೀಕ್ಷೆ ಮಾಡಿದ ನಂತರ  ನೆಗೆಟಿವ್ ಎಂದು ವರದಿ ಬಂದ ನಂತರ ಇಂದು ಬಿಡುಗಡೆ ಮಾಡಲಾಗಿದೆ ಎಂದರು.

ಬಿಡುಗಡೆ  ಹೊಂದಿರುವ ಸೋಂಕಿತರು ಮನೆಯಲ್ಲಿರಬೇಕು, ಯಾರ ಸಂಪರ್ಕಕ್ಕೆ ಹೋಗಬಾರದು ಇವರ ಮೇಲೆ  ನಿಗಾವಹಿಸಲು ಪೊಲೀಸರು, ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆಯ ಸಿಬ್ಬಂದಿ ಪ್ರತಿ  ನಿತ್ಯ ಮನೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ, ಸಂಬಂಧಿಸಿದವರಿಗೆ  ಪಟ್ಟಿಯನ್ನು ನೀಡಲಾಗಿದೆ,  ರಾಯಚೂರು ತಾಲೂಕಿನ ಹೊಸ ಮಲಿಯಬಾದ್ ಗ್ರಾಮಕ್ಕೆ ಸೇರಿದ  ಬಾಲಕಿಯನ್ನು ಸಹ ಇಂದು ಬಿಡುಗಡೆ ಮಾಡಲಾಗುತ್ತದೆ. ಅಲ್ಲದೇ ಮಲಿಯಬಾದ್ ಗ್ರಾಮದಲ್ಲಿ  ಕಂಟೆನ್ಮೆಂಟ್‌ ಝೋನ್ 28 ದಿನಗಳ ಕಾಲ ಮುಂದುವರಿಯಲಿದೆ ಎಂದು ತಿಳಿಸಿದರು.  ದೇವದುರ್ಗ ತಾಲೂಕಿನ ಕೋತಿಗುಡ್ಡ ಗ್ರಾಮದಲ್ಲಿ ಮೃತ ವ್ಯಕ್ತಿಯಲ್ಲಿ ಸೋಂಕು  ಪತ್ತೆಯಾಗಿದೆ. ಕೊರೋನಾ ನಿಯಾವಳಿಯಂತೆ ಶವಸಂಸ್ಕಾರ ಮಾಡಲಾಗಿದೆ. ಶವಸಂಸ್ಕಾರದಲ್ಲಿ  ಭಾಗಿಯಾದವರ ಮೇಲೆ ನಿಗಾವಹಿಸಲಾಗಿದೆ ಎಂದರು. ಮಹಾರಾಷ್ಟ್ರದಿಂದ ಇನ್ನೂ ಜಿಲ್ಲೆಗೆ  ಆಗಮಿಸಲು 200ಕ್ಕೂ ಹೆಚ್ಚು ಅರ್ಜಿಗಳು ಬಾಕಿಯಿವೆ. ಸರಿ ಸುಮಾರು 1500ಜನ ಬರುವ  ನಿರೀಕ್ಷೆಯಿದೆ ಎಂದರು.ಮಹಮಾರಿ ಕೊರೋನಾ ವೈರಸ್ ನಿಂದ  ಗುಣಮುಖರಾಗಿ ಆಸ್ಪತೆಯಿಂದ ಬಿಡುಗಡೆ ಭಾಗ್ಯ ದೂರೆಯುತ್ತಿದಂತೆ ಎಲ್ಲರ ಮುಗದಲ್ಲಿ ಸಂತೋಷ  ತುಂಬಿತ್ತು. ಸೋಂಕಿನಿಂದ ಗುಣಮುಖರಾದ ಎಂಬ ಸಂತೋಷ ಎಲ್ಲರಲ್ಲಿತ್ತು. ಆಂಬುಲೈನ್ಸ್‌ನಲ್ಲಿ  ಅವರ ಮನೆಗಳಿಗೆ ಕಳುಹಿಸಿಕೂಡಲಾಯಿತು.