ವಾಷಿಂಗ್ಟನ್, ರಿಯಾದ್, ಏ೫(ಯುಎನ್‌ಐ) ಅಗ್ರರಾಷ್ಟ್ರ ಅಮೆರಿಕಾದಲ್ಲಿ ರಕ್ಕಸ ಕೊರೊನಾ ವೈರಸ್ ತಲ್ಲಣ ಉಂಟುಮಾಡಿದೆ. ಈ ಸೋಂಕಿನಿಂದಾಗಿ ಈವರೆಗೆ ದೇಶಾದ್ಯಂತ ೮,೪೫೪ ಮಂದಿ ಮೃತಪಟ್ಟಿದ್ದಾರೆ. ನ್ಯೂಯಾರ್ಕ್ ನಗರ ಕೊರೊನಾ ವೈರಸ್ ಕೇಂದ್ರವಾಗಿ ಪರಿವರ್ತನೆಗೊಂಡಿದ್ದು, ನ್ಯೂಯಾರ್ಕ್‌ನಲ್ಲಿ ೧ ಲಕ್ಷದ ೧೪,೭೭೫ ಮಂದಿ ಸೋಂಕಿಗೆ ಒಳಗಾಗಿದ್ದು, ೩,೫೬೫ ಮಂದಿ ಸಾವನ್ನಪ್ಪಿದ್ದಾರೆ. ಸೋಂಕಿನಿಂದ ಭಾರತೀಯ ಮೂಲದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಮೃತವ್ಯಕ್ತಿಯನ್ನು ಕೇರಳದ ಇಡುಕ್ಕಿ ಜಿಲ್ಲೆಯ ಥಾಂಕಚನ್ ಎಚಾನನಟ್ಟು (೪೩) ಎಂದು ಗುರುತಿಸಲಾಗಿದೆ. ಥಾಂಚಚನ್ ನ್ಯೂಯಾರ್ಕ್ ಮೆಟ್ರೋಪಾಲಿಟನ್ ಸಾರಿಗೆ ಪ್ರಾಧಿಕಾರ ಉದ್ಯೋಗಿ. ಅಲ್ಲಿ ಕೆಲಸ ಮಾಡುವಾಗ ಕೊರೊನಾ ಸೋಂಕು ಕಾಣಿಸಿಕೊಂಡಿದ್ದರಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆರಂಭದಲ್ಲಿ ತೀವ್ರ ಜ್ವರದಿಂದ ಆಸ್ಪತ್ರೆಗೆ ದಾಖಲಾದ ಥಾಂಕಚನ್, ನಂತರ ಐಸಿಯು ವರ್ಗಾಯಿಸಲಾಗಿತ್ತು. ಚಿಕಿತ್ಸೆ ಪಡೆಯುತ್ತಿರುವಾಗ ಅವರು ಮೃತಪಟ್ಟಿದ್ದಾರೆ. ಅವರಿಗೆ ಪತ್ನಿ ಶೀಬಾ, ಮಕ್ಕಳು ಮ್ಯಾಥ್ಯೂಸ್ ಮತ್ತು ಸಿರಿಲ್ ಇದ್ದಾರೆ. ಥಾಂಕಚನ್ ಸಾವಿನೊಂದಿಗೆ ಅಮೆರಿಕಾದಲ್ಲಿ ಕೊರೊನಾದಿಂದ ಮೃತಪಟ್ಟ ಕೇರಳಿಗರ ಸಂಖ್ಯೆ ೩ ಕ್ಕೆ ಏರಿದೆ. ನಾಲ್ಕು ದಿನಗಳ ಹಿಂದೆ, ಥಾಮಸ್ ಡೇವಿಡ್ (೪೩) ಎಂಬ ವ್ಯಕ್ತಿ ಕೊರೊನಾದಿಂದ ಮೃತಪಟ್ಟಿದ್ದರು. ಥಾಮಸ್ ಕೂಡಾ ನ್ಯೂಯಾರ್ಕ್ ಮೆಟ್ರೋಪಾಲಿಟನ್ ಸಾರಿಗೆ ಪ್ರಾಧಿಕಾರದ ಉದ್ಯೋಗಿಯಾಗಿದ್ದರು. ಸೌದಿ ಅರೇಬಿಯಾದಲ್ಲಿ, ಮತ್ತೊಬ್ಬ ಕೇರಳ ವ್ಯಕ್ತಿ ಕೊರೊನಾ ವೈರಸ್ ಲಕ್ಷಣದಿಂದ ಸಾವನ್ನಪ್ಪಿದ್ದಾರೆ. ಮಲಪ್ಪುರಂನ ತಿರುರಂಗಡಿಯ ಸಫ್ವಾನ್ (೩೮) ಸೌದಿ ಜರ್ಮನ್ ಆಸ್ಪತ್ರೆಯಲ್ಲಿ ಶನಿವಾರ ರಾತ್ರಿ ಮೃತಪಟ್ಟಿದ್ದಾರೆ. ಕೊರೊನಾ ರೋಗಲಕ್ಷಣದಿಂದ ಸಫ್ವಾನ್ ಮೃತಪಟ್ಟಿದ್ದಾರೆ ಎಂದು ಸಂಬಂಧಿಕರು ತಿಳಿಸಿದ್ದಾರೆ. ಅವರ ಪತ್ನಿ ಖಮರುನಿಜಾ ಕಳೆದ ತಿಂಗಳು ರಿಯಾದ್ ಗೆ ತೆರಳಿದ್ದರು.
ಹೊಸದಾಗಿ ಮದುವೆಯಾಗಿದ್ದ ಮತ್ತೊಬ್ಬ ಕೇರಳದ ಯುವಕನಿಗೂ ಸೋಂಕು ತಗುಲಿ ಶನಿವಾರ ಮೃತಪಟ್ಟಿದ್ದಾರೆ. ಕಣ್ಣೂರು ಜಿಲ್ಲೆಯ ಪನೂರ್ ನವರಾದ ಷಬ್ನಾಜ್ (೨೮) ಮದೀನದ ಜರ್ಮನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಾಗ ಶನಿವಾರ ಬೆಳಗಿನ ಜಾವ ಮೃತಪಟ್ಟಿದ್ದಾರೆ. ಮತ್ತೊಂದೆಡೆ, ಕೊರೊನಾ ವಿರುದ್ದ ಸೌದಿಯಲ್ಲಿ ಸಮರ ಸಾರಲಾಗಿದ್ದು. ದೇಶಾದ್ಯಂತ ೨,೩೭೦ ಪ್ರಕರಣಗಳು ವರದಿಯಾಗಿದ್ದು, ೨೯ ಮಂದಿ ಸಾವನ್ನಪ್ಪಿದ್ದಾರೆ.